Advertisement

ಕಾರ್ತಿಕ ಮಾಸದಲ್ಲಿ ಅಲ್ಲೋಲ-ಕಲ್ಲೋಲ

10:21 AM Oct 06, 2022 | Team Udayavani |

ಧಾರವಾಡ: ಕಾರ್ತಿಕ ಮಾಸದಲ್ಲಿ ಪ್ರಕೃತಿಯಲ್ಲಿ ಅಲ್ಲೋಲ-ಕಲ್ಲೋಲ ಆಗಲಿದ್ದು, ಈಗಾಗಲೇ ಸಾಕಷ್ಟು ಮಳೆಯಾಗಿದ್ದರೂ ಮುಂದಿನ ದಿನಗಳಲ್ಲಿ ಇನ್ನೂ ಮಳೆಯಾಗುವ ಲಕ್ಷಣವಿದೆ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರಯೋಗೀಂದ್ರ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆಯೂ ಮಳೆಯ ಲಕ್ಷಣವಿದ್ದು, ಕಾರ್ತಿಕ ಮಾಸದಲ್ಲಿ ಜನರಿಗೆ ತುಸು ಹೆಚ್ಚು ತೊಂದರೆ ಆಗುವ ಸಾಧ್ಯತೆಗಳಿವೆ. ಮಳೆ, ರೋಗ, ಭೂಮಿಯಿಂದ ತೊಂದರೆಯಾಗುವ ಲಕ್ಷಣ ಇದೆ. ಇದಲ್ಲದೆ ರಾಜ್ಯಕ್ಕೆ ಒಂದು ಅವಘಡ ಆಗಲಿದೆ. ಭೂಮಿಯಲ್ಲಿ ಇರುವ ವಿಷಜಂತು, ಪ್ರಾಣಿಗಳು ಹೊರಬಂದು ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ. ಪ್ರಕೃತಿ ಅಲ್ಲೋಲ, ಕಲ್ಲೋಲ ಆಗುವ ಪ್ರಸಂಗ ಹೆಚ್ಚಿದೆ. ಮಳೆ, ಗಾಳಿ, ಗುಡುಗು, ಜನರಲ್ಲಿ ಅಶಾಂತಿ, ಭೂಮಿ ನಡುಗುವುದು, ಕುಸಿಯುವುದರ ಕುರಿತು ಈ ಹಿಂದೆಯೇ ಹೇಳಿದ್ದೆ. ಮುಂದೆಯೂ ಅದೇ ಪರಿಸ್ಥಿತಿ ಎದುರಾಗಲಿದೆ. ಕಾಡಿನಿಂದ ನಾಡಿನತ್ತ ಪ್ರಾಣಿಗಳು ಬರುತ್ತವೆ. ಈ ಸಂವತ್ಸರದ ಕೊನೆಯವರೆಗೂ ಈ ತೊಂದರೆ ಇದೆ. ಬೆಂಕಿಯಿಂದ ಹೆಚ್ಚು ಸಮಸ್ಯೆ ಇದ್ದು, ಅಪಮೃತ್ಯು ಹೆಚ್ಚಾಗಲಿವೆ. ಒಂದೆಡೆ ಪ್ರಕೃತಿ ವಿಕೋಪ ಇನ್ನೊಂದೆಡೆ ಮತಾಂಧತೆ ಹೆಚ್ಚಾಗಿ ಸಮಾಜದಲ್ಲಿ ಅಶಾಂತಿ, ಕಲಹಗಳು ನಡೆಯಲಿವೆ ಎಂದರು.

ಈ ಶುಭನಾಮ ಸಂವತ್ಸರ ಅಶುಭವನ್ನು ಕೊಟ್ಟು ಹೋಗುತ್ತದೆ. ಇದು ಶುಭ ಆಗಲ್ಲ. ಗುಡ್ಡಗಳ ಕುಸಿತ, ಭೂಕಂಪ ಹೆಚ್ಚಾಗುವ ಲಕ್ಷಣ ಇದೆ. ಪ್ರಾಣಿಗಳು, ವಿಷಜಂತುಗಳಿಂದ ನೋವಾಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗುವುದು ಒಳ್ಳೆಯದು. ಯುಗಾದಿ ಕೊನೆವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ. ಪಾರ್ಶ್ವವಾಯು, ಹೃದಯಾಘಾತದಿಂದ ಸಾವು ನೋವು ಸಂಭವಿಸುತ್ತವೆ. ಮುಂದಿನ ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿವೆ ಎಂದರು.

ಇನ್ನೊಂದು ವರ್ಷದಲ್ಲಿ ಕೋವಿಡ್‌ ವೈರಾಣು ಹೋಗುತ್ತದೆ. ಹೋಗುವಾಗ ವಿಪರೀತ ಕ್ಷಾಮ, ದುಃಖ ಕೊಡುತ್ತದೆ. ಕುಡಿಯಲು ನೀರು ಇಲ್ಲದಂತೆ ಮಾಡುತ್ತದೆ. ಜಗತ್ತಿನ ಇತಿಹಾಸದಲ್ಲೇ ಇಂತಹ ಕಾಯಿಲೆ ಬಂದಿಲ್ಲ. ಕಷ್ಟ ಬಂದಾಗ ದೇವರನ್ನು ನೆನಸಿಕೊಳ್ಳುತ್ತಾರೆ. ಮಠ-ಮಂದಿರಕ್ಕೆ ಹೋಗುತ್ತಾರೆ. ಆದರೆ ಮಠ, ಮಂದಿರಕ್ಕೂ ಕೋವಿಡ್‌ ಬಂತು. ಇದು ಬರುವ ಜನವರಿ ನಂತರ ಮತ್ತೂಂದು ರೂಪದ ಲಕ್ಷಣ ತರುತ್ತದೆ. ಆದರೂ ಹೋಗುವಾಗ ಬಹಳ ಕಷ್ಟ ಕೊಡುತ್ತದೆ.  -ಕೋಡಿಮಠ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next