Advertisement

ಕೋಡಿ ಗ್ರಾಮ ಪಂಚಾಯತ್ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

08:14 PM Dec 08, 2020 | sudhir |

ಕೋಟ,: ಕೋಡಿ ಗ್ರಾ.ಪಂ. ವ್ಯಾಪ್ತಿಯ ಹಕ್ಕುಪತ್ರ ಸಮಸ್ಯೆ ಹಾಗೂ ಜೆಟ್ಟಿ ಸಮಸ್ಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇಲ್ಲಿನ ಕೋಡಿಕನ್ಯಾಣ, ಕೋಡಿತಲೆ, ಕೋಡಿ ಹೊಸಬೆಂಗ್ರೆ, ಕೋಡಿಬೆಂಗ್ರೆ ಸೇರಿದಂತೆ ಸಂಪೂರ್ಣ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕಾರ ನಿರ್ಧಾರ ಪ್ರಕಟಿಸಿದ್ದಾರೆ.

Advertisement

ಈ ಕುರಿತು ಡಿ.8ರಂದು ಸಂಜೆ ಕೋಡಿ ಲೈಟ್ ಹೌಸ್ ಬಳಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಸರ್ವಪಕ್ಷಗಳ ಮುಖಂಡರು ಹಾಗೂ ಸ್ಥಳೀಯ 300ಕ್ಕೂ ಅಧಿಕ ಮಂದಿ ಸಭೆ ಸೇರಿ ಚರ್ಚೆ ನಡೆಸಿದರು ಹಾಗೂ ಯಾವುದೇ ಪಕ್ಷದ ಬೆಂಬಲಿಗರು ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವುದಿಲ್ಲ, ಪಕ್ಷೇತರವಾಗಿ ಯಾರಾರದರು ನಾಮಪತ್ರ ಸಲ್ಲಿಸಿದರೆ ಅವರ ಮನವೊಳಿಸಿ ಹಿಂಪಡೆಯಲಾಗುವುದು ಎಂದು ಘೋಷಿಸಿದರು.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ:-
ಪಂಚಾಯತ್ ವ್ಯಾಪ್ತಿಯ ಸಾವಿರಾರು ಕುಟುಂಬಗಳು ನಾಲ್ಕು ದಶಕಗಳಿಂದ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದೆ. ಆದರೆ ಸಿ.ಆರ್.ಝಡ್. ಕಠಿಣ ನಿಯಮದಿಂದಾಗಿ ಹಕ್ಕು ಪತ್ರ ಸಿಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಸಮಸ್ಯೆ ಹೇಳಿಕೊಂಡು ನಾಯಕರ ಬಳಿ ಹೋದರೆ ಸಮಸ್ಯೆ ಬಗೆಹರಿಸುವ ಬದಲು ಸಂತೈಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಮಸ್ಯೆ ಪರಿಹರಿಸುವ ಯಾವುದೇ ಇಚ್ಛಾಶಕ್ತಿ ಅವರಿಗಿಲ್ಲ. ಚುನಾವಣೆ ಬಂದಾಗ ಆಶ್ವಾಸನೆ ನೀಡಿ ಚುನಾವಣೆ ಮುಗಿದ ಮೇಲೆ ಮರೆಯುತ್ತಾರೆ. ಜೆಟ್ಟಿ ಅಭಿವೃದ್ಧಿ ಹಲವು ವರ್ಷಗಳಿಂದ ಕನಸಾಗಿ ಉಳಿದಿದೆ. ಅಧಿಕಾರಿಗಳ ಅಸಹಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆದ್ದರಿಂದ ನಾವೆಲ್ಲ ಒಗ್ಗಟ್ಟಾಗಿ ಚುನಾವಣೆ ಬಹಿಷ್ಕರಿಸಿದ್ದೇವೆ ಎಂದರು.

ಸಂತೈಕೆ ಬೇಡ:-
ಪಕ್ಷದ ಕಾರ್ಯಕರ್ತರನ್ನು ಕರೆದು ಬೆದರಿಕೆ ಹಾಕುವುದು, ಒಬ್ಬೊಬ್ಬರನ್ನು ಕರೆದು ಮಾತುಕತೆ ನಡೆಸಿ ಸಂತೈಸಲು ಪ್ರಯತ್ನಿಸುವುದನ್ನು ನಾವು ವಿರೋಧಿಸುತ್ತೇವೆ. ನಾಯಕರೆನಿಸಿಕೊಂಡವರು ನಮ್ಮ ಜತೆ ಮಾತನಾಡುವುದಿದ್ದರೆ ಚುನಾವಣೆ ನಾಮಪತ್ರ ಸಲ್ಲಿಕೆ ಅಂತ್ಯವಾದ ಅನಂತರ ನಮ್ಮೂರಿಗೆ ಬಂದು ಎಲ್ಲರೊಂದಿಗೆ ಒಟ್ಟಾಗಿ ಚರ್ಚಿಸಲಿ ಅಥವಾ ಜಿಲ್ಲಾಧಿಕಾರಿಗಳೇ ನೇರವಾಗಿ ನಮ್ಮೂರಿಗೆ ಭೇಟಿ ನೀಡಿ ಮಾತುಕತೆ ನಡೆಸಿದರೆ ಮಾತನಾಡಲು ಸಿದ್ಧ ಎಂದು ತಿಳಿಸಿದರು.

Advertisement

ಗ್ರಾಮಸ್ಥರ ಪರವಾಗಿ ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಶಂಕರ ಬಂಗೇರ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಹಾಬಲ ಕುಂದರ್ ಮುಂತಾದವರು ಅಭಿಪ್ರಾಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next