ಸಾಂಪ್ರದಾಯಿಕವಾಗಿ ನಮಗೆ ತಿಳಿದಿರುವ ಹಣ ಉಳಿಸುವ ಸುಲಭೋಪಾಯ ಎಂದರೆ RD ಅರ್ಥಾತ್ ರಿಕರಿಂಗ್ ಡೆಪಾಸಿಟ್. ಪ್ರತೀ ತಿಂಗಳೂ ನಿರ್ದಿಷ್ಟ ಮೊತ್ತವನ್ನು, ನಿರ್ದಿಷ್ಟ ಅವಧಿಗೆ ಕಟ್ಟುತ್ತಾ ಹೋಗುವುದನ್ನು ನಾವು RD ಎನ್ನುತ್ತೇವೆ. ಆದರೆ ಈಗ ಹೊಸ ಬಗೆಯ RD ಯನ್ನು ಬ್ಯಾಂಕುಗಳು ಗ್ರಾಹಕರಿಗೆ ಪರಿಚಯಿಸಿವೆ. ಅದೇ FLEXI RD.
ಬದುಕಿನಲ್ಲಿ ನಾವು ಹಣ ಉಳಿಸಬೇಕೇನೋ ನಿಜ; ಆದರೆ ಅದರ ಉದ್ದೇಶವನ್ನು ಕೂಡ ನಾವು ಮುಂಚಿತವಾಗಿ, ಖಚಿತವಾಗಿ ತಿಳಿದಿರುವುದು ಅಗತ್ಯ. ಆಗ ಮಾತ್ರವೇ ನಮಗೆ ಉಳಿತಾಯದಲ್ಲಿ ಶಿಸ್ತು ಬರಲು ಸಾಧ್ಯ !
ಬದುಕಿನಲ್ಲಿ ನಮಗೆ ಎಷ್ಟೋ ಬಗೆಯ ಆಸೆ ಆಕಾಂಕ್ಷೆಗಳು ಇರುತ್ತವೆ. ಅವುಗಳನ್ನು ಈಡೇರಿಸಿಕೊಳ್ಳಲು ಹಣ ನಮಗೆ ಬಹಳ ಅಗತ್ಯ. ಆದರೆ ಅದಕ್ಕಾಗಿ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ನಮ್ಮಲ್ಲಿ ಕೈಯಲ್ಲಿ ಇರುವುದಿಲ್ಲ. ಹಾಗೆಂದು ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ನಾವು ಸರ್ವಥಾ ಸಾಲ ಮಾಡಬಾರದು. ಸಾಲ ಎನ್ನುವುದು ಒಂದು ವಿಷ ವರ್ತುಲ. ನಮ್ಮ ಬದುಕಿನ ತುರ್ತು ಹೇಗಿರುತ್ತದೆ ಎಂದರೆ ಒಂದು ಸಾಲ ತೀರಿಸುವ ಮುನ್ನವೇ ಅದಕ್ಕಿಂತ ದೊಡ್ಡ ಮೊತ್ತದ ಬೇರೊಂದು ಸಾಲ ಪಡೆದು ಅದರ ಹಣವನ್ನು ಹಿಂದಿನ ಸಾಲ ತೀರಿಸಲು ಬಳಸುವ ಅನಿವಾರ್ಯತೆಗೆ ಗುರಿಯಾಗುವುದು.
ಆದುದರಿಂದಲೇ ಸಾಲ ಎನ್ನುವುದು ಅತ್ಯಂತ ಅಪಾಯಕಾರಿ ವಿಷ ವರ್ತುಲ ಎನ್ನುವುದು. ಆದುದರಿಂದಲೇ ಹನಿ ಕೂಡಿ ಹಳ್ಳ, ತೆನೆ ಕೂಡಿ ಕಣಜ ಎಂಬ ಜನಪದ ಮಾತಿಗೆ ಅನುಗುಣವಾಗಿ ನಾವು ಹಣ ಉಳಿಸುವುದನ್ನು ಕಲಿಯಬೇಕು. ನಿಜವಾದ ಅರ್ಥದಲ್ಲಿ ಹಣ ಉಳಿಸುವುದು ಒಂದು ಕಲಿಕೆಯೇ. ಬದುಕು ಕಲಿಸುವ ಪಾಠದಿಂದ ನಮಗೆ ಈ ಕಲಿಕೆ ಅನಿವಾರ್ಯವಾಗುತ್ತದೆ.
ಆ ಮಾತು ಹಾಗಿರಲಿ; ಚಿಕ್ಕಪ್ರಾಯದಲ್ಲೇ 20 ವರ್ಷಗಳ ದೀರ್ಘಾವಧಿಯ ಪೋಸ್ಟಲ್ RD ಮಾಡುವುದು ಅತ್ಯಂತ ಸುಲಭದಲ್ಲಿ ಸಂಪತ್ತನ್ನು ಕಲೆ ಹಾಕುವ ವಿಧಾನ ಎಂಬುದು ಅನೇಕರಿಗೆ ಗೊತ್ತೇ ಇರುವುದಿಲ್ಲ. RD ಎನ್ನುವ ಚಿಕಣಿ ಉಳಿತಾಯ ವಿಧಾನದಲ್ಲಿ ಪರ್ವತ ಗಾತ್ರಕ್ಕೆ ಬೆಳೆಯುತ್ತಾ ಹೋಗುವ ಹಣದ ಮೊತ್ತ ಎಷ್ಟೋ ವೇಳೆ ನಂಬಲು ಸಾಧ್ಯವೇ ಇಲ್ಲ ಎನ್ನುವಷ್ಟು ದೊಡ್ಡದಿರುತ್ತದೆ.
ಸಾಂಪ್ರದಾಯಿಕ RDಯಲ್ಲಿ ನಾವು ಮೊದಲೇ ಒಪ್ಪಿಕೊಂಡ ಕಂತನ್ನು ಕಟ್ಟುತ್ತೇವೆ. ಒಮ್ಮೆ ಒಪ್ಪಿಕೊಂಡ ಮೊತ್ತವನ್ನು ಮತ್ತೆ ಹಿಗ್ಗಿಸಲು ಅಥವಾ ಕುಗ್ಗಿಸಲು ಸಾಧ್ಯವಿಲ್ಲ. ಒಂದು RD ಓಪನ್ ಮಾಡಿದ ಬಳಿಕ ನಮ್ಮಲ್ಲಿ ಉಳಿತಾಯ ಮಾಡಲು ಸಾಧ್ಯವಿರುವ ಬೇರೊಂದು ಮೊತ್ತ ಇದೆ ಎಂದಾದರೆ ನಾವು ಇನ್ನೊಂದು ಪ್ರತ್ಯೇಕ RDಯನ್ನು ತೆರೆಯಬೇಕಾಗುತ್ತದೆ. ಎಂದರೆ RDಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋಗುತ್ತದೆ.
ಈಗ ಕಾಲ ಬದಲಾಗಿದೆ. ಕೆಲವೊಂದು ಸಾರ್ವಜನಿಕ ಮತ್ತು ಖಾಸಗಿ ರಂಗದ ಬ್ಯಾಂಕುಗಳು ಈಚೆಗೆ FLEXI RD ಸೌಕರ್ಯವನ್ನು ಸಣ್ಣ ಹಾಗೂ ಮಧ್ಯಮ ಮಟ್ಟದ ಗ್ರಾಹಕರಿಗಾಗಿ ಆರಂಭಿಸಿದೆ. ಇದು ನಿಜಕ್ಕೂ ಆಕರ್ಷಕವಾಗಿದೆ.
FLEXI RD ಎಂದರೆ ಖಾತೆ ತೆರೆಯುವಾಗ ಒಪ್ಪಿಕೊಂಡ ಕಂತನ್ನು ಕಟ್ಟುತ್ತಾ ಹೆಚ್ಚುವರಿ ಉಳಿತಾಯದ ಅನಿಗದಿತ ಮೊತ್ತವನ್ನು ಅನಿಗದಿತ ದಿನಾಂಕದಂದು ಮೂಲ ಖಾತೆಗೆ ಸೇರಿಸುತ್ತಾ ಹೋಗುವ ಸೌಕರ್ಯ.
ಆದುದರಿಂದ ಇಲ್ಲಿ ಕಂತು ಕಟ್ಟುವ ಮೊತ್ತ ಫ್ಲೆಕ್ಸಿ ಆಗಿರುತ್ತದೆ. ತಿಂಗಳಿಗೆ 500 ರೂ. ಆರ್ ಡಿ ಖಾತೆಯನ್ನು ತೆರೆದೆವು ಎಂದಿಟ್ಟುಕೊಳ್ಳೋಣ. ಈ ಮೂಲ ಆರ್ ಡಿ ಕಂತನ್ನು ನಾವು ಒಪ್ಪಿಕೊಂಡ ಅವಧಿ ಮುಗಿಯುವ ತನಕ, ಒಪ್ಪಿಕೊಂಡ ನಿರ್ದಿಷ್ಟ ದಿನದಂದು, ಪ್ರತೀ ತಿಂಗಳು ಕಟ್ಟುತ್ತಲೇ ಹೋಗುವುದು ಕಡ್ಡಾಯ ಮತ್ತು ಅನಿವಾರ್ಯ.
ಆದರೆ ಹೆಚ್ಚುವರಿಯಾಗಿ ಯಾವುದೇ ತಿಂಗಳಲ್ಲಿ 500, 1,000, 1,500, 2,000 ಹೀಗೆ ನಮ್ಮಲ್ಲಿ ಇರಬಹುದಾದ ಉಳಿತಾಯದ ಹಣವನ್ನು ಮೂಲ FLEXI RD ಖಾತೆಗೆ ಜಮೆ ಮಾಡುತ್ತಾ ಹೋಗಬಹುದು. ಈ ಫ್ಲೆಕ್ಸಿ ಅನಕೂಲತೆಯಿಂದ ನಾವು ಇನ್ನೊಂದು RD ಮಾಡುವ ಅಗತ್ಯವಿಲ್ಲ; ಇರುವ ಆರ್ ಡಿಯನ್ನೇ ಬಳಸಿಕೊಂಡು ಮೊತ್ತವನ್ನು ಹಿಗ್ಗಿಸುತ್ತಾ ಸಾಗಬಹುದು. ಹೆಚ್ಚುವರಿಯಾಗಿ, ಅನಿಗದಿತವಾಗಿ ಮೂಲ ಆರ್ ಡಿ ಖಾತೆಗೆ ಕಟ್ಟುವ ಹಣಕ್ಕೆ ಮೂಲ ಖಾತೆಗೆ ಸಿಗುವುದಕ್ಕಿಂತ ಭಿನ್ನವಾದ ಬಡ್ಡಿ ಸಿಗುತ್ತದೆ. ಅದೇನಿದ್ದರೂ ಫ್ಲೆಕ್ಸಿ ಆರ್ ಡಿ ಎನ್ನುವುದು ನೋಡ ನೋಡುತ್ತಿದ್ದಂತೆಯೇ ನಮ್ಮ ಉಳಿತಾಯವನ್ನು ಬೆಟ್ಟದ ಗಾತ್ರಕ್ಕೆ ಏರಿಸುವ ಒಂದು ಸೌಕರ್ಯ ಎನ್ನಲು ಅಡ್ಡಿ ಇಲ್ಲ.
FLEXI RD ಯೋಜನೆಯನ್ನು ಈಚೆಗೆ ಕೆನರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, SBI, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕರೂರ್ ವೈಶ್ಯ ಬ್ಯಾಂಕ್ ಆರಂಭಿಸಿವೆ. ಇಂಡಿಯನ್ ಬ್ಯಾಂಕ್ FLEXI RD ಖಾತೆಯನ್ನು ಕನಿಷ್ಠ 25 ರೂ. ಮೂಲ ಕಂತಿನೊಂದಿಗೆ ಆರಂಭಿಸಬಹುದಾಗಿದೆ. ಕರೂರ್ ವೈಶ್ಯ ಬ್ಯಾಂಕ್ ನಲ್ಲಿ FLEXI RD ಖಾತೆ ಆರಂಭಿಸಲು ನಿಗದಿಯಾಗಿರುವ ಕನಿಷ್ಠ ಕಂತಿನ ಮೊತ್ತವೇ 1,000 ರೂಪಾಯಿಯಾದರೆ SBI ನಲ್ಲಿ 500 ರೂಪಾಯಿ.
FLEXI RD ಖಾತೆಯನ್ನು ಆರಂಭಿಸಿದ ಮೂಲ ಕಂತು 500 ರೂ. ಇದ್ದಲ್ಲಿ, ಆಯಾ ತಿಂಗಳಲ್ಲಿ ನಾವು ಇದೇ ಖಾತೆಗೆ ಜಮೆ ಮಾಡಬಹುದಾದ ಹೆಚ್ಚುವರಿ ಮೊತ್ತವು 500 ರೂ.ಗಳ ಗುಣಾಕರದಲ್ಲಿ ಎಂದರೆ, 500, 1,000 ರೂ. ಪ್ರಮಾಣದಲ್ಲಿ ಇರಬೇಕಾಗುತ್ತದೆ. ನಮಗೆ ಯಾವುದೇ ಮೂಲಗಳಿಂದ, ಬೋನಸ್ ರೂಪದಲ್ಲಿ, ಡಿವಿಡೆಂಡ್ ರೂಪದಲ್ಲಿ , ಬಡ್ಡಿ ರೂಪದಲ್ಲಿ ಅಥವಾ ಬೇರೆ ಯಾವುದೇ ರೀತಿಯಲ್ಲಿ ದೊರಕುವ ಆದಾಯವನ್ನು ನಾವು ಹೆಚ್ಚುವರಿ ಮೊತ್ತವಾಗಿ ಆರ್ ಡಿ ಖಾತೆಗೆ ಹಾಕಬಹುದಾಗಿರುತ್ತದೆ.
ನಾವು ಬ್ಯಾಂಕುಗಳಲ್ಲಿ ಇಡುವ ನಿರ್ದಿಷ್ಟ ಅವಧಿಯ ಠೇವಣಿಗೆ (ಟರ್ಮ್ ಡಿಪಾಸಿಟ್)ಗಳಿಗೆ ಅನ್ವಯವಾಗುವ ಬಡ್ಡಿಯನ್ನೇ ಸಾಮಾನ್ಯವಾಗಿ ಬ್ಯಾಂಕುಗಳ ಸಮಾನ ಅವಧಿಗೆ ಗ್ರಾಹಕರು ಆರಂಭಿಸುವ FLEXI RD ಗೆ ನೀಡುತ್ತವೆ ಎನ್ನುವುದು ಗಮನಾರ್ಹ. FLEXI RD ಯನ್ನು ಕನಿಷ್ಠ ಮೂರು ತಿಂಗಳ ಅವಧಿಯಿಂದ ತೊಡಗಿ ಹತ್ತು ವರ್ಷಗಳ ವರೆಗಿನ ಅವಧಿಗೆ ಮಾಡಬಹುದಾಗಿದೆ.
ಒಂದು ಸಣ್ಣ ಉದಾಹರಣೆಯಾಗಿ ನಾವು ಎರಡು ವರ್ಷಗಳ ಅವಧಿಗೆ ತಿಂಗಳ 1,000 ರೂ. ಕಂತಿನ ಫ್ಲೆಕ್ಸಿ ಆರ್ಡಿ ಆರಂಭಿಸಿದೆವು ಎಂದಿಟ್ಟು ಕೊಳ್ಳೋಣ. ಈ ಆರ್ಡಿಯ 12ನೇ ತಿಂಗಳಲ್ಲಿ ನಾವು (1000 + 1000) 2,000 ರೂ. ಕಂತನ್ನು ಕಟ್ಟಿದಲ್ಲಿ ಹೆಚ್ಚುವರಿಯಾಗಿ ಕಟ್ಟಿರುವ 1,000 ರೂ.ಗೆ ಎರಡು ವರ್ಷಗಳ ನಿರಖು ಠೇವಣಿಗೆ ಸಲ್ಲುವ ಬಡ್ಡಿಯು ಅನ್ವಯವಾಗುತ್ತದೆ. ಸಾಮಾನ್ಯವಾಗಿ ನಮಗೆ ಫ್ಲೆಕ್ಸಿ ಆರ್ಡಿ ಯ ಮೂಲ ಕಂತಿನ ಐದರಿಂದ ಹತ್ತು ಪಟ್ಟು ಹೆಚ್ಚುವರಿ ಮೊತ್ತವನ್ನು ಕಟ್ಟುವುದಕ್ಕೆ ಅವಕಾಶವಿರುತ್ತದೆ. ಆದರೆ ಯಾವುದೇ ತಿಂಗಳಲ್ಲಿ ಒಪ್ಪಿಕೊಂಡ ಮೂಲ ಕಂತಿನ ಮೊತ್ತಕ್ಕಿಂತ ಕಡಿಮೆ ಹಣವನ್ನು ಕಟ್ಟುವುದಕ್ಕೆ ಸರ್ವಥಾ ಅವಕಾಶ ಇರುವುದಿಲ್ಲ.
ಸಾಂಪ್ರದಾಯಿಕ ಆರ್ ಡಿ ಸ್ಕೀಮಿನಂತೆ FLEXI RD ಸ್ಕೀಮಿನಲ್ಲಿ ಕೂಡ ಸಂಗ್ರಹಗೊಂಡ ಮೊತ್ತದ ಶೇ.75ರಿಂದ 90ರಷ್ಟು ಹಣವನ್ನು ನಮ್ಮ ತುರ್ತು ಅಗತ್ಯಕ್ಕೆ ಸಾಲವಾಗಿ ಪಡೆಯುವ ಸೌಕರ್ಯವೂ ಇದೆ. ಸಹಜವಾಗಿಯೇ ಇದಕ್ಕೆ ನಮಗೆ ಆರ್ಡಿಗೆ ಸಲ್ಲುವ ಬಡ್ಡಿಗಿಂತ ಸ್ವಲ್ಪ ಹೆಚ್ಚಿನ ಬಡ್ಡಿ ವಿಧಿಸಲಾಗುತ್ತದೆ. ಹಾಗೆಯೇ ಫ್ಲೆಕ್ಸಿ ಆರ್ಡಿ ಖಾತೆಯನ್ನು ನಾವು ಒಪ್ಪಿಕೊಂಡ ಅವಧಿಗೆ ಮುನ್ನವೇ ಮುಚ್ಚಿದಾಗ ನಮಗೆ ಸಲ್ಲಬೇಕಿರುವ ಬಡ್ಡಿಯಲ್ಲಿ ಪೆನಲ್ಟಿ ರೂಪದಲ್ಲಿ ಶೇ.0.5ರಷ್ಟನ್ನು ಕಡಿಮೆ ಮಾಡಿ ಖಾತೆಯನ್ನು ಸಂದಾಯ ಮಾಡುವ ಕ್ರಮವಿದೆ.
ಸಾಮಾನ್ಯವಾಗಿ, ನಿಯಮದ ಪ್ರಕಾರ FLEXI RDಯ ಒಪ್ಪಿಕೊಂಡ ಕಂತನ್ನು ಕನಿಷ್ಠ ನಾಲ್ಕು ತಿಂಗಳ ಕಾಲ ನಾವು ಕಟ್ಟದೇ ಹೋದಲ್ಲಿ ಆರ್ ಡಿ ಖಾತೆಯು ತನ್ನಿಂತಾನೇ ಮುಚ್ಚಲ್ಪಡುತ್ತದೆ ಮತ್ತು ಅಂತಹ ಸಂದರ್ಭದಲ್ಲಿ ಸಾಮಾನ್ಯ ಉಳಿತಾಯ ಖಾತೆಗೆ ಸಲ್ಲುವ ಶೇ.4ರ ಬಡ್ಡಿಯನ್ನು ಬ್ಯಾಂಕುಗಳು ಕೊಟ್ಟು ವ್ಯವಹಾರವನ್ನು ಸಂದಾಯ ಮಾಡುತ್ತವೆ.
ಒಂದು ವರ್ಷ ಅವಧಿಯಲ್ಲಿ FLEXI RD ಖಾತೆಯು ನಮಗೆ 10,000 ರೂ. ಮೀರಿದ ಮೊತ್ತದ ಬಡ್ಡಿಯನ್ನು ಕೊಟ್ಟಲ್ಲಿ ಬ್ಯಾಂಕಿನವರು ಕ್ರಮ ಪ್ರಕಾರ ಮೂಲದಲ್ಲೇ ತೆರಿಗೆಯನ್ನು (ಟಿಡಿಎಸ್) ಮುರಿದುಕೊಳ್ಳುತ್ತಾರೆ. ಒಂದೊಮ್ಮೆ ನಮ್ಮ ಆದಾಯವು ತೆರಿಗೆ ಮಿತಿಯೊಳಗೇ ಇದೆ ಎಂದಾದಲ್ಲಿ ಈ ಟಿಡಿಎಸ್ ಮಾಡದಿರುವಂತೆ ನಾವು ಬ್ಯಾಂಕಿಗೆ ಫಾರ್ಮ್ 15ಜಿ/15ಎಚ್ ತುಂಬಿಸಿ ಸಲ್ಲಿಸಬಹುದಾಗಿದೆ.
ಸಾಮಾನ್ಯವಾಗಿ ಶೇ.5ರಿಂದ ಶೇ.20 ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವವರಿಗೆ FLEXI RD ಉಳಿತಾಯ ತುಂಬಾ ಪ್ರಯೋಜನಕಾರಿ ಮತ್ತು ಲಾಭದಾಯಕ. ಸಣ್ಣ ಮೊತ್ತದ ಉಳಿತಾಯವನ್ನು ಏಕ ಗಂಟಿನಲ್ಲಿ ದೊಡ್ಡ ಮೊತ್ತದಲ್ಲಿ ಹೂಡುವುದಕ್ಕೆ ಪಡೆಯುವುದಕ್ಕೆ ಮತ್ತು ಅನಂತರದಲ್ಲಿ ಅದನ್ನು ಬೇರೆ ಮಾಧ್ಯಮಗಳಲ್ಲಿ ತೊಡಗಿಸುವುದಕ್ಕೆ ಪೂರಕ !