ಕುಂದಾಪುರ: ಕೋಡಿ ಕಡಲತೀರದಲ್ಲಿ ಪಾದಗಳಿಗೆ ಅಂಟಿಕೊಳ್ಳುವ ಸಣ್ಣ, ಗಾಢ ಬಣ್ಣದ ಜಿಡ್ಡಿನ ಚೆಂಡುಗಳು ಕಾಣಿಸಿಕೊಂಡಿದೆ. ಈ ಹಿಂದೆಯೂ ಇಂತಹ ಪದಾರ್ಥ ಸಮುದ್ರತೀರದಲ್ಲಿತ್ತು. ಇದು ಮೀನುಗಾರರು ಹಾಗೂ ಪರಿಸರಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. ಇಂತಹ ಪದಾರ್ಥದಿಂದ ಕಡಲಾಮೆ , ಮೀನು ಸಹಿತ ಜಲಚರಗಳಿಗೆ ಮಾರಕವಾಗಿದೆ. ಪ್ರವಾಸೋದ್ಯಮದ ಮೇಲೂ ಹೊಡೆತ ಬೀಳುವ ಸಾಧ್ಯತೆಯಿದೆ.
ಏನಿದು ಟಾರ್‌ಬಾಲ್: ಸಮುದ್ರತೀರಕ್ಕೆ ಹೋದಾಗ ಈ ಟಾರ್ ಬಾಲ್ ಎಂದು ಕರೆಯಲ್ಪಡುವ ಈ ಜಿಡ್ಡಿನ ಚೆಂಡುಗಳು ಸಾಮಾನ್ಯವಾಗಿ ತೈಲ ಸೋರಿಕೆಯ ಅವಶೇಷಗಳಾಗಿವೆ. ಸಮುದ್ರದ ಮೇಲ್ಮೆ„ಯಲ್ಲಿ ಕಚ್ಚಾ ತೈಲ ತೇಲಿದಾಗ ಅದರ ಭೌತಿಕ ಗುಣಲಕ್ಷಣಗಳು ಬದಲಾಗುತ್ತವೆ. ಗಾಳಿ ಮತ್ತು ಅಲೆಗಳು ಚಾಚಿದಾಗ ಮತ್ತು ತೈಲ ತೇಪೆಗಳನ್ನು ಸಣ್ಣ ತುಂಡುಗಳಾಗಿ ಟಾರ್‌ಬಾಲ್‌ಗಳು ರೂಪುಗೊಳ್ಳುತ್ತವೆ.
ಏನು ಮಾಡಬೇಕು: ಅದು ಮೈಗೆ, ಕಾಲಿಗೆ ಮೆತ್ತಿಕೊಂಡರೆ ತುರಿಕೆ, ಕಜ್ಜಿ ಮೊದಲಾದವು ಉಂಟಾಗಬಹುದು. ಟಾರ್ ಮೆತ್ತಿಕೊಂಡರೆ ಬೇಕಿಂಗ್ ಸೋಡಾ ಪೇಸ್ಟ್ ಅನ್ನು ಮಿಶ್ರಣ ಮಾಡಿ ಚರ್ಮವನ್ನು ನಿಧಾನವಾಗಿ ಉಜ್ಜಬೇಕು. ಸೋಪ್ ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಟಾರ್ ಸಮುದ್ರತೀರದಲ್ಲಿ ಕಂಡುಬಂದರೆ ಸಮುದ್ರಕ್ಕೆ ಇಳಿಯುವ ದುಸ್ಸಾಹಸ ಮಾಡಬಾರದು.
ಪ್ರವಾಸೋದ್ಯಮಕ್ಕೆ ಆತಂಕ: ಕೋಡಿಯಲ್ಲಿ ಸಮುದ್ರದಿಂದ ಬೀಚ್‌ಗೆ ಟಾರ್‌ಬಾಲ್ ಬಂದು ರಾಶಿಯಾಗಿದ್ದು ಬೀಚ್‌ಗೆ ಹೋಗುವವರಿಗೆ ದೊಡ್ಡ ತಲೆನೋವಾಗಿದೆ. ಪಾದಗಳಿಗೆ ಎಣ್ಣೆ ಅಂಟಿಕೊಂಡಂತೆ ಅಂಟುವುದು, ಸಮುದ್ರದಲ್ಲಿ ಸ್ನಾನ ಮಾಡುವವರ ಮೈಗೆ ಅಂಟುವುದರಿಂದ ಪ್ರವಾಸಿಗರು ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ದುರ್ವಾಸನೆ. ಇದು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಬೀಚ್ ಪ್ರದೇಶಗಳನ್ನು ಒಳಗೊಂಡಂತೆ ಸಮುದ್ರ ಪರಿಸರವನ್ನು ಇದು ಕಲುಷಿತಗೊಳಿಸುತ್ತದೆ.
ಆತಂಕ: ಸಮುದ್ರತೀರದಲ್ಲಿ ರಾಶಿ ರಾಶಿ ಕಪ್ಪು ಟಾರು ತ್ಯಾಜ್ಯಬಂದು ಬಿದ್ದ ಕಾರಣ ಜಲಜೀವರಾಶಿ ಆತಂಕದಲ್ಲಿದೆ.ಸಮುದ್ರದ ನೀರಿನ ಬಣ್ಣ ಬದಲಾಗಿದೆ. ಪ್ರತೀ ಮಳೆ ಗಾಲದ ಪೂರ್ವದಲ್ಲಿ ಇಂತಹ ಟಾರು ಮಿಶ್ರಣ ಸಮುದ್ರ ನೀರಿನಲ್ಲಿ ಬೆರಕೆಯಾಗುತ್ತದೆ.
ಆತಂಕಕಾರಿ
ಟಾರ್‌ಬಾಲ್ ರಾಶಿ ಅತ್ಯಂತ ಅಪಾಯಕಾರಿ. ಸಮುದ್ರಜೀವಿಗಳ ಆರೋಗ್ಯಕ್ಕೆ ವಿಷಕರವಾದ ಈ ಪೆಟ್ರೋಲಿಯಂ ತ್ಯಾಜ್ಯದಿಂದ ಕಡಲಾಮೆ, ಮೀನುಗಳಿಗೆ ತೊಂದರೆಯಿದೆ. ಇದು ಇರುವ ಕಡೆ ನೀರೇ ವಿಷವಾಗುತ್ತದೆ. ಜೈವಿಕ ಆಹಾರ ಸರಪಣಿ ಬುಡಮೇಲಾಗುತ್ತದೆ.
-ದಿನೇಶ್ ಸಾರಂಗ
ಎಫ್ಎಸ್‌ಎಲ್ ಸ್ವಯಂಸೇವಕ