Advertisement

ಬಿಜೆಪಿ ಸರ್ಕಾರದ ತೀರ್ಮಾನದಲ್ಲಿ ಕಾಂಗ್ರೆಸ್‌ ನೆರಳು : ಕೋಡಿಹಳ್ಳಿ ಟೀಕೆ

07:45 PM Mar 21, 2021 | Team Udayavani |

ಚಿತ್ರದುರ್ಗ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಹಲವು ತೀರ್ಮಾನಗಳಲ್ಲಿ ಕಾಂಗ್ರೆಸ್‌ ನೆರಳಿದೆ. ಜಾಗತೀಕರಣ, ಜಿಎಸ್‌ಟಿ ಮತ್ತಿತರೆ ಕಾಯ್ದೆಗಳು ಕಾಂಗ್ರೆಸ್‌ ಅವ ಧಿಯಲ್ಲೇ ರೂಪುಗೊಂಡಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಟೀಕಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಈಗ ರೈತ ಚಳವಳಿ ಬೆಂಬಲಿಸುವ ನಾಟಕವಾಡಿದರೆ ಸಾಲದು. ಕಾಯ್ದೆಗಳ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ರೈತ ವಿರೋಧಿ  ಕಾಯ್ದೆಗಳನ್ನು ರೂಪಿಸಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಇದರ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ದೇಶಕ್ಕೆ ವಿಸ್ತರಣೆಯಾಗಲಿದೆ.

ಕರ್ನಾಟಕದಲ್ಲಿಯೂ ರೈತರ ಧ್ವನಿ ಮೊಳಗುತ್ತಿದೆ ಎಂದರು. ದೇಶವನ್ನು ಖಾಸಗಿ ಕಂಪನಿಗಳ ಆಡಳಿತಕ್ಕೆ ಒಪ್ಪಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನ ಸ್ವಾತಂತ್ರÂ ಹರಣದ ಪ್ರಯತ್ನ. ಇದರ ವಿರುದ್ಧ ರೈತರು ನಡೆಸುತ್ತಿರುವ ಚಳವಳಿ ಎರಡನೇ ಸ್ವಾತಂತ್ರÂ ಹೋರಾಟ ಎಂದು ವಿಶ್ಲೇಷಿಸಿದರು.

ಸರ್ಕಾರಿ ವಲಯದ ಉದ್ದಿಮೆಗಳನ್ನು ಖಾಸಗಿ ಕಂಪನಿಗಳ ಮಾಲೀಕತ್ವಕ್ಕೆ ಒಪ್ಪಿಸಲು ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ. ಬಹುರಾಷ್ಟ್ರೀಯ ಕಂಪನಿಗಳಿಗೂ ಹಾಗೂ ನೂರಾರು ವರ್ಷ ದೇಶವನ್ನು ಆಳಿದ ಈಸ್ಟ್‌ ಇಂಡಿಯಾ ಕಂಪನಿಗೂ ವ್ಯತ್ಯಾಸವಿಲ್ಲ ಎಂದು ಹೇಳಿದರು. ದೇಶ ಅಪಾಯದ ಹಾದಿಯಲ್ಲಿ ಸಾಗುತ್ತಿದೆ. ಮಂಗಳೂರಿನ ವಿಮಾನ ನಿಲ್ದಾಣವನ್ನು ಅದಾನಿಗೆ ಅಡ ಇಡಲಾಗಿದೆ. ಅಂಬಾನಿಯ ರೈಲುಗಳು ಸಂಚಾರ ಆರಂಭಿಸಿವೆ. ಎಲ್‌ಐಸಿ, ಬ್ಯಾಂಕ್‌, ಬಸ್‌ ಸೇರಿ ಎಲ್ಲ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ರೈತ ಚಳವಳಿ ದೇಶಕ್ಕೆ ಹೊಸ ದಿಕ್ಕು ತೋರಲಿದೆ ಎಂದು ಕೋಡಿಹಳ್ಳಿ ಪ್ರತಿಪಾದಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಪ್ಪು ತೀರ್ಮಾನಗಳನ್ನು ಕೈಗೊಳ್ಳುತ್ತಿದೆ. ಇಡೀ ದೇಶವನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಬಿಜೆಪಿ, ಕೃಷಿ ವಲಯಕ್ಕೆ ಮೊದಲು ಕೈಹಾಕಿದೆ. ಮೂರು ಕೃಷಿ ಕಾಯ್ದೆಗಳನ್ನು ಕಾರ್ಪೋರೆಟ್‌ ಕಂಪನಿಗಳ ಪರವಾಗಿ ತಿದ್ದುಪಡಿ ಮಾಡಲಾಗಿದೆ. ರೈತರೊಂದಿಗೆ ಚರ್ಚಿಸಲು ಸಮಯ ಇಲ್ಲದಂತೆ ವರ್ತಿಸುತ್ತಿರುವ ಸರ್ಕಾರ, ಚುನಾವಣೆ ಬಗ್ಗೆ ಹೆಚ್ಚು ಗಮನ ನೀಡುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಬೈರೇಗೌಡ, ರವಿಚಂದ್ರ, ಚಿಕ್ಕಬ್ಬಿಗೆರೆ ನಾಗರಾಜ, ಸುರೇಶ್‌, ಜಯಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next