Advertisement

ಕೊಡಚಾದ್ರಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣಕ್ಕೆ ಟೆಂಡರ್‌ : ದೇಶದ 18 ಕಡೆ ರೋಪ್‌ ವೇ

08:29 AM Oct 08, 2022 | Team Udayavani |

ಕೊಲ್ಲೂರು : ಕೊಲ್ಲೂರಿನಿಂದ ಕೊಡಚಾದ್ರಿ ಬೆಟ್ಟಕ್ಕೆ ಸಾಗಲು ರೋಪ್‌-ವೇ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರ ಟೆಂಡರ್‌ ಕರೆಯಲು ನಿರ್ಧರಿಸಿದೆ. ಈ ಮೂಲಕ ಕೊಲ್ಲೂರಿನ ಮುಕುಟಕ್ಕೆ ಮತ್ತೂಂದು ಗರಿ ಸೇರ್ಪಡೆಯಾಗಿದೆ.

Advertisement

ಟೆಂಡರ್‌ ಬಳಿಕ ಇದೇ ವರ್ಷದ ಡಿಸೆಂಬರ್‌ ಅಂತ್ಯದ ಒಳಗಾಗಿ ಬಿಡ್ಡಿಂಗ್‌ ವಹಿಸಿ ಕೊಡುವ ಗುರಿಯನ್ನು ಸರಕಾರ ಹೊಂದಿದೆ. ಮುಂದಿನ ವರ್ಷದ ಜನವರಿ ವೇಳೆಗೆ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ಕೊಡಚಾದ್ರಿ ಬೆಟ್ಟಕ್ಕೆ ಸಾಗಲು ಕಳೆದ ಕೆಲವು ವರ್ಷಗಳಿಂದ ರೋಪ್‌ ವೇ ನಿರ್ಮಿಸುವ ಬಗ್ಗೆ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಅವರು ಯೋಜನೆಯ ರೂಪರೇಷೆಯೊಡನೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಸುಮಾರು 6.68 ಕಿ.ಮೀ. ಉದ್ದದ ರೋಪ್‌ ವೇ ನಿರ್ಮಿಸುವ ನಿಟ್ಟಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅ ಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆದಿತ್ತು.

ದೇಶದ 18 ಕಡೆ ರೋಪ್‌ ವೇ
ಕರ್ನಾಟಕದ ಕೊಡಚಾದ್ರಿ, ಜಮ್ಮು ಮತ್ತು ಕಾಶ್ಮೀರ, ತ್ರಿಪುರ, ಅರುಣಾಚಲ ಪ್ರದೇಶ, ಮಣಿಪುರ, ತಮಿಳುನಾಡು, ಆಂಧ್ರಪ್ರದೇಶ, ಲೇಹ್‌ ಸೇರಿದಂತೆ ದೇಶದ ಆಯ್ದ 18 ಕಡೆ ರೋಪ್‌ ವೇ ನಿರ್ಮಾಣಕ್ಕೆ ಕೇಂದ್ರ ಸರಕಾರ ಟೆಂಡರ್‌ ಕರೆಯಲು ಸೂಚಿಸಿದೆ.

ಸ್ಥಳೀಯರಿಗೆ ಉದ್ಯೋಗಾವಕಾಶ
ರೋಪ್‌ ವೇ ನಿರ್ಮಾಣದಿಂದಾಗಿ ಅನೇಕ ಮಂದಿಗೆ ಉದ್ಯೋಗಾವಕಾಶ ಲಭಿಸಲಿದ್ದು, ಆದ್ಯತೆಯ ಮೇರೆಗೆ ಸ್ಥಳೀಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಕಾಮಗಾರಿಗೆ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದ್ದು, ಟೆಂಡರ್‌ ಮೂಲಕ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಪರಿಸರಕ್ಕೆ ಹಾನಿಯಾಗದೆ ಕಾಡುಪ್ರಾಣಿಗಳ ಜೀವರಕ್ಷಣೆಯ ನೆಲೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎನ್ನಲಾಗಿದೆ.

Advertisement

ಪರಿಸರ ರಕ್ಷಣೆಗೆ ಆದ್ಯತೆ ಅಗತ್ಯ
ಕೊಡಚಾದ್ರಿಯಲ್ಲಿ ಸರ್ವಜ್ಞ ಪೀಠ, ತ್ರಿಶೂಲ, ಗರ್ಭಗುಡಿ ಹೊಂದಿದ್ದು, ಭಕ್ತರ ಧ್ಯಾನ ಕೇಂದ್ರವಾಗಿದೆ. ಕಾಲ್ನಡಿಗೆ ಹಾಗೂ ಜೀಪುಗಳಲ್ಲಿ ಸಾಗುತ್ತಿದ್ದ ಭಕ್ತರಿಗೆ ರೋಪ್‌ ವೇ ನಿರ್ಮಾಣದಿಂದ ಅನಾಯಾಸ ಪ್ರಯಾಣಕ್ಕೆ ಅನುಕೂಲವಾಗುತ್ತದೆ.

ಇದರಿಂದ ಸಹಜವಾಗಿಯೇ ಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ಸಂದರ್ಭ ಹಚ್ಚ ಹಸುರಿನ ತಾಣದ ಪರಿಸರ ರಕ್ಷಣೆಗೂ ಆದ್ಯತೆ ನೀಡುವುದು ಅಗತ್ಯ ಈ ನಿಟ್ಟಿನಲ್ಲಿ ಸರಕಾರ
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಕೊಲ್ಲೂರು – ಕೊಡಚಾದ್ರಿ ನಡುವೆ ರೋಪ್‌ ವೇ ನಿರ್ಮಾಣಕ್ಕಾಗಿ ಕೇಂದ್ರ ಸಚಿವರಲ್ಲಿ ಮನವಿ ಸಲ್ಲಿಸಲಾಗಿದ್ದು, ಕೇಂದ್ರದಿಂದ ಇಲಾಖೆಯ ಅಧಿ ಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಟೆಂಡರ್‌ ನೀಡುವ ಬಗ್ಗೆ ಮಾತುಕತೆ ನಡೆದಿದ್ದು, ಇದೀಗ ಕೇಂದ್ರ ಸರಕಾರವು ದೇಶದ ಆಯ್ದ 18 ಕಡೆ ರೋಪ್‌ ವೇ ನಿರ್ಮಿಸಲು ಅನುಮತಿ ನೀಡಿದೆ. ಇದರಲ್ಲಿ ಕೊಡಚಾದ್ರಿಯನ್ನು ಸೇರ್ಪಡೆಗೊಳಿಸಿರುವುದು ಈ ಭಾಗದ ಜನರ ಬೇಡಿಕೆ ಈಡೇರಿಸಿದಂತಾಗಿದೆ.
ಬಿ. ವೈ. ರಾಘವೇಂದ್ರ, ಸಂಸದರು, ಶಿವಮೊಗ್ಗ- ಬೈಂದೂರು.

ಕೊಡಚಾದ್ರಿಯಲ್ಲಿ ರೋಪ್‌ ವೇ ನಿರ್ಮಾಣದ ಬಗ್ಗೆ ಕೊಲ್ಲೂರು ದೇಗುಲದ ಆಡಳಿತ ಧರ್ಮದರ್ಶಿಯಾಗಿದ್ದ ಸಂದರ್ಭ ಯೋಜನೆ ರೂಪಿಸಿದ್ದೆ. ಆದರೆ ನಾನಾ ಕಾರಣಗಳಿಂದ ವಿಳಂಬವಾಗಿತ್ತು. ಇದೀಗ ಸಂಸದ ಬಿ.ವೈ. ರಾಘವೇಂದ್ರ ಅವರ ಪಯತ್ನದ ಫಲವಾಗಿ ರೋಪ್‌ ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಿರುವುದು ಯಾತ್ರಾರ್ಥಿಗಳಿಗೆ ಹೆಚ್ಚಿನ ಅನೂಕೂಲತೆ ಕಲ್ಪಿಸಿದಂತಾಗಿದೆ.
– ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next