Advertisement

ಕೋಡಿ ಸೇತುವೆ ಕಾಮಗಾರಿಗೆ ಮರುಜೀವ ; 1 ಕೋ.ರೂ. ವೆಚ್ಚದ ಕಾಮಗಾರಿ ಪೂರ್ಣದೆಡೆಗೆ

05:42 PM Feb 09, 2022 | Team Udayavani |

ಕುಂದಾಪುರ: ವಿನಾಯಕ ಥಿಯೇಟರ್‌ ಬಳಿಯಿಂದ ಕೋಡಿ ಪ್ರದೇಶಕ್ಕೆ ಹೋಗುವ ರಸ್ತೆಯಲ್ಲಿ ಬಾಕಿಯಾಗಿದ್ದ ಸೇತುವೆ ಕಾಮಗಾರಿ ಪೂರ್ಣವಾಗುವತ್ತ ಸಾಗಿದೆ. ಕೆಲವು ಸಮಯದಲ್ಲಿ ಇದು ಸಾರ್ವಜನಿಕರ ಬಳಕೆಗೆ ದೊರೆಯಲಿದೆ. ಪಿಲ್ಲರ್‌ ಇತ್ಯಾದಿ ಪೂರ್ಣವಾಗಿ ಸ್ಲಾéಬ್‌ ಅಳವಡಿಸಲಾಗಿದೆ. ಇದು ಸಾಕಷ್ಟು ನೀರು ಉಣಿಸಿಕೊಂಡು ಗಟ್ಟಿಯಾದ ಬಳಿಕ ಮುಂದಿನ ಕಾಮಗಾರಿ ನಡೆಯಲಿದೆ. ಫೆಬ್ರವರಿಗೆ ಓಡಾಟಕ್ಕೆ ಮುಕ್ತವಾಗಲಿದೆ ಎಂದು ಇಲಾಖೆ ಈ ಮೊದಲು ಹೇಳಿತ್ತು. ಮಾರ್ಚ್‌ ವೇಳೆಗೆ ಅಂತೂ ಕಾಮಗಾರಿ ಪೂರ್ಣವಾಗಿ ಜನರಿಗೆ ಉಪಯೋಗಕ್ಕೆ ದೊರೆಯುವುದು ಖಚಿತವಾಗಿದೆ.

Advertisement

ಕಳಪೆ ಆರೋಪ
ನಿರ್ಮಾಣ ಆರಂಭವಾಗಿ ವರ್ಷ ಕಳೆದ ವಿನಾಯಕ ಹಂಗಳೂರು – ಕೋಡಿ ರಸ್ತೆಯಲ್ಲಿರುವ ಸೇತುವೆ ಕಾಮಗಾರಿ ಆಸಮರ್ಪಕವಾಗಿದೆ, ಕಳಪೆಯಾಗಿದೆ ಎಂದು ಸ್ಥಳೀಯರು ದೂರಿದ್ದರು. ಆದರೆ ಇಲಾಖೆ ಇದನ್ನು ನಿರಾಕರಿಸಿದೆ. ಪಿಲ್ಲರ್‌ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಪಿಲ್ಲರ್‌ನ ಒಳಗೆ ಸಿಮೆಂಟ್‌ ಮಿಶ್ರಣ ಬದಲು ಮುಕ್ಕಾಲಂಶ ಮಣ್ಣು ತುಂಬಿಸಲಾಗಿದೆ. ಸಂಬಂಧಿತ ಇಲಾಖೆ ಮತ್ತು ಜನಪ್ರತಿನಿಧಿಗಳು ಕಳವೆ ಕಾಮಗಾರಿ ತಡೆಗಟ್ಟಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಪಿಲ್ಲರ್‌ನ ದುರಸ್ತಿ ನಡೆದಿತ್ತು.

ನಿರಾಕರಣೆ
ಕಾಮಗಾರಿ ಕಳಪೆಯಾಗಿರಲಿಲ್ಲ. ಸಾಮಾನ್ಯ ವಾಗಿ ಕಲ್ಲನ್ನು ಆಳವಾಗಿ ಕೊರೆದು ಕಾಮಗಾರಿ ನಿರ್ವಹಿಸಬೇಕಾಗಿ ಬಂದಾಗ, ಹಸಿ ಮಣ್ಣು ಇ¨ªಾಗ ಇದೇ ಮಾದರಿಯಲ್ಲಿ ಕಾಮಗಾರಿ ಮಾಡಲಾಗುತ್ತದೆ. ಆಳದಿಂದ ಮರಳಿನಂತಹ ಮಣ್ಣು ಹಾಕಿದ ಕಾಂಕ್ರೀಟ್‌ ಮೇಲೆ ಬರುತ್ತದೆ. ಅದನ್ನು ತೆಗೆದು ಮತ್ತೆ ಕಾಂಕ್ರೀಟ್‌ ಹಾಕಲಾಗುತ್ತದೆ. ಇದು ಸಹಜವಾದ ಎಂಜಿನಿಯರಿಂಗ್‌ ಕ್ರಮ. ಕಾಮಗಾರಿ ನಿರ್ವಹಣೆ ಕುರಿತು ಮಾಹಿತಿ ಇಲ್ಲದೆ ಮಾಡಿದ ಆರೋಪ ಇದಾಗಿದೆ. 9 ಅಡಿ ಆಳಕ್ಕೆ ಫೈಲಿಂಗ್‌ ಮಾಡಬೇಕಿದೆ. ಹಾಗೆ ಮಾಡುವಾಗ ಮೊದಲ 3 ಅಡಿಯಲ್ಲಿ ಮಣ್ಣು ದೊರೆಯುತ್ತದೆ. ಪಿಲ್ಲರ್‌ ಅಳವಡಿಕೆಗೆ ಫೈಲಿಂಗ್‌ ಮಾಡುವಾಗ ಮಣ್ಣು ದೊರೆಯುವುದು ಸಹಜ ಕ್ರಿಯೆ. ಅದಕ್ಕಾಗಿ ಆಳ ಮಾಡಿ ಕಾಂಕ್ರೀಟ್‌ ತುಂಬಲಾಗುತ್ತದೆ. ಸತ್ಯಕ್ಕೆ ದೂರವಾದ ಆರೋಪ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ಅನುದಾನ
ಈ ಪ್ರದೇಶದಲ್ಲಿ ಸೇತುವೆ ದುರ್ಬಲವಾಗಿದ್ದು ಹೊಸ ಸೇತುವೆ ನಿರ್ಮಾಣಕ್ಕೆ ಅನೇಕ ಸಮಯದಿಂದ ಬೇಡಿಕೆ ಇತ್ತು. ಎರಡು ಸೇತುವೆ ನಿರ್ಮಾಣಕ್ಕೆ ತಲಾ 1 ಕೋಟಿ ರೂ.ಗಳಂತೆ ಒಟ್ಟು 2 ಕೋ.ರೂ.ಗಳನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನವಿಯಂತೆ ಸರಕಾರ ಮಂಜೂರು ಮಾಡಿತ್ತು. ಅದರಂತೆ 2021ರ ಜನವರಿಯಲ್ಲಿ ಕಾಮಗಾರಿ ಆರಂಭಕ್ಕೆ ಚಾಲನೆ ದೊರೆತಿತ್ತು. ಆದರೆ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡು ಬಳಿಕ ಮಳೆ ಎಂಬ ಕಾರಣದಿಂದ ಪುನರಾರಂಭಗೊಂಡಿರಲಿಲ್ಲ. ಕಾಮಗಾರಿ ಆರಂಭ ವಾದ ಬಳಿಕ ಸಾರ್ವಜನಿಕರು ಮುತ್ತಿಗೆ ಹಾಕಿ ಕಳಪೆ ಎಂದು ಆರೋಪ ಮಾಡಿ ನಿಲ್ಲಿಸಿದ್ದರು.

ಕಾಮಗಾರಿ ಕಳಪೆಯಾಗಿಲ್ಲ
ಸೇತುವೆ ಕಾಮಗಾರಿ ಕಳಪೆಯಾಗಿಲ್ಲ. ಸಾರ್ವಜನಿಕರು ಮಾಹಿತಿ ಕೊರತೆಯಿಂದ ಆರೋಪ ಮಾಡಿರಬಹುದು. ಇಲಾಖೆಯ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಯಾವುದೇ ಲೋಪ ಕಂಡುಬಂದಿಲ್ಲ. ಭರದಿಂದ ಕಾಮಗಾರಿ ನಡೆಯುತ್ತಿದೆ.
-ಹರ್ಷವರ್ಧನ ,
ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕುಂದಾಪುರ

Advertisement

ಸುದಿನ ವರದಿ
ಹಳೆ ಸೇತುವೆ ಶಿಥಿಲಗೊಂಡು, ಹೊಸ ಸೇತುವೆ ನಿರ್ಮಾಣದ ಬೇಡಿಕೆಯಿಂದ ತೊಡಗಿ ಮಂಜೂರಾತಿ, ಕಾಮಗಾರಿ ಆರಂಭ, ಕಾಮಗಾರಿ ವಿಳಂಬ, ಸಾರ್ವಜನಿಕರ ಆರೋಪದಿಂದ ಕಾಮಗಾರಿ ಸ್ಥಗಿತ ಹೀಗೆ ಅನೇಕ ಬಾರಿ “ಉದಯವಾಣಿ’ ‘ಸುದಿನ’ ವರದಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next