Advertisement

ಕತ್ತಲೆ ಭಾಗ್ಯ ಕೊಡ್ತಿದೆ ಕಾಂಗ್ರೆಸ್‌ ಸರ್ಕಾರ: ಬಿಜೆಪಿ ಆರೋಪ

01:06 PM Jan 24, 2017 | Team Udayavani |

ಬಾಗಲಕೋಟೆ: ಹೊತ್ತು ಗೊತ್ತಿಲ್ಲದೇ ವಿದ್ಯುತ್‌ ಕಡಿತಗೊಳಿಸುವ ಮೂಲಕ ಜನತೆಗೆ ಕತ್ತಲೆಭಾಗ್ಯವನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಲ್ಪಿಸಿದೆ ಎಂದು ಟೀಕಿಸಿದ ಬಿಜೆಪಿ ಕಾರ್ಯಕರ್ತರು, ಸೋಮವಾರ ನವನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 

Advertisement

ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ಹಾಗೂ ನಗರ ಘಟಕದ ಹಲವಾರುಮುಖಂಡರು, ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಸುಮಾರು ಅರ್ಧ  ಗಂಟೆಗೂ ಅಧಿಕ ಕಚೇರಿ ಎದುರು ಧರಣಿ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅನಿಯಮಿತ ಲೋಡ್‌ ಶೆಡ್ಡಿಂಗ್‌ ಮಾಡಲಾಗುತ್ತಿದೆ. ಬರಗಾಲದ ಈ ಸಂದರ್ಭದಲ್ಲಿ ರೈತರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸದ್ಯ ನೀರಾವರಿ ಹೊಂದಿರುವ ರೈತರಾದರೂ  ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಕೃಷಿ ಕೈಗೊಂಡಿದ್ದರು.

ಆದರೆ, ಸದ್ಯದ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳು ರೈತರಿಗೆ ವಿದ್ಯುತ್‌ ಅಭಾವ ಸೃಷ್ಟಿಸುತ್ತಿದ್ದಾರೆ.  ಇಲ್ಲಿಯವರೆಗೂ ವಿದ್ಯುತ್‌ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳುತ್ತವೆಂಬ ಆಶ್ವಾಸನೆ ನೀಡಿ ಸದ್ಯ ರೈತರಿಗೆ ವಿದ್ಯುತ್‌ ಅಭಾವ ಸೃಷ್ಟಿಸುತ್ತಿದ್ದಾರೆ. ಸರ್ಕಾರ ಹಾಡುಹಗಲೇ ಮಣ್ಣು ಎರೆಚುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಬರಗಾಲದ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ಬೆಲೆ ಇಲ್ಲದೇ ಜನ ಜಾನುವಾರುಗಳಿಗೆ ನೀರಿನ ಅವಶ್ಯಕತೆ  ಇದ್ದು, ವಿದ್ಯುತ್‌ ಇಲ್ಲದೇ ಹಾಹಾಕಾರ ಉಂಟಾಗಿದೆ. ಇದರಿಂದಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ರೈತರಿಗೆ ಆಶ್ವಾಸನೆ ನೀಡಿ ಅಧಿಕಾರ ಪಡೆದ ತಮ್ಮ  ಮಾತುಗಳನ್ನು ನೆನಪಿಸಿಕೊಂಡು ರೈತರ ಪರ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. 

Advertisement

ರೈತ ಮೋರ್ಚಾ ಅಧ್ಯಕ್ಷ ರಾಮಣ್ಣ ಹೆರಕಣ್ಣವರ, ಗ್ರಾಮೀಣ ಘಟಕದ ಅಧ್ಯಕ್ಷ ರಾಜು ಮುದೇನೂರ, ಪ್ರಧಾನ ಕಾರ್ಯದರ್ಶಿ ಸುರೇಶ ಕೊಣ್ಣೂರ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಅವರಾದಿ, ನರೇಂದ್ರ ಕುಪ್ಪಸ್ತ, ನಗರಸಭೆ ಉಪಾಧ್ಯಕ್ಷೆ ಭಾರತಿ ಕೂಡಗಿ, ಸದಸ್ಯರಾದ ಉಮಾ ಚಟ್ಟರಕಿ, ಕವಿತಾ ದಾಯಪುಲೆ, ಮುಖಂಡರಾದ ಧೂಳಪ್ಪ ಕೊಪ್ಪದ, ಮಹಾಂತೇಶ ಯಳ್ಳಿಗುತ್ತಿ, ಬಸಪ್ಪ ಯಳ್ಳಿಗುತ್ತಿ, ಕಳಕಪ್ಪ ಬಾದೋಡಗಿ, ಶೈಲಾ ಅಂಕಲಗಿ, ಭಾರತಿ ಪಾಟೀಲ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next