ಮಡಿಕೇರಿ: ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಕೊಡಗು, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಮತ್ತು ಕೇರಳ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ಅಭಿವೃದ್ಧಿ ಕುರಿತು ಚರ್ಚಿಸಿದರು.
ಚೆನ್ನರಾಯಪಟ್ಟಣ, ಅರಕಲಗೂಡು, ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ ಮೂಲಕ ಮಾಕುಟ್ಟ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ 183 ಕಿ.ಮೀ. ಉದ್ದದ 1,600 ಕೋಟಿ ವೆಚ್ಚದ ಹೆದ್ದಾರಿ ನಿರ್ಮಾಣ ಯೋಜನೆಗೆ ಅಂತಿಮ ಒಪ್ಪಿಗೆ ನೀಡಲು ಕೇಂದ್ರ ರಸ್ತೆ ಸಾರಿಗೆ ಸಚಿವರು ಸಮ್ಮತಿ ಸೂಚಿಸಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಹೆದ್ದಾರಿಗಳು ಅಭಿವೃದ್ಧಿಯಾದರೆ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಸಚಿವರಿಗೆ ನೀಡಿರುವ ಮನವಿಯಲ್ಲಿ ಉಲ್ಲೇಖೀಸಿದ್ದಾರೆ.
ಇದನ್ನೂ ಓದಿ:ನಮ್ಮನ್ನು ಕಡೆಗಣಿಸಿದ್ದರಿಂದಲೇ ಪರಿಷತ್ ಚುನಾವಣೆಯಲ್ಲಿ ಹಿನ್ನಡೆ ಆಯ್ತು; ಯತ್ನಾಳ್ ಕಿಡಿ
ಕಾರಿಡಾರ್ ಅಭಿವೃದ್ಧಿಯಿಂದ ಕೊಡಗು ಮತ್ತು ಕೇರಳದ ನಡುವೆ ಉತ್ತಮ ಸಂಪರ್ಕವನ್ನು ಸ್ಥಾಪಿಸಬಹುದಾಗಿದೆ. ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಚೋವಾ-ಮಟ್ಟನೂರ್-ಕೂಟ್ಟುಪುಳ ರಸ್ತೆಯ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ) ಸಂಪರ್ಕ ಕಲ್ಪಿಸುತ್ತದೆ. ಕೊಡಗು ಮತ್ತು ಹಾಸನ ಜಿಲ್ಲೆಗಳ ಪ್ರವಾಸಿತಾಣಗಳಿಗೆ ಭೇಟಿ ನೀಡಲು ಇಚ್ಛಿಸುವ ಪ್ರವಾಸಿಗರಿಗೆ ಕೂಡ ಉತ್ತಮ ರಸ್ತೆ ದೊರೆತಂತಾಗುತ್ತದೆ ಎಂದು ಪ್ರತಾಪ್ ಸಿಂಹ ಅಭಿಪ್ರಾಯ ಮಂಡಿಸಿದ್ದಾರೆ.
ಮೈಸೂರು-ಬೆಂಗಳೂರು ದಶಪಥ ರಸ್ತೆಯುದ್ದಕ್ಕೂ ಬರುವ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ನಗರಗಳಿಗೆ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ಪ್ರತ್ಯೇಕ ಯೋಜನೆಯಡಿ ಟೆಂಡರ್ ಕರೆಯಲು ಒಪ್ಪಿಗೆ ಸಿಕ್ಕಿದೆ ಎಂದವರು ತಿಳಿಸಿದ್ದಾರೆ.