ಪುನರ್ಪುಳಿ ಸಾಮಾನ್ಯವಾಗಿ ರುಚಿಯಲ್ಲಿ ಹುಳಿ ಮತ್ತು ಸ್ವಲ್ಪ ಸಿಹಿಯಾಗಿರುತ್ತದೆ. ಇದರಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ಇದನ್ನು ಮುರುಗಲು, ಪುನರ್ಪುಳಿ, ಕೋಕಂ ಸೇರಿದಂತೆ ಇನ್ನಿತರ ಹೆಸರುಗಳಿಂದಲೂ ಕರೆಯುತ್ತಾರೆ. ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಹೆಚ್ಚು ಕಾಣಸಿಗುತ್ತದೆ ಈ ಹಣ್ಣು. ಇದರ ಎಲೆ, ಬೀಜ ಮತ್ತು ಸಿಪ್ಪೆಯಲ್ಲೂ ಔಷಧೀಯ ಗುಣಗಳಿವೆ.
ಪುನರ್ಪುಳಿಯು ಅಧಿಕ ಪೋಷಕಾಂಶಗಳನ್ನು ಒಳಗೊಂಡ ಹಣ್ಣಾಗಿದೆ. ಇದರಲ್ಲಿ ವಿಟಮಿನ್ ಬಿ, ವಿಟಮಿನ್ ಬಿ3, ಸಿ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಮುಂತಾದ ಖನಿಜಾಂಶಗಳನ್ನು ಹೊಂದಿದೆ.
ಆಯುರ್ವೇದಲ್ಲಿ ಪುನರ್ಪುಳಿಯನ್ನು ಪಿತ್ತಹರ ಎಂದು ಹೇಳುತ್ತಾರೆ. ಅಂದರೆ ಪಿತ್ತದ ಸಮಸ್ಯೆ ಇದ್ದವರು ಸೇವಿಸಿದರೆ ಆ ಸಂಕಟದಿಂದ ಪಾರಾಗಬಹುದು.
ಪುನರ್ಪುಳಿಯಿಂದ ಮಾಡುವ ಜ್ಯೂಸ್ ಎಷ್ಟು ರುಚಿಕರವಾಗಿರುತ್ತದೆ. ಅಷ್ಟೇ ರುಚಿ ಪುನರ್ಪುಳಿಯ ಸಿಪ್ಪೆಯನ್ನು ಒಣಗಿಸಿ ಮಾಡುವಂತಹ ಸಾರುಕೂಡ ಅಷ್ಟೇ ರುಚಿಕರ.
Related Articles
ಹಾಗಾದರೆ ಪುನರ್ಪುಳಿಯ 3 ಬಗೆಯ ಸಾರನ್ನು ಹೇಗೆ ತಯಾರಿಸುವುದು ನೋಡೋಣ ಬನ್ನಿ…..
ಪುನರ್ಪುಳಿ ಸಿಪ್ಪೆಯ ರಸಂ-1 ಬೇಕಾಗುವ ಸಾಮಗ್ರಿಗಳು
ಪುನರ್ಪುಳಿ ಸಿಪ್ಪೆ-10 ರಿಂದ 15, ಹಸಿಮೆಣಸು-3, ಬೆಲ್ಲ-1ಚಮಚ,ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ತೆಂಗಿನ ಎಣ್ಣೆ-2ಚಮಚ, ಸಾಸಿವೆ, ಜೀರಿಗೆ, ಒಣಮೆಣಸು 2, ಕರಿಬೇವು-ಸ್ವಲ್ಪ.
ತಯಾರಿಸುವ ವಿಧಾನ
ಪುನರ್ಪುಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಒಂದು ಕಪ್ ನೀರನ್ನು ಹಾಕಿ ಸುಮಾರು 1ಗಂಟೆಗಳ ಕಾಲ ನೆನೆ ಹಾಕಿ ನಂತರ ಸಿಪ್ಪೆಯನ್ನು ಚೆನ್ನಾಗಿ ಕಿವುಚಿ ರಸ ತೆಗೆದು ಇಟ್ಟುಕೊಳ್ಳಿ. ನಂತರ ಪುನರ್ಪುಳಿಯ ರಸವನ್ನು ಕುದಿಯಲು ಇಡಿ ಅದಕ್ಕೆ ಒಂದು ಕಪ್ ನೀರು ಹಾಕಿ ಹಸಿಮೆಣಸು, ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸುಮಾರು 10 ನಿಮಿಷಗಳ ಕಾಲ ಕುದಿಯಲು ಬಿಡಿ. ತದನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಒಣಮೆಣಸು ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬಿಸಿ-ಬಿಸಿಯಾದ ಪುನರ್ಪುಳಿ ರಸಂ ಸವಿಯಲು ಸಿದ್ಧ.
ಪುನರ್ಪುಳಿ ಸಿಪ್ಪೆಯ ರಸಂ-2 ಬೇಕಾಗುವ ಸಾಮಗ್ರಿಗಳು
ಪುನರ್ಪುಳಿ ಸಿಪ್ಪೆ-10 ರಿಂದ 15, ಹಸಿಮೆಣಸು-2, ಬೆಲ್ಲ-1ಚಮಚ,ಶುಂಠಿ-ಸ್ವಲ್ಪ, ತೆಂಗಿನ ಹಾಲು-ಅರ್ಧಕಪ್,ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ತೆಂಗಿನ ಎಣ್ಣೆ-3ಚಮಚ,ಜೀರಿಗೆ-ಅರ್ಧ ಚಮಚ, ಬೆಳ್ಳುಳ್ಳಿ -3 ಎಸಳು, ಒಣಮೆಣಸು 2, ಕರಿಬೇವು-ಸ್ವಲ್ಪ.
ತಯಾರಿಸುವ ವಿಧಾನ
ಪುನರ್ಪುಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಒಂದು ಕಪ್ ನೀರನ್ನು ಹಾಕಿ ಸುಮಾರು 1ಗಂಟೆಗಳ ಕಾಲ ನೆನೆ ಹಾಕಿ ನಂತರ ಸಿಪ್ಪೆಯನ್ನು ಚೆನ್ನಾಗಿ ಕಿವುಚಿ ರಸ ತೆಗೆದು ಇಟ್ಟುಕೊಳ್ಳಿ. ನಂತರ ಪುನರ್ಪುಳಿಯ ರಸವನ್ನು ಕುದಿಯಲು ಇಡಿ ಅದಕ್ಕೆ ಒಂದು ಕಪ್ ನೀರು ಹಾಕಿ ಹಸಿಮೆಣಸು, ಬೆಲ್ಲ ,ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3 ರಿಂದ 5 ನಿಮಿಷಗಳ ಚೆನ್ನಾಗಿ ಕುದಿಸಿರಿ.ನಂತರ ಅದಕ್ಕೆ ತೆಂಗಿನ ಹಾಲು ಸೇರಿಸಿ ಸ್ವಲ್ಪ ಹೊತ್ತು ಕುದಿಸಿರಿ.ತದನಂತರ ಎಣ್ಣೆಯಲ್ಲಿ ಜೀರಿಗೆ,ಬೆಳ್ಳುಳ್ಳಿ,ಕರಿಬೇವು ಮತ್ತು ಒಣಮೆಣಸು ಹಾಕಿ ಒಗ್ಗರಣೆ ಕೊಟ್ಟರೆ ರುಚಿಕರವಾದ ಪುನರ್ಪುಳಿ ರಸಂ ರೆಡಿ.
ಪುನರ್ಪುಳಿ ಸಿಪ್ಪೆಯ ರಸಂ-3 ಬೇಕಾಗುವ ಸಾಮಗ್ರಿಗಳು
ಪುನರ್ಪುಳಿ ಸಿಪ್ಪೆ-10 ರಿಂದ 15,ಬೆಲ್ಲ-1ಚಮಚ,ಕೊತ್ತಂಬರಿ-2ಚಮಚ,ತೆಂಗಿನ ತುರಿ-4ಚಮಚ,ಹಸಿಮೆಣಸು-2, ಜೀರಿಗೆ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಹಿಂದಿನ ಕ್ರಮದಂತೆ ನೆನೆಸಿಟ್ಟ ಪುನರ್ಪುಳಿಯ ರಸವನ್ನು ಕುದಿಯಲು ಇಡಿ ಅದಕ್ಕೆ ಒಂದು ಕಪ್ ನೀರು ಸೇರಿಸಿ ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸುಮಾರು 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿರಿ.ನಂತರ ಮಿಕ್ಸ್ ಜಾರಿಗೆ ತೆಂಗಿನ ತುರಿ, ಕೊತ್ತಂಬರಿ, ಹಸಿಮೆಣಸು, ಜೀರಿಗೆ ಹಾಕಿ ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿರಿ. ತದನಂತರ ರುಬ್ಬಿದ ಮಸಾಲೆಯನ್ನು ಸಾರಿಗೆ ಸೇರಿಸಿ ಚೆನ್ನಾಗಿ ಕಲಸಿ 3ರಿಂದ 5 ನಿಮಿಷಗಳ ಕಾಲ ಕುದಿಯಲು ಬಿಡಿ.ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಒಣಮೆಣಸು ಮತ್ತು ಕರಿಬೇವಿನ ಎಸಳು ಹಾಕಿ ಒಗ್ಗರಣೆ ಕೊಡಿ.ಸ್ವಾದಿಷ್ಟಕರವಾದ ಪುನರ್ಪುಳಿ ಸಾರು ಸವಿಯಿರಿ.
-ಶ್ರೀರಾಮ್ ಜಿ.ನಾಯಕ್