ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಶನಿವಾರ ಅಂತಿಮವಾಗಿದೆ. ಮುನಿಯಪ್ಪ- ರಮೇಶ್ ಕುಮಾರ್ ಬಣವನ್ನು ಹೊರತುಪಡಿಸಿ ಕೆ.ವಿ ಗೌತಮ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಇದರೊಂದಿಗೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವುದು ಕೋಲಾರ ವಿಚಾರದಲ್ಲಿ ನಿಜವಾಗಿದೆ.
ಕರ್ನಾಟಕದಿಂದ ಲೋಕಸಭೆಗೆ ಬಾಕಿಯಿದ್ದ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಶುಕ್ರವಾರವೇ ಕಾಂಗ್ರೆಸ್ ಪ್ರಕಟಿಸಿತ್ತು. ಆದರೆ ಕೋಲಾರವೇ ಕಗ್ಗಂಟಾಗಿತ್ತು.
ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಸೇರಿದ ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಗೌತಮ್ ಅವರಿಗೆ ಕೋಲಾರ ಟಿಕೆಟ್ ಸಿಕ್ಕಿದೆ. ಇಂದು ಅಧಿಕೃತವಾಗಿ ಘೋಷಣೆಯಾಗಿದೆ.
ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಮಾಜಿ ಸಚಿವ ಕೆ.ಆರ್ ರಮೇಶ್ ಕುಮಾರ್ ಬಣಗಳ ನಡುವಿನ ಹಗ್ಗಜಗ್ಗಾಟಕ್ಕೆ ಕಾಂಗ್ರೆಸ್ ಈ ಮೂಲಕ ಉತ್ತರ ಕಂಡುಕೊಂಡಿದೆ.
ಮುನಿಯಪ್ಪ ವಿರೋಧಿ ಬಣದ ರಾಜೀನಾಮೆ ಪ್ರಹಸನ, ಅದಕ್ಕೂ ಮುನ್ನ ನಡೆದ ಹಲವು ಪ್ರಸಂಗಗಳನ್ನು ಮನಗಂಡು ಸ್ವತಃ ಹೈಕಮಾಂಡ್ ಎರಡೂ ಬಣಗಳಿಂದ ಹೊರತಾದ ವ್ಯಕ್ತಿಯ ಹೆಸರು ಶಿಫಾರಸು ಮಾಡುವಂತೆ ರಾಜ್ಯ ನಾಯಕರಿಗೆ ಸೂಚಿಸಿತ್ತು. ಅದರಂತೆ ಕೆ.ವಿ ಗೌತಮ್ ಅವರು ಟಿಕೆಟ್ ಪಡೆದುಕೊಂಡಿದ್ದಾರೆ.