Advertisement
ಪ್ರಾಚೀನ ತುಳು ಕೃತಿ ಮಂದಾರ ರಾಮಾಯಣೊದ ಕತೃ ಕವಿ ಅರುಣಾಬ್ಜನ ಆಡೊಂಬಲದಲ್ಲಿ ಕೊಡವೂರಿನ ಗ್ರಾಮಸ್ಥರ ಹಾಗು ಊರ ಮತ್ತು ಪರವೂರ ಭಕ್ತಾದಿಗಳ ಸಹಕಾರದಿಂದ ದೇಗುಲದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಈ ಅರ್ಚನೆಯಂದು ಸಹಸ್ರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ತುಳಸಿ ಜಲಂಧರ ಪ್ರಕರಣದ ನಂತರ ಶಿವನಿಗೆ ತುಳಸಿಯಿಂದ ಅರ್ಚನೆಯಿಲ್ಲ. ಆದರೆ ಈ ಪುರಾತನ ಕ್ಷೇತ್ರದಲ್ಲಿ ಶಂಕರನಾರಾಯಣ ಈರ್ವರೂ ನೆಲೆಸಿರುವುದರಿಂದ ಇಲ್ಲಿ ತುಳಸಿ ಹಾಗೂ ಬಿಲ್ವಪತ್ರೆ ಎರಡನ್ನೂ ಅರ್ಚನೆಗೆ ಉಪಯೋಗಿಸುತ್ತಾರೆ. ಏಕಾದಶ ರುದ್ರರು ಹಾಗೆಯೇ ಏಕಾದಶಿ ವ್ರತ ಪ್ರಿಯ ವಿಷ್ಣು ಇಬ್ಬರನ್ನೂ ಏಕಾದಶ ಸಂಖ್ಯೆಯಿಂದ ಅರ್ಚಿಸಿದರೆ ಅನಂತ ಫಲವಿದೆ ಎಂದು ಶಾಸ್ತ್ರ ಪುರಾಣಗಳು ಸಾರುತ್ತವೆ. ಯೋಗ ನಿದ್ರೆಯಿಂದ ಎಚ್ಚೆತ್ತ ಶ್ರೀಮನ್ನಾರಾಯಣನನ್ನು ದೀಪ ಬೆಳಗಿಸಿ ಸ್ವಾಗತಿಸುವ ಪರಂಪರೆ ಹಾಗೂ ತ್ರಿಪುರಾಸುರನನ್ನು ವಧಿಸಿ ಲೋಕಕಲ್ಯಾಣಗೈದ ಈಶ್ವರನನ್ನು ದೇವತೆಗಳು ದೀಪ ಹಚ್ಚಿ ಅರ್ಚಿಸಿದ ದ್ಯೋತಕವಾಗಿ ಕಾರ್ತಿಕ ಮಾಸವಿಡೀ ಭೂಲೋಕದಲ್ಲಿ ಜನರು ದೀಪೋತ್ಸವ ಮಾಡುತ್ತಾರೆ. ಕಾರ್ತಿಕ ಸೋಮವಾರ ಶಂಕರನಾರಾಯಣ ದೇವರ ಆರಾಧನೆಗೆ ಪ್ರಶಸ್ತವಾದ ದಿನ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಲೋಕ ಕ್ಷೇಮಾರ್ಥ ಹಮ್ಮಿಕೊಳ್ಳಲಾಗಿರುವ ಏಕಾದಶ ಲಕ್ಷ ತುಳಸಿ ಬಿಲ್ವಾರ್ಚನೆಯಿಂದ ಭಕ್ತರ ಅಭೀಷ್ಟ ನೆರವೇರುವುದು.
ಸಹಸ್ರನಾಮ ಪಠಣ
ಅರ್ಚನೆಗೆ ಪೂರ್ವಭಾವಿಯಾಗಿ ನ. 4,11,18,25 ರಂದು ಶ್ರೀ ಶಂಕರನಾರಾಯಣ ಸಹಸ್ರ ನಾಮಾವಳಿ ಪಠಣ ವಿವಿಧ ಬ್ರಾಹ್ಮಣ ವಲಯ ಸಮಿತಿಗಳಿಂದ ನಡೆಯುತ್ತಿದೆ. ಕೊಡವೂರು ಬ್ರಾಹ್ಮಣ ಸಮಿತಿಯ ಸಹಕಾರದೊಂದಿಗೆ ಶ್ರೀ ದೇವರಿಗೆ ಶ್ರೀಗಂಧ ಲೇಪನ ಪುರಸ್ಸರ ವಿಶೇಷ ಪೂಜೆ, ಡಿ. 2ರಂದು ಬೆಳಿಗ್ಗೆ ಘಂಟೆ 9 ರಿಂದ ಶ್ರೀ ಶಂಕರನಾರಾಯಣ ಸಹಸ್ರನಾಮಾವಳಿ ಪಠಣ ಸಹಿತ ಏಕಾದಶ ಲಕ್ಷ ತುಳಸಿ-ಬಿಲ್ವಾರ್ಚನೆ ಸಂಪನ್ನಗೊಳ್ಳಲಿದೆ. ಶ್ರೀ ದೇವರ ವಿಶೇಷ ಪ್ರಸಾದ ಹಾಗು ಆಸಕ್ತರಿಗೆ ಸಹಸ್ರ (1000) ತುಳಸಿ ಹಾಗು ಬಿಲ್ವ ಗಿಡಗಳನ್ನು ವಿತರಿಸಲಾಗುವುದು. ಕಾರ್ಯಕ್ರಮಗಳ ವಿವರ
ಪೂರ್ವಾಹ್ನ ಘಂಟೆ 9 ರಿಂದ ಅರ್ಚನೆ, 11.00ಕ್ಕೆ ಮಹಾಪೂಜೆ, 11.30ಕ್ಕೆ ಶ್ರೀ ದೇಗುಲದ 2019ರ ದಿನದರ್ಶಿಕೆ ಬಿಡುಗಡೆ ಹಾಗೂ ಶ್ರೀ ಶಂಕರನಾರಾಯಣ ಸಹಸ್ರನಾಮಾವಳಿ ಮತ್ತು ಸ್ತೋತ್ರ ಮಂಜರಿ ಪುಸ್ತಕ ಲೋಕಾರ್ಪಣೆ, 12.30 ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿರುವುದು.
Related Articles
ಈಗಾಗಲೇ ದೇವರ ಗದ್ದೆಯಲ್ಲಿ ತುಳಸಿವನ ನಿರ್ಮಿಸಲಾಗಿದ್ದು, ಹನ್ನೊಂದು ಲಕ್ಷ ತುಳಸಿ ಹಾಗೂ ಬಿಲ್ವಾರ್ಚನೆಗೆ ಬೇಕಾಗಿರುವುದರಿಂದ ಅದಕ್ಕೆ ಪೂರಕವಾಗಿ ಭಕ್ತರು ತಮ್ಮ ಮನೆಯಲ್ಲಿ ಬೆಳೆಸಿರುವ ತುಳಸಿ ಮತ್ತು ಬಿಲ್ವಪತ್ರೆಗಳನ್ನು ಅರ್ಚನೆಯ ಮುನ್ನಾ ದಿನ ಅಂದರೆ ಡಿ.1ರಂದು ತಂದು ಕೊಡುವಂತೆ ವಿನಂತಿಸಲಾಗಿದೆ.
– ಜನಾರ್ದನ್ ಕೊಡವೂರು, ಸಂಚಾಲಕರು, ಅರ್ಚನೆ ಸಮಿತಿ ಮತ್ತು ಶ್ರೀ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು
Advertisement
ಕಾರ್ತಿಕಮಾಸದಲ್ಲಿ ಶಿವ ಹಾಗೂ ವಿಷ್ಣು ದೇವರಿಗೆ ಪ್ರಿಯವಾದ ಏಕಾದಶ ಸಂಖ್ಯೆಯಲ್ಲಿ ಲಕ್ಷ ನಾಮಾರ್ಚನೆಯನ್ನು ಶಂಕರನಾರಾಯಣ ನಾಮಾವಳಿ ಸಹಿತ ತುಳಸಿ ಬಿಲ್ವ ಪತ್ರೆಗಳನ್ನು ಲಕ್ಷ ಲಕ್ಷ ಸಂಖ್ಯೆಯಲ್ಲಿ ಅರ್ಪಿಸಿ ಮಾಡಲಿರುವ ಏಕಾದಶ ಲಕ್ಷ ತುಳಸಿ ಬಿಲ್ವಾರ್ಚನೆಯಿಂದ ಶ್ರೀ ಶಂಕರನಾರಾಯಣ ಸ್ವಾಮಿ ಸಂತುಷ್ಟರಾಗಿ ಭಕ್ತರ ಅಭೀಷ್ಟ ಸಿದ್ಧಿಸಲಿ ಹಾಗೂ ಲೋಕ ಕಲ್ಯಾಣವಾಗಲಿ ಎನ್ನುವ ಸದಾಶಯದೊಂದಿಗೆ ಅರ್ಚನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.– ಪ್ರಕಾಶ್ ಜಿ. ಕೊಡವೂರು, ಶ್ರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ