ಬಂಗಾರಪೇಟೆ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ರಾತ್ರಿ ವೇಳೆಯಲ್ಲಿ ಲಕ್ಷಾಂತರ ರೂ.ಆದಾಯ ತರುವ ಟೊಮೆಟೋ ತೋಟಕ್ಕೆ ಕಳೆನಾಶಕ ಸಿಂಪಡಣೆ ಮಾಡಿರುವ ಘಟನೆ ಚಿಕ್ಕ ಎಳೇಸಂದ್ರ ಗ್ರಾಮದಲ್ಲಿ ನಡೆದಿದೆ.
9000 ಸಸಿ ನಾಟಿ: ತಾಲೂಕಿನ ಬೂದಿ ಕೋಟೆ ಹೋಬಳಿಯ ಚಿಕ್ಕ ಎಳೆಸಂದ್ರ ಗ್ರಾಮದ ರೈತ ಅರ್ಜುನಪ್ಪ ಎಂಬುವವರಿಗೆ ಸೇರಿದ ತೋಟಕ್ಕೆ ಕಿಡಿಗೇಡಿಗಳು ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ರೈತ ಒಂದೂವರೆ ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆಗೆ 4 ಲಕ್ಷ ಸಾಲ ಮಾಡಿ ಬಂಡವಾಳದೊಂದಿಗೆ 9000 ಸಸಿ ನಾಟಿ ಮಾಡಿದ್ದರು. ಬೆಳೆ ಸಮೃದ್ಧವಾಗಿ ಫಸಲುಬಂದು,ಕೊಯ್ಲಿಗೂ ಸಹ ಬಂದಿತ್ತು. ಒಮ್ಮೆ ಮಾತ್ರ 80 ಬಾಕ್ಸ್ ಟೊಮೆಟೋವನ್ನು ಕೋಲಾರದ ಮಾರುಕಟ್ಟೆಗೆ ಹಾಕಲಾಗಿತ್ತು. ಸುಮಾರು 800 ರೂ.ಗೆ ಒಂದು ಬಾಕ್ಸ್ ಮಾರಾಟವಾಗಿತ್ತು. ಮಂಗಳವಾರ ರಾತ್ರಿಕಳೆ ನಾಶಕ ಸಿಂಪಡಣೆ ಮಾಡಿರುವುದರಿಂದ ತೋಟವು ಒಣಗಿ ನಾಶವಾಗಿದ್ದು, ಸುಮಾರು 50 ಲಕ್ಷ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಟೊಮೆಟೋಗೆ ಉತ್ತಮ ಬೆಲೆ ಇರುವ ಕಾರಣ ಬೆಳೆಯಿಂದ ಲಕ್ಷಾಂತರ ರೂ. ಆದಾಯ ಬಂದು ಸಾಲದ ಜೊತೆ ಆರ್ಥಿಕವಾಗಿ ಸಬಲರಾಗುವ ನಿರೀಕ್ಷೆಯಲ್ಲಿದ್ದರು ರೈತ ಅರ್ಜುನಪ್ಪ. ಇದನ್ನು ಸಹಿಸದ ದುಷ್ಕರ್ಮಿಗಳು ತೋಟಕ್ಕೆ ಕಳೆ ನಾಶಕ ಸಿಂಪಡಣೆ ಮಾಡಿದ್ದಾರೆ.
ಸಾಲ ಮಾಡಿ ಟೊಮೆಟೋ ಬೆಳೆ ಬೆಳೆಯಲಾಗಿದ್ದು, ಉತ್ತಮ ಫಸಲು ಬಂದಿತ್ತು.ಕಿಡಿಗೇಡಿಗಳು ಬೆಳೆಗೆಕಳೆನಾಶಕ ಸಿಂಪಡಣೆ ಮಾಡಿರುವ ಕಾರಣ ಬೆಳೆ ಸಂಪೂರ್ಣ ಸುಟ್ಟುಕರಕಲಾಗಿದೆ. ತೋಟಗಾರಿಕೆ ಇಲಾಖೆಯವರನ್ನು ಸಂಪರ್ಕಿಸಿದರೆ ಏನೂ ಮಾಡಲು ಸಾಧ್ಯವಿಲ್ಲ, ಪರಿಹಾರ ನೀಡಲು ಅವಕಾಶವಿಲ್ಲ ಎಂದು ಹೇಳುತ್ತಿರುವುದರಿಂದ ಮಾಡಿದ ಸಾಲ ತೀರಿಸಲು ದಿಕ್ಕು ತೋಚದಂತಾಗಿದೆ.
– ಅರ್ಜುನಪ್ಪ, ನೊಂದ ರೈತ, ಎಳೇಸಂದ್ರ ಗ್ರಾಮ