ಬೆಳ್ತಂಗಡಿ: ಕಳೆದ ಭಾರೀ ಬೆಳ್ತಂಗಡಿ ತಾಲೂಕಿನ ಮತದಾರರು ನೀಡಿದ ಒಂದೊಂದು ಮತವೂ ಬೆಳ್ತಂಗಡಿ ತಾಲೂಕಿನಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿಯನ್ನು ಬರೆದಿದೆ, ಈ ಬಾರಿಯೂ ಮತ್ತೆ ಅವಕಾಶ ನೀಡಿ ಹರಸಿದಲ್ಲಿ ಮತ್ತಷ್ಟು ಅನುದಾನವನ್ನು ತಂದು ದೇಶದಲ್ಲೇ ಬೆಳ್ತಂಗಡಿಯನ್ನು ಗುರುತಿಸುವಂತೆ ಮಾಡುವ ಸಂಕಲ್ಪವನ್ನು ಹೊಂದಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಹೇಳಿದರು.
ಅವರು ಮಂಗಳವಾರ ಕೊಕ್ಕಡದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ತಾಲೂಕಿನಾದ್ಯಂತ ಗ್ರಾಮೀಣ ಭಾಗದ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಿ ಕಂಗೊಳಿಸುವಂತೆ ಮಾಡಲಾಗಿದೆ. ಕೃಷಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ಕಿಂಡಿ ಅಣೆಕಟ್ಟು ಸಹಿತ ಸೇತುವೆಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈ ಬಾರಿಯೂ ನಿಮ್ಮ ಆಶೀರ್ವಾದ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಕೊಕ್ಕಡದ ಕಾಂಗ್ರೆಸ್ ಮುಖಂಡರಾದ ಶಾಜನ್ ಟಿ.ಟಿ. ಕಾಂಜಾಲ್, ಮತ್ತು ಲಕ್ಷ್ಮಣ್ ಜಿ.ಎಸ್. ಅವರು ಬಿಜೆಪಿ ಸೇರ್ಪಡೆಗೊಂಡರು. ಕೊಕ್ಕಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಕಳೆಂಜ ಗ್ರಾಮದ ಕೃಷ್ಣ ಕುಮಾರ್ ಕಾಯರ್ತಡ್ಕ, ಗುರುನಾಥ್ ಕಾರ್ಯತಡ್ಕ, ಪಟ್ರಮೆ ಗ್ರಾಮದ ಲಿಯೋ ಪಟ್ಟೂರು ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಈ ವೇಳೆ ಶಾಸಕ ಹರೀಶ್ ಪೂಂಜ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್ ಅವರು ಪಕ್ಷದ ಧ್ವಜ ನೀಡುವ ಮೂಲಕ ಕಾಂಗ್ರೆಸ್ ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡರು.
ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ್ರಭಾರಿ ಯತೀಶ್ ಆರ್ವಾರ್, ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಮಂಡಲ ಕಾರ್ಯದರ್ಶಿ ಗಳಾದ ಶ್ರೀನಿವಾಸ ರಾವ್, ಗಣೇಶ್ ನಾವೂರು, ಧರ್ಮಸ್ಥಳ ಮಹಾಶಕ್ತಿಕೇಂದ್ರ ಅಧ್ಯಕ್ಷ ಯೋಗೀಶ್ ಆಲಂಬಿಲ, ಮುಖಂಡರಾದ ಚಂದನ್ ಕಾಮತ್, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಪೂಜಾರಿ ಕಾಪಿನಡ್ಕ ಹಾಗೂ ಅನೀಶ್ ಪೂಜಾರಿ ವೇಣೂರು, ಮಂಡಲ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳ್ತಂಗಡಿಯ ಅಭಿವೃದ್ಧಿ ಕಂಡು ಬಿಜೆಪಿಗೆ ಸೇರ್ಪಡೆ
ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಹಲವಾರು ಅಭಿವೃದ್ಧಿ ಕಾರ್ಯಗಳಾದ ರಸ್ತೆ, ನೀರು, ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ, ತಾಲೂಕಿನ ವಿವಿಧಡೆ ಸಮುದಾಯ ಭವನ, ರಿಕ್ಷಾ ತಂಗುದಾಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ ಶಾಸಕ ಹರೀಶ್ ಪೂಂಜ ಅವರ ಮೇಲಿನ ಅಭಿಮಾನ, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಮಂದಿ ಕಾಂಗ್ರೆಸ್ ಮುಖಂಡರು, ಪಂಚಾಯತ್ ಸದಸ್ಯರು, ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡು ಹರೀಶ್ ಪೂಂಜ ಅವರ ಗೆಲುವಿಗಾಗಿ ಶ್ರಮಿಸಲು ಪಣತೊಟ್ಟಿದ್ದಾರೆ.