ಉಳ್ಳಾಲ: ಗುರುವಿನಿಂದ, ಬಲ್ಲವರಿಂದ ಪಡೆದ ಅರ್ಥಯುತ, ಮೌಲ್ಯಯುತ ಜ್ಞಾನ ಸದಾಕಾಲ ಶ್ರೇಷ್ಠವಾಗಿರುತ್ತದೆ ಎಂದು ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲ ಸ್ವಾಮೀಜಿ ನುಡಿದರು.
ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ರವಿವಾರ ಸಂಜೆ ನಡೆದ ದೀಪಪೂಜನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಪ್ರಸ್ತುತ ದಿನಗಳಲ್ಲಿ ಟಿವಿ, ಮೊಬೈಲ್ ಮೂಲಕ ಮಂತ್ರ, ಪೂಜೆ ಕಲಿಯುವ ಸಂಸ್ಕೃತಿ ಬೆಳೆಯುತ್ತಿದ್ದು, ಇದಕ್ಕೆ ನಾವು ಆದ್ಯತೆ ನೀಡಬಾರದು. ಗುರುಮುಖೇನ ಸಾಧನೆ ಮಾಡಿದರೆ ಯಶಸ್ಸು ಸಾಧ್ಯ. ಈ ನಿಟ್ಟಿನಲ್ಲಿ ಪ್ರೊ| ಎಂ.ಬಿ. ಪುರಾಣಿಕ್ ಅವರ ಕಾರ್ಯ ಶ್ಲಾಘನೀಯ. ಮಾತೆಯರು ಈ ಕಾರ್ಯವನ್ನು ತಮ್ಮ ಮನೆಗಳಲ್ಲೂ ಅಳವಡಿಸುವ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬೆಳೆಸಬೇಕು ಎಂದರು.
ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಮಾತನಾಡಿ, ಹಿಂದೂ ಸಮಾಜ, ಸಂಸ್ಕೃತಿ, ಸಂಸ್ಕಾರಕ್ಕೆ ಎಲ್ಲ ಕಡೆಯಿಂದಲೂ ಕೊಡಲಿ ಏಟು ಬೀಳುತ್ತಿದೆ. ಅಧಿಕಾರಕ್ಕಾಗಿ ಮತ ಪಡೆಯುವ ಸಲುವಾಗಿ ಕ್ರಿಮಿನಲ್‌ಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿರುವುದು ದುರಂತ. ಈ ಹಿನ್ನೆಲೆಯಲ್ಲಿ ನಮ್ಮತನ ಉಳಿಸುವಲ್ಲಿ, ನಮ್ಮ ಸಂಸ್ಕಾರ ಸಂಸ್ಕೃತಿ ರಕ್ಷಣೆಯಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸಬೇಕು. ಈ ನಿಟ್ಟಿನಲ್ಲಿ ದೀಪ ಪೂಜನ ಕಾರ್ಯಕ್ರಮ ಪೂರಕ ಎಂದು ಹೇಳಿದರು.
ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ದೀಪಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಭಜನೆ, ಗೋಪೂಜೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಎರಡು ಸಾವಿರ ಮಹಿಳೆಯರು ಪಾಲ್ಗೊಂಡಿದ್ದರು.
ಸುನಂದ ಪುರಾಣಿಕ್, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಆಡಳಿತಾಧಿಕಾರಿ ವಿವೇಕ್ ತಂತ್ರಿ, ವಿಶ್ವ ಹಿಂದೂ ಪರಿಷತ್‌ನ ಕೃಷ್ಣಮೂರ್ತಿ ಹಾಗೂ ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಕುತ್ತಾರು ಹಾಗೂ ಶಾರದಾ ವಿದ್ಯಾಲಯದ ಉಪ ಪ್ರಾಂಶುಪಾಲ ದಯಾನಂದ ಕಟೀಲು, ನಾರಾಯಣ ಕಜೆ ಉಪಸ್ಥಿತರಿದ್ದರು.
ಪುಂಡರೀಕಾಕ್ಷ ಅವರು ಮಕ್ಕಳ ಸರ್ವತೋಮುಖ ವಿಕಾಸಕ್ಕಾಗಿ ರಚಿಸಿದ ಸರಳ ಆಸನಗಳ “ಮೇಧಾ ಸರಸ್ವತಿ ಕ್ರಿಯಾಯೋಗ’ ಬಿಡುಗಡೆಗೊಳಿಸಲಾಯಿತು.
ಶಾರದಾ ವಿದ್ಯಾನಿಕೇತನ ಉಪನ್ಯಾಸಕ ಶಿವಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮ ಪ್ರಸಾರಣ ಪ್ರಮುಖ್ ನಾರಾಯಣ ಕುಂಪಲ ಅವರು ವಂದಿಸಿದರು.