ಶನಿವಾರಸಂತೆ: ಸಿದ್ಧಗಂಗೆ ಮಠದ ಡಾ| ಶಿವಕುಮಾರ ಸ್ವಾಮೀಜಿ ಅವರು ಸಮಾಜದ ಉದ್ಧಾರ, ದೀನ-ದಲಿತರ ಶ್ರೇಯೋಭಿವೃದ್ಧಿ, ಶಿಕ್ಷಣ, ದಾಸೋಹ ಮುಂತಾದ ಸಮಾಜದ ಸುಧಾರಣೆಗಾಗಿ ಜನ್ಮತಾಳಿದ ಆಧುನಿಕ ಯುಗದ ಮಹಾನ್ ಸಂತರಾಗಿದ್ದಾರೆ ಎಂದು ಚಿಕ್ಕಮಗಳೂರಿನ ಸಾಹಿತಿ ಚಟ್ನಳ್ಳಿ ಮಹೇಶ್ ಅಭಿಪ್ರಾಯಪಟ್ಟರು.
ಅವರು ಸಮಿಪದ ಕೊಡ್ಲಿಪೇಟೆ ಕಲ್ಲುಮಠದ ಶಾಲಾ ಆವರಣದಲ್ಲಿ ತುಮಕೂರು ಸಿದ್ಧಗಂಗೆ ಮಠದೀಶ ಡಾ| ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನಾಚರಣೆ ಅಂಗವಾಗಿ ಮಠದ ವತಿಯಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು. ಸಿದ್ಧಗಂಗೆ ಶ್ರೀಗಳು ಆಧುನಿಕ ಸಮಾಜದ ಮಹಾನ್ ಸಮಾಜ ಸುಧಾರಕರಾಗಿದ್ದಾರೆ. ಅವರಿಗೆ 110 ವರ್ಷ ಆಗಿರುವುದು ಆಧುನಿಕ ಸಮಾಜದ ಪ್ರತಿಯೊಬ್ಬರಿಗೂ ಹೆಮ್ಮೆತರುವಂಥದ್ದು ಎಂದರು.
ಶ್ರೀಗಳ ಆದರ್ಶ, ತತ್ವ-ಸಿದ್ಧಾಂತ ಸಮಾಜ, ಶಿಕ್ಷಣದ ಪ್ರಗತಿಯ ಚಿಂತನೆ, ಆಧ್ಯಾತ್ಮಿಕ ಚಿಂತನೆ, ಮಾನವಿಯ ಮೌಲ್ಯ ಮುಂತಾದ ವಿಚಾರಧಾರೆಗಳನ್ನು ನಾವೆಲ್ಲರೂ ಕಿಂಚಿತ್ತಾದರೂ ನಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದರು. 15ನೇ ಶತಮಾನದಲ್ಲಿ ಸಾರಿದ ವಚನ ಸಾಹಿತ್ಯ ಮತ್ತು ಶರಣರ ತತ್ವ-ನಿಷ್ಠೆಗಳನ್ನು ಇಂದಿನ ಆಧುನಿಕ ಯುಗದಲ್ಲಿ ಶ್ರೀಗಳು ಅವುಗಳನ್ನು ನಮ್ಮ ಸಮಾಜಕ್ಕೆ ಸಾರಿದ್ದಾರೆ, ಶಿಕ್ಷಣ, ದಾಸೋಹ ಮುಂತಾದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅವರು ತಮ್ಮ ಜೀವನವನ್ನು ಧಾರೆ ಎರೆದಿದ್ದಾರೆ ಎಂದರು. ಪೋಷಕರು ಮಕ್ಕಳಿಗೆ ಹಿಂದಿನ ಕಾಲದಲ್ಲಿದ್ದ ಗೌರವ, ಪ್ರೀತಿ, ಸಂಸ್ಕಾರ ಮುಂತಾದ ಮೌಲ್ಯಗಳನ್ನು ಹೇಳಿಕೊಡುತ್ತಿಲ್ಲ. ಇದರಿಂದ ಇಂದಿನ ಮಕ್ಕಳು ಸಂಸ್ಕಾರವನ್ನು ಮರೆಯುತ್ತಿದ್ದಾರೆ, ಸ್ವಾತಿಕ ಸಂಸ್ಕಾರ ಇದ್ದಲ್ಲಿ ಸಮಾಜವೂ ಸಂಸ್ಕಾರಗೊಳುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಶ್ರೀಗಳಂತಹ ಮಹಾನ್ ಶರಣರ ಆದರ್ಶಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು, ಮನೆಗಳಲ್ಲಿ ಹೆತ್ತವರಿಗೆ ಮತ್ತು ಹಿರಿಯರಿಗೆ ಗೌರವಿಸುವುದನ್ನು ಹೇಳಿಕೊಡಬೇಕು, ಇದರಿಂದ ಮಾನವಿಯ ಸಂಬಂಧ ವೃದ್ಧಿಯಾಗಿ ಸಮಾಜ ಸುಭಿಕ್ಷೆಗೊಳ್ಳುತ್ತದೆ ಎಂದರು.
ವಿರಾಜಪೇಟೆ ಅರಮೇರಿಯ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 9ನೇ ಶತಮಾನದ ತರುವಾಯ ಮತ್ತೀಗ 21ನೇ ಶತಮಾನದಲ್ಲಿ ಶರಣರ ಸಮಾಜದ ಸುಧಾರಣೆ ಅಭಿವೃದ್ಧಿಯಾಗುವುದಕ್ಕೆ ಸಿದ್ಧಗಂಗೆ ಮಠಾಧೀಶ ಡಾ| ಶಿವಕುಮಾರ ಸ್ವಾಮೀಜಿ ಅವರು ಸಾಕ್ಷಿಯಾಗಿದ್ದಾರೆ ಎಂದರು. ಶ್ರೀಗಳು ಸಮಾಜದ ಉದ್ಧಾರಕ್ಕಾಗಿ ಸಲ್ಲಿಸಿರುವ ಸೇವೆ ಇನ್ನೂ 9 ಶತಮಾನ ಕಳೆದರೂ ಸಹ ನೆನಪಿನಲ್ಲಿ ಉಳಿಯುತ್ತದೆ, ಇಂತಹ ಮಹಾನ್ ಶರಣರು ತಮ್ಮ ಜೀವನವನ್ನು ತಮ್ಮ ಅನುಭವಗಳಿಗೆ ಮುಡಿಪಾಗಿಟ್ಟು ಈ ಮೂಲಕವಾಗಿ ಅವರು ಸಮಾಜ ಸೇವೆಗಾಗಿ ಧಾರೆ ಎರೆದಿದ್ದಾರೆ ಎಂದರು.
ಅವರು ಸಮಾಜದ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ದೇಶಕ್ಕೆ ಮಾದರಿಯಾಗಿದ್ದಾರೆ, ಶ್ರೀಗಳ ಆದರ್ಶ ಬದುಕಿನ ಬಗ್ಗೆಯೇ ಇಂದಿನ ವಿದ್ಯಾರ್ಥಿಗಳು ಪಿಎಚ್‌ಡಿ ಮಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಶ್ರೀಗಳ 110ನೇ ಜನ್ಮದಿನವನ್ನು ನಾವೆಲ್ಲರೂ ಆಚರಣೆ ಮಾಡುವುದ್ದರಿಂದ ಸಮಾಜಕ್ಕೆ ಸಂದೇಶ ಸಾರಿದಂತಾಗುತ್ತದೆ. ಅವರ ಜನ್ಮ ದಿನಾಚರಣೆಯಲ್ಲಿ ಕಲ್ಲುಮಠದಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರೀಗಳ ಬಗ್ಗೆ ತಿಳಿದುಕೊಂಡು ಅವರ ಗುಣಗಳಲ್ಲಿ ಕೆಲವೊಂದನ್ನು ಪಾಲನೆ ಮಾಡಿದರೆ ಬದುಕಿನಲ್ಲಿ ಸಾರ್ಥಕತೆಸಿಗುತ್ತದೆ ಎಂದರು.