Advertisement

ಹಿಮೋಫಿಲಿಯಾ ರೋಗಿಗಳ ಶ್ರೇಯಕ್ಕೆ ಕೈ ಜೋಡಿಸಿ

03:46 PM Apr 29, 2018 | Team Udayavani |

ದಾವಣಗೆರೆ: ಹಿಮೋಫಿಲಿಯಾ ರೋಗಿಗಳ ಶ್ರೇಯಕ್ಕಾಗಿ ಸಮಾಜದ ಸರ್ವರೂ ಕೈಜೋಡಿಸಬೇಕಿದೆ ಎಂದು ಚಲನಚಿತ್ರ ನಟ ಚೇತನ್‌ ಹೇಳಿದ್ದಾರೆ.

Advertisement

ಶನಿವಾರ, ನಗರದ ನಿಜಲಿಂಗಪ್ಪ ಬಡಾವಣೆಯ ರಿಂಗ್‌ ರಸ್ತೆಯಲ್ಲಿನ ಹಿಮೋಫಿಲಿಯಾ ಸೊಸೈಟಿ ಆವರಣದಲ್ಲಿ ಹಮ್ಮಿಕೊಂಡ ಜ್ಞಾನ ಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಮೋಫಿಲಿಯಾ ರೋಗದ ಬಗ್ಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹೆಚ್ಚು ಜನ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸುರೇಶ್‌ ಹನಗವಾಡಿ ಮತ್ತು ಅವರ ಸಂಗಡಿಗರ ಕೆಲಸ ನಿಜಕ್ಕೂ ಶ್ಲಾಘನೀಯ. ನಾವೆಲ್ಲಾ ಅವರೊಂದಿಗೆ ಕೈ ಜೋಡಿಸಬೇಕು ಎಂದರು.

ಕಳೆದ ಐದಾರು ವರ್ಷಗಳಿಂದ ದಾವಣಗೆರೆಯಲ್ಲಿ ಅನೇಕ ಸಮಾಜಮುಖಿ ಕೆಲಸ ನಡೆಯುತ್ತಿವೆ. ದಲಿತೋತ್ಸವ, ದೇವದಾಸಿ ಪದ್ಧತಿ ವಿಮೋಚನೆಯಂತಹ ಕಾರ್ಯಕ್ರಮ ನಡೆಯುತ್ತಿವೆ. ಈ ಸಾಲಿನಲ್ಲಿ ಹಿಮೋಫಿಲಿಯಾ ಸೊಸೈಟಿಯ ಉತ್ತಮ ಕಾರ್ಯ ಸಹ ಸೇರಿಕೊಂಡಿದೆ ಎಂದ ಅವರು, ಹಿಮೋಫಿಲಿಯಾ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಹೆಚ್ಚು ಆಸಕ್ತಿ ಇತ್ತು. ಈ ಕಾಯಿಲೆ ಬಗ್ಗೆ ಇತಿಹಾಸದಲ್ಲಿಯೇ ದಾಖಲೆಗಳಿವೆ. ರಷ್ಯಾ ದೊರೆ ನಿಕೋಲಸ್‌ನ ಎರಡನೇ ಮಗನಿಗೆ ಈ ಕಾಯಿಲೆ ಇತ್ತು ಎಂದು ಅವರು ತಿಳಿಸಿದರು.

ವಿಜ್ಞಾನ ಮುಂದುವರಿದಂತೆಲ್ಲ ಈ ಕಾಯಿಲೆಗೆ ಔಷಧ ಕಂಡು ಹಿಡಿಯಲಾಗಿದೆ. ಆದರೆ ಈ ಔಷಧಗಳ ಬೆಲೆ ತುಂಬಾ ದುಬಾರಿಯಾಗಿರುವುದರಿಂದ ಮಧ್ಯಮ ಮತ್ತು ಬಡ ಕುಟುಂಬದವರು ಹಣ ಹೊಂದಿಸುವುದು ಕಷ್ಟ ಎಂದರು.

ಸೊಸೈಟಿ ಸಂಸ್ಥಾಪಕ ಡಾ| ಸುರೇಶ್‌ ಹನಗವಾಡಿ ಮಾತನಾಡಿ, 27 ವರ್ಷಗಳಿಂದ ಹಿಮೋಫಿಲಿಯಾ ಸೊಸೈಟಿ ಮೂಲಕ ನಾವು ಸೇವೆ ಮಾಡಿಕೊಂಡು ಬಂದಿದ್ದೇವೆ. ಕಿರುವಾಡಿ ಗಿರಿಜಮ್ಮನವರು ಈ ನಿವೇಶನ ದಾನ ಕೊಡಿಸುವ ಮೂಲಕ ಸೇವೆಗೆ ಅನುವು ಮಾಡಿಕೊಟ್ಟಿದ್ದಾರೆ. ಈಗ ದಾವಣಗೆರೆಯಲ್ಲಿ 126 ಹಿಮೋಫಿಲಿಯಾ ರೋಗಿಗಳಿದ್ದಾರೆ. ಕರ್ನಾಟಕದಲ್ಲಿ 6 ಸಾವಿರಕ್ಕೂ ಅ ಧಿಕ ಹಿಮೋಫಿಲಿಯಾ ರೋಗಿಗಳಿದ್ದು. ಈ ಪೈಕಿ 2 ಸಾವಿರ ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 4 ಸಾವಿರಕ್ಕೂ ಹೆಚ್ಚು ಜನರು ಚಿಕಿತ್ಸೆಯಿಂದ ಹೊರಗಿದ್ದಾರೆ ಎಂದರು.

Advertisement

ದೇಶದಲ್ಲಿ ಪ್ರತಿ ಹತ್ತು ಸಾವಿರ ಜನರಲ್ಲಿ ಒಬ್ಬರಿಗೆ ಹಿಮೋಫಿಲಿಯಾ ರೋಗ ಕಂಡುಬರುತ್ತಿದೆ. ಹಾಲಿ ದೇಶದ 1 ಲಕ್ಷಕ್ಕೂ ಅಧಿಕ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಹೆಚ್ಚು ಜಾಗೃತಿ ಇಲ್ಲದೇ ಇರುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದರು.

ಪ್ರತಿವರ್ಷ ಏ. 17ರಂದು ವಿಶ್ವ ಹಿಮೋಫಿಲಿಯಾ ದಿನ ಆಚರಿಸಲಾಗುವುದು. ಹಾಗಾಗಿ ಸಾರ್ವಜನಿಕರ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವ ಹಿಮೋಫಿಲಿಯಾ ಫೆಡರೇಷನ್‌ನ್ನು 1963ರಲ್ಲಿ ಕೆನಡಾ ದೇಶದ ಮಾಂಟ್ರಿಯಲ್‌ನಲ್ಲಿ ವ್ಯಾಪಾರಿ ಫ್ರಾಂಕ್‌ ಶಾನ್‌ ಬೆಲ್‌ ಹುಟ್ಟು ಹಾಕಿದ್ದು, ಆ ನಿಮಿತ್ತ ಈ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು. ದಾನಿಗಳಾದ ಕಿರುವಾಡಿ ಗಿರಿಜಮ್ಮ, ಹೈಕೋರ್ಟ್‌ ವಕೀಲ ಅನಂತ ನಾಯ್ಕ, ಮೀರಾ ಹನಗವಾಡಿ ಇತರರು ಈ ವೇಳೆ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next