Advertisement

ಸತ್ಯಹೇಳಿದ “ಕೊಡಗಿನೊಡೆಯರು ಕೊಡವರು’ಕೃತಿ

12:13 PM Sep 12, 2017 | |

ಮೈಸೂರು: ಇತ್ತೀಚಿನ ದಿನಗಳಲ್ಲಿ ಬಹುತೇಕ ಸಾಹಿತಿಗಳು ರಾಜಮಾರ್ಗದ ಬದಲಿಗೆ ಅಡ್ಡಮಾರ್ಗದಲ್ಲಿ ಸಾಗುತ್ತಿರುವುದರ ಪರಿಣಾಮ ಸಾಹಿತ್ಯದಲ್ಲಿ ಸಂಶೋಧನಾ ಕೃತಿಗಳ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್‌ ವಿಷಾದಿಸಿದರು. 

Advertisement

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಭೂಮಿ ಕೊಡಗು ಪ್ರಕಾಶನ ಹೊರತಂದಿರುವ ಲೇಖಕ ಅಡ್ಡಂಡ ಕಾರ್ಯಪ್ಪನವರ “ಕೊಡಗಿನೊಡೆಯರು ಕೊಡವರು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಇಂದು ಕನ್ನಡ ಸಾಹಿತ್ಯ ಬೆಳೆಯುತ್ತಿದ್ದರೂ ಅಸಮತೋಲನವಿದೆ.

ಸೃಜನಶೀಲ ಸಾಹಿತ್ಯಗಳು ಮಾತ್ರ ಹೊರಬರುತ್ತಿದೆ. ಸಂಶೋಧನಾ ಸಾಹಿತ್ಯಕ್ಕೆ ಶ್ರಮ ಪ್ರವೃತ್ತಿ ಅಗತ್ಯವಿದ್ದರೂ, ಅಡ್ಡದಾರಿಗಳಲ್ಲಿ ಹೆಚ್ಚಾಗಿ ಸಾಗುತ್ತಿದ್ದಾರೆ. ಪರಿಣಾಮ ವೈಚಾರಿಕ, ಸಂಶೋಧನಾ ಕೃತಿಗಳ ಸಂಖ್ಯೆ ಕಡಿಮೆಯಾಗಿ, ಭಾವಸಾಹಿತ್ಯ ಹೆಚ್ಚಾಗಿ ಬುದ್ಧಿ ಸಾಹಿತ್ಯ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಸಂಶೋಧನಾ ಸಾಹಿತ್ಯಗಳು ಮೂಡಿಬರಬೇಕು ಎಂದರು.

ಸತ್ಯವನ್ನು ತಿರುಚಿದ್ದಾರೆ: ಅನೇಕ ಡೋಂಗಿ ಸಂಶೋಧಕರು, ಇತಿಹಾಸಕಾರರು ಸತ್ಯವನ್ನು ತಿರುಚಿ, ವಿಕೃತಗೊಳಿಸಿದ್ದು, ಕೊಡವರನ್ನು ಅಪಮಾನಿಸಿದ್ದಾರೆ. ಇಂತಹ ವಿಷಯಗಳಲ್ಲಿ ಸತ್ಯವನ್ನು ಬಯಲು ಮಾಡುವುದೇ ಸಂಶೋಧನೆ. ಈ ನಿಟ್ಟಿನಲ್ಲಿ ಕೊಡಗಿನೊಡೆಯರು ಕೊಡವರು ಕೃತಿಯ ಲೇಖಕರು ಸುಳ್ಳುಗಳನ್ನು ಬೇಧಿಸಿ, ಈ ಹಿಂದಿನ ಇತಿಹಾಸದ ವಿಪರೀತ ಮತ್ತು ವಿಪರ್ಯಾಸವನ್ನು ಸರಿಪಡಿಸಿದ್ದಾರೆ.

ಇದಕ್ಕಾಗಿ ದಾಖಲೆ ಸಹಿತವಾದ ವಿವರಣೆಗಳನ್ನು ನೀಡುವ ಮೂಲಕ ಸತ್ಯವನ್ನು ಹೊರತರುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎಂದರು. ಕೃತಿಯಲ್ಲಿ ಋಣಾತ್ಮಕ ಮಾತ್ರವಲ್ಲದೆ ಧನಾತ್ಮಕ ಅಂಶಗಳನ್ನು ಬಿಂಬಿಸಲಾಗಿದೆ. ಸ್ವಾತಂತ್ರ ಹೋರಾಟಗಾರರೆಂದು ಬಿಂಬಿತರಾಗಿದ್ದ ಅನೇಕ ಪುಂಡರು, ಅನಾಮಧೇಯರು ಮಾಡಿರುವ ಕೆಟ್ಟಕೆಲಸಗಳನ್ನು ಆಧಾರದೊಂದಿಗೆ ತಿಳಿಸಿದ್ದಾರೆ.

Advertisement

ಕೆಲವು ಬ್ರಿಟಿಷ್‌ ಅಧಿಕಾರಿಗಳನ್ನು ನ್ಯಾಯವಾಗಿ ಹೊಗಳಿದ್ದಾರೆ. ಆ ಮೂಲಕ ಕೊಡವ ಜನಾಂಗ ಮತ್ತು ಚರಿತ್ರೆಯನ್ನು ತಾತ್ಸಾರ ಮತ್ತು ಅಜಾnನವೆಂಬ ಅನಿಷ್ಠಗಳಿಂದ ಪಾರು ಮಾಡುವ ಕೆಲಸವನ್ನು ಕೃತಿಯಲ್ಲಿ ಮಾಡಲಾಗಿದೆ. ಈ ಕೃತಿಯನ್ನು ಆಂಗ್ಲ ಭಾಷೆಗೂ ಅನುವಾದ ಮಾಡಬೇಕಿದೆ ಎಂದರು.

ಲೇಖಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಈ ಹಿಂದೆ ಪ್ರಕಟಗೊಂಡ ಬಹುತೇಕ ಪುಸ್ತಕಗಳಲ್ಲಿ ಕೊಡವ ಜನಾಂಗದ ಒಳ್ಳೆಯ ಕೆಲಸಗಳನ್ನು ಮರೆಮಾಚಿ, ದೋಷಗಳನ್ನೇ ಮುಖ್ಯವಾಗಿಸಿಕೊಂಡು ಅಪಮಾನಿಸಲಾಗಿದೆ. ಆ ಮೂಲಕ ಕೊಡವ ಜನಾಂಗವನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗಿದೆ. ಸತ್ಯಸಂಗತಿಯನ್ನು ದಾಖಲು ಮಾಡಬೇಕೆಂಬ ಉದ್ದೇಶದಿಂದ ಈ ಕೃತಿಯನ್ನು ಬರೆದಿದ್ದೇನೆ ಎಂದು ಹೇಳಿದರು.

ಕೃತಿ ಕುರಿತು ಸಂಸ್ಕೃತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್‌ ಮಾತನಾಡಿದರು. ಪತ್ರಿಕೋದ್ಯಮಿ ಕೆ.ಬಿ.ಗಣಪತಿ, ಪರಿಸರ ಚಿಂತಕ ಪಿ.ಡಿ.ಮೇದಪ್ಪ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಮೂವೇರ ಕುಟ್ಟಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next