ಬೆಂಗಳೂರು: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ “ಕೊಡವ ಹೆರಿಟೇಜ್ ಕೇಂದ್ರ’ದ ಕಾಮಗಾರಿಯನ್ನು ಜುಲೈ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ.
ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವರ ಪರವಾಗಿ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ಜುಲೈ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಕೊಡವ ಹೆರಿಟೇಜ್ ಕೇಂದ್ರ ನಿರ್ಮಾಣಕ್ಕೆ 2004ರಲ್ಲಿ 88.75 ಲಕ್ಷದ ಅಂದಾಜು ಮೊತ್ತದಲ್ಲಿ ಮಂಜೂರಾತಿ ನೀಡಲಾಗಿತ್ತು. 2010ರಲ್ಲಿ ಕೆ. ಬಾಡಗ ಗ್ರಾಮದಲ್ಲಿ 5 ಎಕರೆ ಜಮೀನು ಮಂಜೂರು ಮಾಡಲಾಯಿತು. ನಂತರ 145 ಲಕ್ಷ ರೂ. ಪರಿಷ್ಕೃತ ಅಂದಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರಕಿತು. ಈವರೆಗೆ ಕಾಮಗಾರಿಗೆ 2.82 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ಹಳಿ ಮೇಲೆ ನಿಂತ ಕುರಿಗಳಿಗೆ ರೈಲು ಡಿಕ್ಕಿ : ಓರ್ವ ಕುರಿಗಾಹಿ ಸೇರಿ 32 ಕುರಿಗಳ ದಾರುಣ ಸಾವು
ಪ್ರಸ್ತುತ ಎರಡು ಐನ್ ಮನೆಯ ಮೇಲ್ಛಾವಣಿಯ ಕೆಲಸ, ಪ್ರವೇಶ ದ್ವಾರ, ಅಡುಗೆ ಕೊಠಡಿ, ಮೆಟ್ಟಿಲುಗಳು, ಆಂಪಿಕ್ ಥಿಯೇಟರ್, ಗ್ರಂಥಾಲಯ, ವಿದ್ಯುದೀಕರಣ, ಕಿಟಕಿ ಬಾಗಿಲುಗಳ ಜೋಡಣೆ ಕೆಲಸ ಪೂರ್ಣಗೊಂಡಿದೆ. ಹೊಸದಾಗಿ 25 ಕೆ.ವಿ.ಎ ಟ್ರಾನ್ಸ್‌ಫಾರ್ಮ್ ಕೆಲಸ ಮುಗಿದಿದೆ. ಒಟ್ಟಿನಲ್ಲಿ ಜುಲೈ ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಲಾಗವುದು ಎಂದು ಸಚಿವ ಸುನಿಲ್ ಕುಮಾರ್ ಭರವಸೆ ನೀಡಿದರು.