ಹಿರಿಯೂರು: ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಶಿಸ್ತು ಬಹಳ ಮುಖ್ಯ. ಈಗಾಗಲೇ ಪರೀಕ್ಷೆಗಳು ಆರಂಭವಾಗುತ್ತಿದ್ದು, ಮಕ್ಕಳು ಧೈರ್ಯದಿಂದ ಎದುರಿಸಿ, ಉತ್ತಮ ಸಾಧನೆ ಮಾಡುವ ಮೂಲಕ ಸಮಾಜ, ಪೋಷಕರು ಹಾಗೂ ಗುರುಗಳಿಗೆ ಕೀರ್ತಿ ತರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ದಮಯಂತಿ ಸೋಮಯ್ಯ ಎಂದು ಹೇಳಿದರು.
ನಗರದ ಡಾ| ಬಿ.ಆರ್. ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಕಂಪ್ಯೂಟರ್ ಜಗತ್ತಿನಲ್ಲಿ ಉತ್ತಮ ಶಿಕ್ಷಣ ಅವಶ್ಯ. ಮಕ್ಕಳು ಯಾವುದೇ ಒತ್ತಡಕ್ಕೆ ಒಳಗಾಗದೇ ತಮ್ಮ ಆಸಕ್ತಿ ಹಾಗೂ ಇಚ್ಛೆಗನುಸಾರ ವಿಷಯ ಆಯ್ಕೆಮಾಡಿ ಉತ್ತಮ ವಿದ್ಯಾಭ್ಯಾಸ ಪಡೆಯಿರಿ. ಪರೀಕ್ಷೆ ನಂತರ ಕಡಿಮೆ ಅಂಕಗಳು ಬಂದಿವೆ ಮತ್ತು ಫೇಲ್ ಎಂಬ ಕಾರಣಕ್ಕೆ ಯಾವುದೇ ಅನಾಹುತಗಳಿಗೆ ಎಡೆಮಾಡಿಕೊಡದೇ ಬರುವ ಸವಾಲುಗಳನ್ನು ಸ್ವೀಕರಿಸಿ ಭವಿಷ್ಯದ ಉಜ್ವಲ ಜೀವನ ರೂಪಿಸಿಕೊಳ್ಳಬೇಕು ಎಂದರು.
ಡಿವೈಎಸ್ಪಿ ರೋಷನ್ ಜಮೀರ್ ಮಾತನಾಡಿ ಮನುಷ್ಯನ ಜೀವನದಲ್ಲಿ ವಿದ್ಯಾರ್ಥಿ ಜೀವನ ಅಮೂಲ್ಯ. ಮಕ್ಕಳು ತಂದೆತಾಯಿ- ಗುರುಹಿರಿಯರಿಗೆ ವಿಧೇಯರಾಗಿರಬೇಕು. ಈ ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಟ್ಟ ವ್ಯಕ್ತಿ ಸಂವಿಧಾನ ಶಿಲ್ಪಿ ಅಂಬೇಡ್ಕರ್. ಶಿಕ್ಷಣ ಮಾರಾಟವಾದರೆ ಇಲ್ಲವೇ ಭ್ರಷ್ಟಾಚಾರಕ್ಕೆ ಒಳಪಟ್ಟರೆ ಇಡೀ ಸಮಾಜವೇ ನಾಶವಾಗುತ್ತದೆ. ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಅವಕಾಶ ಸದುಪಯೋಗಿಸಿದರೆ ಉತ್ತಮ ಸಾಧನೆ ಮಾಡಬಹುದು ಎಂದರು.
ನಗರಸಭೆ ಸದಸ್ಯ ಗುಂಡೇಶ್‌ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೇ ಸತತ ಅಭ್ಯಾಸ ಮಾಡಿದರೆ ಉತ್ತಮ ಅಂಕಗಳಿಸಬಹುದು. ತಂದೆ-ತಾಯಿಗಳು ನಿಮ್ಮ ಮೇಲೆ ಬೆಟ್ಟದಷ್ಟು ಆಸೆ ಆಕಾಂಕ್ಷೆಗಳನ್ನು ಹೊತ್ತು ಶಿಕ್ಷಣ ಕೊಡಿಸುತ್ತಿದ್ದು, ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ನು ಮರೆಯಬಾರದು ಎಂದರು.
ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೊಂಡ್ಲಹಳ್ಳಿ ಉಪನ್ಯಾಸಕ ರಂಗಸ್ವಾಮಿ ಮಾತನಾಡಿದರು. ಮುಖಂಡರಾದ ತುರುವನೂರು ಜಗನ್ನಾಥ್, ಹುಚ್ಚವ್ವನಹಳ್ಳಿ ವೆಂಕಟೇಶ್, ಉಪನ್ಯಾಸಕರಾದ ಕೆ.ರಂಗಪ್ಪ, ಶಾಂತಕುಮಾರ್, ಎಚ್.ಆರ್. ಲೋಕೇಶ್, ಈ.ನಾಗೇಂದ್ರಪ್ಪ, ಈ.ಪ್ರಕಾಶ್, ಮಂಜು, ಚೇತನ್ ಕುಮಾರ್, ಮುಖ್ಯಶಿಕ್ಷಕಿ ವಿದ್ಯಾ ಯಾದವ್, ಯಾಸ್ಮಿನ್, ನಾಸೀನ್, ಪವಿತ್ರ, ಅಂಬುಜಾ ಇದ್ದರು.