Advertisement

ಯೋಗಾಭ್ಯಾಸದಿಂದ ಜ್ಞಾನ, ಮಾನಸಿಕ ಚೈತನ್ಯ ವೃದ್ಧಿ

07:28 AM Feb 13, 2019 | Team Udayavani |

ಹಾಸನ: ಯೋಗ ಮಾಡುವುದರಿಂದ ಜ್ಞಾನ ವೃದ್ಧಿ, ಮನಸ್ಸಿನಲ್ಲಿ ಉತ್ಸಾಹ ತುಂಬಿರುತ್ತದೆ ಎಂದು ಪತಂಜಲಿ ಯೋಗ ಸಮಿತಿಯ ಹರಿಹರಪುರ ಶ್ರೀಧರ್‌ ಹೇಳಿದರು. ರಥಸಪ್ತಮಿ ದಿನದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಪತಂಜಲಿ ಯೋಗ ಪರಿವಾರದಿಂದ ಮಂಗಳವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಆರೋಗ್ಯ ವೃದ್ಧಿ: ದಿನದ ಕೆಲ ಸಮಯವನ್ನು ಯೋಗಕ್ಕೆ ಮೀಸಲಿಡುವುದರಿಂದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಯೋಗ ಮಾಡುವುದಕ್ಕೆ ವಯಸ್ಸಿನ ಮಿತಿ ಇಲ್ಲ. ಚಿಕ್ಕ ವಯಸ್ಸಿನವರಿಂದ ದೊಡ್ಡವರವರೆಗೂ, ಕುಟುಂಬದ ಎಲ್ಲಾ ಸದಸ್ಯರೂ ಯೋಗ ಮಾಡಬಹುದು. ಪತಂಜಲಿ ಪರಿವಾರದಿಂದ ಪ್ರತಿನಿತ್ಯ ಯೋಗಾಭ್ಯಾಸವನ್ನು ಹೇಳಿಕೊಡಲಾಗುತ್ತಿದೆ. ಹಾಸನ ನಗರದ ಆಯಾಯ ವಾರ್ಡಿನಲ್ಲಿ ಯೋಗ ಹೇಳಿಕೊಡಲಾಗುತ್ತಿದೆ ಎಂದರು.

ಬಾಬಾ ರಾಮದೇವ್‌ ಅವರು, ಯೋಗಕ್ಕಾಗಿ ಒಂದು ಪೀಠವನ್ನು ಸ್ಥಾಪನೆ ಮಾಡಿದ್ದಾರೆ. ಇಂತಹ ಕ್ರಮ ವಿಶ್ವದಲ್ಲಿಯೇ ಪ್ರಥಮ. ಈ ಪೀಠದ ಮಾರ್ಗದರ್ಶನದಲ್ಲಿ ಇಡೀ ವಿಶ್ವದಲ್ಲಿ ಯೋಗಾಭ್ಯಾಸ ನಡೆಯುತ್ತಿದೆ. ಯೋಗ ಪೀಠದಲ್ಲಿ ಯಾವ ದೇವಸ್ಥಾನಗಳಿಲ್ಲ. ನಮ್ಮ ಒಳಗಿನ ಭಗವಂತನನ್ನು, ಆ ಚೈತನ್ಯವನ್ನು ಜನರಿಗೆ ತಿಳಿಸಬೇಕು. ನಿಟ್ಟಿನಲ್ಲಿ ರಥ ಸಪ್ತಮಿಯ ದಿನದಂದು ಸೂರ್ಯ ನಮಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಹೇಳಿದರು. 

ರಥಸಪ್ತಮಿ ಶ್ರೇಷ್ಠದಿನ: ರಥ ಸಪ್ತಮಿಯ ಇಂದಿನ ದಿನ ಅತ್ಯಂತ ಶ್ರೇಷ್ಠವಾದ ದಿನ. ಇಂದಿನಿಂದ ಸೂರ್ಯನು ದಕ್ಷಿಣದಿಂದ ಉತ್ತರಾಭಿಮುಖವಾಗುತ್ತಾನೆ. ದಿನದಂದು ಉತ್ತಮ ಕೆಲಸಕ್ಕೆ ಸ್ಪೂರ್ತಿ ಬರುತ್ತದೆ. ಇಂದು ಸೂರ್ಯನ ಹತ್ತಿರ ಭೂಮಿ ಹೋಗುವುದರಿಂದ ಶಕ್ತಿ ಹೆಚ್ಚುಗುತ್ತದೆ. ಹಾಗಾಗಿ ನಮ್ಮೊಳಗಿನ ಚೈತನ್ಯವನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಸಂಕಲ್ಪ ಮಾಡಿಕೊಳ್ಳಬೇಕಾದ ದಿನವಾಗಿದೆ ಎಂದು ಹೇಳಿದ ಅವರು, ರೈತನು ಕೂಡ ಮೊದಲು ಸೂರ್ಯ ನಮುಸ್ಕಾರ ಮಾಡುತ್ತಾನೆ. ಏಕೆಂದರೆ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಎಂದರೆ ಸೂರ್ಯ ಎಂದು ತಿಳಿಸಿದರು. 

ದೇಹ, ಮನದ ಸಮ್ಮಿಲನ ಯೋಗ: ಪ್ರಾಸ್ತಾವಿಕ ನುಡಿಗಳನ್ನಾಡಿದ ಭಾರತ್‌ ಸ್ವಾಭಿಮಾನ್‌ ಟ್ರಸ್ಟ್‌ ಜಿಲ್ಲಾ ಪ್ರಭಾರಿ ಶೇಷಪ್ಪ ಅವರು, ಯೋಗ ಎಂದರೇ ಬಂಧಿಸು. ಜೋಡಿಸು ಎಂದರ್ಥ. ನಮ್ಮ ಮನಸ್ಸು ಮತ್ತು ದೇಹವನ್ನು ಕೂಡಿಸಿದಾಗ ಯೋಗವಾಗುತ್ತದೆ. ಹಾಗೆಯೇ ನಾವೆಲ್ಲರು ಒಂದುಗೂಡಿ ಮಾಡಿದಾಗ ವಿಶ್ವವನ್ನು ಯೋಗಮಯವನ್ನಾಗಿ ಮಾಡಬಹುದು. ಭಾರತವನ್ನು ವಿಶ್ವಗುರುವನ್ನಾಗಿ ಮಾಡಬಹುದು ಎಂದರು. 

Advertisement

ಮುಂಜಾನೆ 5.30ಕ್ಕೆ ಸರಿಯಾಗಿ ಪ್ರಾರಂಭವಾದ 108 ಸೂರ್ಯ ನಮುಸ್ಕಾರವು 6. 45ರ ವರೆಗೂ ನಡೆಯಿತು. ಸೂರ್ಯ ಉದಯಿಸುವ ವೇಳೆಗೆ 108 ಸೂರ್ಯ ನಮುಸ್ಕಾರವನ್ನು ಅಂತ್ಯಗೊಳಿಸಿದರು. ಪತಂಜಲಿ ಯೋಗ ಸಮಿತಿಯ ಹರಿಹರಪುರ ಶ್ರೀಧರ್‌ ಮಾರ್ಗದರ್ಶನದಲ್ಲಿ ಪರಿವಾರದವರು ಒಂದು ಗಂಟೆಗಳ ಕಾಲ ಸೂರ್ಯ ನಮುಸ್ಕಾರವನ್ನು ಹೇಳಿಕೊಟ್ಟರು. 

ಪತಂಜಲಿ ಯೋಗ ಸಮಿತಿ ಪರಿವಾರದ ಪ್ರಭಾರಿಗಳಾದ ಗಿರೀಶ್‌, ಸುರೇಶ್‌ ಪ್ರಜಾಪತಿ, ಮಹಿಳಾ ಪ್ರಭಾರಿ ಹೇಮಲತಾ, ರಾಜೇಶ್‌, ರಂಗನಾಥ್‌, ನಂದಕುಮಾರ್‌, ದಯಾನಂದ್‌, ದೊರೆಸ್ವಾಮಿ, ಮಂಜುನಾಥ್‌, ನಾಗೇಶ್‌, ಚಂದ್ರಕಲಾ, ರುಕ್ಮಿಣಿ ಮತ್ತಿತರರು ಸಾಮೂಹಿಕ 108 ಸೂರ್ಯ ನಮುಸ್ಕಾರದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next