ಬಾಸ್ಕೆಟ್‌ಬಾಲ್‌ಗೂ ಕೋಲಾರಕ್ಕೂ ಅವಿನಾಭಾವ ಸಂಬಂಧ. ಕೋಲಾರ ಮತ್ತು ಗೌರಿಬಿದನೂರು ತಾಲೂಕು ಕೇಂದ್ರಗಳಲ್ಲಿ 1950 ರ ದಶಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಾಸ್ಕೆಟ್‌ಬಾಲ್ ಕ್ರೀಡೆಯನ್ನು ಆಸಕ್ತರು ಆರಂಭಿಸಿದ್ದರು, ಆನಂತರ ಎಂಬತ್ತರ ದಶಕದಲ್ಲಿ ಉತ್ತುಂಗಕ್ಕೇರಿ ಹಲವಾರು ಖ್ಯಾತನಾಮರನ್ನು ದೇಶ ಮತ್ತು ರಾಜ್ಯಕ್ಕೆ ಕೊಡುಗೆಯಾಗಿ ನೀಡಿತ್ತು.
ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯಡಿ ಕೋಲಾರ ಜಿಲ್ಲೆಯ ಕ್ರೀಡೆಯಾಗಿ ಆಯ್ಕೆಯಾಗಿದೆ. ರಾಜ್ಯದ ಬಹುತೇಕ ಪ್ರಬಲ ಎಚ್.ಎ.ಎಲ್, ವಿಜಯಬ್ಯಾಂಕ್,ರೇಲ್ವೇಸ್ ಮತ್ತಿತರ ತಂಡಗಳಲ್ಲಿಯೂ ಕೋಲಾರ ಆಟಗಾರರದ್ದೇ ಪ್ರಾಬಲ್ಯ ಎನ್ನುವಂತಾಗಿತ್ತು. ರಾಜ್ಯ ಮತ್ತು ದೇಶದ ಯಾವುದೇ ಮೂಲೆಯಲ್ಲಿ ಬಾಸ್ಕೆಟ್‌ಬಾಲ್ ಟೂರ್ನಿ ನಡೆಯುತ್ತದೆ ಎಂದರೆ ಕೋಲಾರ ತಂಡಗಳಿಗೆ ಆಹ್ವಾನ ಇದ್ದೇ ಇರುತ್ತಿತ್ತು.
ಜಿಲ್ಲೆಯಲ್ಲಿ ಖೇಲೋ ಇಂಡಿಯಾದಡಿ ಬಾಸ್ಕೆಟ್ ಬಾಲ್ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಕೋಚ್ ಗುರುಪ್ರಸಾದ್‌ರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸುಮಾರು 30 ಮಂದಿಯನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ. ಕೋಲಾರ ನಗರದಲ್ಲಿ 1950 ರಲ್ಲಿಯೇ ನೇಗಿಲ ಯೋಗಿ ಹೆಸರಿನ ಬಾಸ್ಕೆಟ್‌ಬಾಲ್ ತಂಡವಿತ್ತು. ಈಗಿನ ಮಿನಿ ಕ್ರೀಡಾಂಗಣ ಜಾಗದಲ್ಲಿ ಕಲ್ಲು ಕಂಬಗಳನ್ನು ನೆಟ್ಟು ಬಾಸ್ಕೆಟ್ ತಗುಲಿಸಿ ಆಟವನ್ನು ಆಡಲಾಗುತ್ತಿತ್ತು. ನಂತರ ಇದೇ ಕೋರ್ಟ್‌ಗೆ ಡಾಂಬರು ಹಾಕಿ ಆಟವಾಡಲಾಗುತ್ತಿತ್ತು. ಮೈಸೂರು ಲ್ಯಾಂಪ್ಸ್ ಕಂಪನಿಯ ಪ್ರಾಯೋಜಕತ್ವದಲ್ಲಿ ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಕೋಲಾರದ ನೆಲದಲ್ಲಿ ಕನಕ, ವೈಎಫ್‌ಬಿಸಿ, ವೈಸಿಬಿಸಿ, ಎಬಿಸಿ ಮತ್ತಿತರ ತಂಡಗಳು ರಾಜ್ಯ ಮತ್ತು ದೇಶದಲ್ಲಿಯೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದವು. ಈ ತಂಡಗಳ ಆಟಗಾರರು ರಾಷ್ಟ್ರೀಯ ಆಟಗಾರರಾಗಿ ಹೆಸರು ಸಂಪಾದಿಸಿಕೊಂಡಿದ್ದರು. ನೂರಾರು ಮಂದಿ ಆಟಗಾರರು ಬಾಸ್ಕೆಟ್‌ಬಾಲ್ ಆಟದ ಮೂಲಕವೇ ಕ್ರೀಡಾ ಕೋಟಾದಡಿ ಸರಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡು ಜೀವನ ಕಂಡುಕೊಂಡಿದ್ದಾರೆ. ಪ್ರಸ್ತುತ ಕೋಲಾರದಲ್ಲಿ ವೈಎಫ್‌ಬಿಸಿ ಮತ್ತು ಕನಕ ತಂಡಗಳಿದ್ದು, ಯುವ ಪೀಳಿಗೆಗೆ ಬಾಸ್ಕೆಟ್‌ಬಾಲ್ ಕಲಿಸುತ್ತಾ ಕೋಲಾರದ ಪರಂಪರೆಯನ್ನು ಮುಂದುವರೆಸುತ್ತಿವೆ.
ಆಟಗಾರರು
ಸಿ.ಎಂ.ನಾಗರಾಜ್, ಪೀಟರ್ ಬೊತೆಲೋ, ಬಿ.ಗೋಪಾಲ್, ದೇವಕುಮಾರ್, ಎನ್.ಗೋವಿಂದರಾಜು, ಎನ್.ಸುಖದೇವ್, ಆದಿನಾರಾಯಣ, ಗೋಪಿ, ಚಿನ್ನಚಾಮಲ್‌ರಾಜು, ಪಿ.ಚಂದ್ರಪ್ರಕಾಶ್, ಕೆ.ಸುಂದರರಾಜು, ಕೆ.ಎನ್.ಆನಂದಗೋಪಾಲ್, ರವೀಂದ್ರಸಿಂಗ್, ವಿ.ಎನ್.ವಿಶ್ವನಾಥ್, ಮುನಿಸ್ವಾಮಿ, ಸಂಜೀವಯ್ಯ,ಶ್ರೀನಿವಾಸರೆಡ್ಡಿ ಮೊದಲಾದವರು ವಿವಿ, ಮಿನಿ ಜೂನಿಯರ್, ರಾಜ್ಯ ಮತ್ತು ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿದ್ದವರಾಗಿದ್ದಾರೆ.
1950 ರಲ್ಲಿ ಆರಂಭವಾದ ಬಾಸ್ಕೆಟ್‌ಬಾಲ್ ಇಂದಿಗೂ ಜನಪ್ರಿಯ ಕ್ರೀಡೆ. ಅದರ ವೈಭವ ಉಳಿಸಲು ಖೇಲೋ ಇಂಡಿಯಾ ಯೋಜನೆಯಡಿ ಬಾಸ್ಕೆಟ್‌ಬಾಲ್ ತರಬೇತಿ ನೀಡಲಾಗುತ್ತಿದೆ.
ಅಂಚೆ ಅಶ್ವತ್ಥ್, ಹಿರಿಯ ಆಟಗಾರ, ಕೋಚ್
ಕೋಲಾರ ಜಿಲ್ಲೆಯಲ್ಲಿ ಖೇಲೋ ಇಂಡಿಯಾದಡಿ ಬಾಸ್ಕೆಟ್‌ಬಾಲ್ ಆಯ್ಕೆ ಮಾಡಿಕೊಳ್ಳಲಾಗಿದೆ. ಸುಮಾರು 30 ಮಂದಿ ಆಯ್ಕೆಯಾಗಿದ್ದಾರೆ.
ಆರ್. ಗೀತಾ, ಅಧಿಕಾರಿ, ಕ್ರೀಡಾ ಇಲಾಖೆ
ಕೆ.ಎಸ್. ಗಣೇಶ್