Advertisement

ಹಣದ ಉಗ್ರಾಣದ  ಸುತ್ತ…

12:30 AM Jan 21, 2019 | |

ಆರ್‌ಬಿಐ ಸಾಮಾನ್ಯವಾಗಿ ಪಡೆಯುವುದು ಚಲಾವಣೆಯಲ್ಲಿರುವ ಹಣವನ್ನೇ. ಒಂದು ವೇಳೆ ಹೆಚ್ಚು ಮೊತ್ತದ ಹಣ ಆರ್‌ಬಿಐ ಮೀಸಲು ನಿಧಿಯಲ್ಲಿ ಉಳಿದುಕೊಂಡರೆ ಅದು ಹಣಕಾಸು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿಯೇ ಬಹುತೇಕ ದೇಶಗಳಲ್ಲಿ ಈ ಬಗ್ಗೆ ಸ್ಪಷ್ಟ ಕಾನೂನು ರೂಪಿಸಲಾಗಿದೆ. ಇದರಿಂದ ಸರ್ಕಾರ ಹಲವು ರೀತಿಯಲ್ಲಿ ಅನುಕೂಲ ಪಡೆಯಬಹುದು. ಆರ್‌ಬಿಐ ಸರ್ಕಾರಕ್ಕೆ ಯಾವ ಪ್ರಮಾಣದಲ್ಲಿ ಹಣ ನೀಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ವಿಚಾರಕ್ಕಾಗಿ ಆರ್‌ಬಿಐ ಸಮಿತಿ ರಚಿಸಿದ್ದು, ಇದು ಹಂತ ಹಂತವಾಗಿ ಹೆಚ್ಚುವರಿ ಮೀಸಲು ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. 

Advertisement

ಇಚ್ಚೀಚೆಗೆ ರಿಸರ್ವ್‌ ಬ್ಯಾಂಕ್‌ನಲ್ಲಿರುವ ರಿಸರ್ವ್‌(ಮೀಸಲು ನಿಧಿ) ಹೆಚ್ಚುವರಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂಬ ಬಗ್ಗೆ ಭಾರಿ ಚರ್ಚೆ ನಡೆಯಿತು. ಈ ವಿಚಾರವೂ ಸೇರಿದಂತೆ ಇತರ ಕೆಲವು ವಿಷಯಗಳಲ್ಲಿ ಸರ್ಕಾರದ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದಲೇ ಊರ್ಜಿತ್‌ ಪಟೇಲ್‌ ಆರ್‌ಬಿಐ ಗವರ್ನರ್‌ ಹುದ್ದೆಗೆ ರಾಜೀನಾಮೆ ನೀಡಿದ್ದೂ ಆಗಿದೆ. ಆದರೆ ಆರ್‌ಬಿಐ ರಿಸರ್ವ್‌ನಲ್ಲಿ ಸಂಗ್ರಹವಾದ ಹೆಚ್ಚುವರಿ ಮೊತ್ತವನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕೆ? ಅದರಲ್ಲಿ ನಿಜಕ್ಕೂ ಹೆಚ್ಚುವರಿ ಮೊತ್ತವಿದೆಯೇ ? ಒಂದು ವೇಳೆ ಹೆಚ್ಚುವರಿ ಇದ್ದರೂ, ಅದನ್ನು ಆಪತ್ಕಾಲದಲ್ಲಿ ಬಳಸಿಕೊಳ್ಳದೇ ಸರ್ಕಾರಕ್ಕೆ ಹಸ್ತಾಂತರಿಸುವುದು ಸರಿಯೇ ಎಂಬ ಬಗ್ಗೆ ಇನ್ನೂ ಗೊಂದಲಗಳು ಜನರಲ್ಲಿ ಮನೆ ಮಾಡಿವೆ. ಈ ನಿಟ್ಟಿನಲ್ಲಿ ಆರ್‌ಬಿಐ ರಿಸರ್ವ್‌ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನದೇ ಮೀಸಲು ನಿಧಿಯನ್ನು ಸಂಗ್ರಹಿಸುತ್ತದೆ. ಇದು ಇಡೀ ದೇಶದ ಆಸ್ತಿ. ದೇಶ ಯಾವುದೇ ಆರ್ಥಿಕ ದುಃಸ್ಥಿತಿಗೆ ಎದುರಾದರೂ ಈ ನಿಧಿ ದೇಶವನ್ನು ರಕ್ಷಿಸುತ್ತದೆ. ಹಿಂದೆ 1991ರಲ್ಲಿ ತೈಲ ಬೆಲೆ ವಿಪರೀತ ಏರಿ, ಆಮದು ಮಾಡಿಕೊಂಡ ತೈಲಕ್ಕೆ ಹಣ ನೀಡಲಾಗದ ಸ್ಥಿತಿಯಲ್ಲಿ ಸರ್ಕಾರವಿದ್ದಾಗ ಇದೇ ಆರ್‌ಬಿಐ ರಿಸರ್ವ್‌ ಅನ್ನು ಮಾರಿ ಸಾಲ ತರಲಾಗಿತ್ತು. ಆಗ 47 ಟನ್‌ ಚಿನ್ನವನ್ನು ಜಪಾನ್‌ ಹಾಗೂ ಇಂಗ್ಲೆಂಡ್‌ನ‌ ಕೇಂದ್ರೀಯ ಬ್ಯಾಂಕ್‌ಗೆ ಚಂದ್ರಶೇಖರ್‌ ಸರ್ಕಾರ ಕಳುಹಿಸಿತ್ತು. ಇದರಿಂದ ಆಗಿನ ಕಾಲಕ್ಕೆ 40 ಕೋಟಿ ಡಾಲರ್‌ ಸರ್ಕಾರಕ್ಕೆ ಲಭ್ಯವಾಗಿತ್ತು. ಆಗಿನ ಪರಿಸ್ಥಿತಿ ಹೇಗಿತ್ತೆಂದರೆ ಇಡೀ ಆರ್‌ಬಿಐನಲ್ಲಿ ಕೇವಲ 1 ಸಾವಿರ ಕೋಟಿ ರೂ. ಉಳಿದುಕೊಂಡಿತ್ತು. ಒಂದು ವಾರಕ್ಕೆ ಸಾಲುವಷ್ಟೂ ವಿದೇಶಿ ವಿನಿಮಯ ನಷ್ಟವನ್ನು ತಡೆಯಲು ಆರ್‌ಬಿಐಗೆ ಆಗ ಸಾಧ್ಯವಿರಲಿಲ್ಲ!

ಇದು ಇಡೀ ದೇಶವನ್ನೇ ಬಚಾವ್‌ ಮಾಡಿದ ಒಂದು ಪ್ರಸಂಗ. ಇಂಥ ಸ್ಥಿತಿಗೆ ದೇಶ ತಲುಪುವ ಸಂದರ್ಭಗಳು ಅತ್ಯಂತ ಕಡಿಮೆಯಾದರೂ, ಹೀಗಾದಾಗೆಲ್ಲ ಮೀಸಲು ನಿಧಿ ಉಪಯೋಗಕ್ಕೆ ಬರುತ್ತದೆ. ಅಷ್ಟೇ ಅಲ್ಲ, ಆರ್‌ಬಿಐ ಮೀಸಲು ನಿಧಿ ಎಷ್ಟು ಆರೋಗ್ಯಕರವಾಗಿದೆ ಎಂಬುದು ದೇಶದ ಆರ್ಥಿಕತೆ ಎಷ್ಟು ಸರಾಗವಾಗಿದೆ ಎಂಬುದರ ದ್ಯೋತಕವೂ ಹೌದು. ಅದು ಹೆಚ್ಚಾ ಆಗಬಾರದು, ಕಡಿಮೆಯೂ ಆಗಬಾರದು. ಹಾಗೇನಾದರೂ ಆಗಿಬಿಟ್ಟರೆ, ವಿತ್ತ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. 

ಆದರೆ, ಆರ್‌ಬಿಐ ಮೀಸಲು ನಿಧಿ ಹೆಚ್ಚಾದಾಗ ಏನು ಮಾಡಬೇಕು ಎಂಬ ಸನ್ನಿವೇಶ ಈವರೆಗೂ ನಮ್ಮಲ್ಲಿ ಎದುರಾಗಿರಲೇ ಇಲ್ಲ. ಯಾಕೆಂದರೆ, ನಮ್ಮ ಆರ್ಥಿಕತೆ ಡಾಲರ್‌ ಮೇಲೆ ಅವಲಂಬಿಸಿದ್ದು, ಡಾಲರ್‌ ಮೌಲ್ಯ ಕುಸಿತವಾದಾಗಲೆಲ್ಲ ನಮ್ಮ ನಿಧಿಯ ಮೌಲ್ಯ ಹೆಚ್ಚಳವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆರ್‌ಬಿಐ ಮೀಸಲು ನಿಧಿಯಲ್ಲಿ ಗಮನಾರ್ಹವಾದ ಹೆಚ್ಚಳ ಕಂಡುಬಂದಿರಲೂ ಇಲ್ಲ. ಅಷ್ಟೇ ಅಲ್ಲ, ಕಾಲಕಾಲಕ್ಕೆ ಸರ್ಕಾರಕ್ಕೆ ಆರ್‌ಬಿಐ ಡಿವಿಡೆಂಡ್‌ ನೀಡುತ್ತಿದ್ದುದರಿಂದ ಹೆಚ್ಚುವರಿ ನಿಧಿಯನ್ನು ಏನು ಮಾಡಬೇಕು ಎಂಬುದು ಸಮಸ್ಯೆಯಾಗಿರಲೇ ಇಲ್ಲ. ಆದರೆ ಕಳೆದ ವರ್ಷಗಳಲ್ಲಿ ಡಾಲರ್‌ ಮೌಲ್ಯ ಕುಸಿದಿರುವುದು, ತೈಲ ಬೆಲೆ ಕುಸಿದಿರುವುದೂ ಸೇರಿದಂತೆ ಹಲವು ಕಾರಣಗಳಿಂದ ಮೀಸಲು ನಿಧಿಯ ಪ್ರಮಾಣ ಹಿಗ್ಗಿತು. ಆದರೆ ಅದನ್ನು ಏನು ಮಾಡಬೇಕು ಎಂಬ ಬಗ್ಗೆ ಆರ್‌ಬಿಐಗಾಗಲೀ ಸರ್ಕಾರಕ್ಕಾಗಲೀ ಸ್ಪಷ್ಟತೆ ಇಲ್ಲದಂತಾಯಿತು. ಇದು ಒಂದು ಹಂತದಲ್ಲಿ ರಾಜಕೀಯ ಆರೋಪ- ಪ್ರತ್ಯಾರೋಪಕ್ಕೂ ಕಾರಣವಾಯಿತು.

Advertisement

ಆರ್‌ಬಿಐನಲ್ಲಿ ಎಷ್ಟು ಹಣವಿದೆ?
ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮೂಲ ಬಂಡವಾಳವೇ ಈ ಮೀಸಲು ನಿಧಿ. ಸದ್ಯ ಆರ್‌ಬಿಐ ತನ್ನ ಖಜಾನೆಯಲ್ಲಿ 9.6 ಲಕ್ಷ ಕೋಟಿ ರೂ. ಗಳನ್ನು ಸಂಗ್ರಹಿಸಿಕೊಂಡಿದೆ. ಕಳೆದ ವರ್ಷಕ್ಕಿಂತ ಇದು 1.22 ಲಕ್ಷ ಕೋಟಿ ರೂ ಹೆಚ್ಚು. ಈ ಮೀಸಲು ನಿಧಿಯನ್ನು ವಿವಿಧ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇದರಲ್ಲಿ ಒಂದು ಭಾಗವನ್ನು ತುರ್ತು ನಿಧಿ ಎಂದು ಪರಿಗಣಿಸಿ ಅದರಲ್ಲಿ 2.32 ಲಕ್ಷ ಕೋಟಿ ರೂ. ಇಡಲಾಗಿದೆ. ಕರೆನ್ಸಿ ಮತ್ತು ಚಿನ್ನ ಮರುಮೌಲೀಕರಣ ವಿಭಾಗದಲ್ಲಿ 6.92 ಲಕ್ಷ ಕೋಟಿ ರೂ. ಇದೆ. ಸ್ವತ್ತು ಅಭಿವೃದ್ಧಿ ನಿಧಿಯಲ್ಲಿ 0.23 ಲಕ್ಷ ಕೋಟಿ ರೂ. ಇದೆ. ಅದೇ ರೀತಿ, ಹೂಡಿಕೆ ಮರುಮೌಲೀಕರಣ ಖಾತೆಯಲ್ಲಿ 0.13 ಲಕ್ಷ ಕೋಟಿ ರೂ. ಇದೆ.

ಆರ್‌ಬಿಐ ಮೀಸಲು ನಿಧಿಯನ್ನು ಹೇಗೆ ಸಂಗ್ರಹಿಸುತ್ತದೆ?
ಆರ್‌ಬಿಐ ವಿವಿಧ ಮೂಲಗಳಿಂದ ನಿಧಿಗೆ ಹಣಸಂಗ್ರಹಿಸುತ್ತದೆ. ಮೊದಲನೆಯದಾಗಿ ಸರ್ಕಾರಿ ಬಾಂಡ್‌ಗಳಿಂದ ಬಂದ ಬಡ್ಡಿ, ಸರ್ಕಾರದ ಸಾಲ ಪ್ರಕ್ರಿಯೆಯಿಂದ ಸಂಗ್ರಹಿಸಿದ ಶುಲ್ಕಗಳು ಮತ್ತು ವಿದೇಶಿ ಕರೆನ್ಸಿಯಲ್ಲಿ ಮಾಡಿದ ಹೂಡಿಕೆಯಿಂದ ಆದಾಯವನ್ನು ರಿಸರ್ವ್‌ ಬ್ಯಾಂಕ್‌ ಗಳಿಸುತ್ತದೆ. ಇನ್ನೊಂದೆಡೆ, ಪ್ರತಿ ವರ್ಷವೂ ಸರ್ಕಾರಕ್ಕೆ ಡಿವಿಡೆಂಡ್‌ ರೂಪದಲ್ಲಿ ಪಾವತಿ ಮಾಡಿದ ನಂತರ ಉಳಿದ ಹಣ ಮತ್ತು ವಿದೇಶಿ ಸ್ವತ್ತುಗಳು ಮತ್ತು ಚಿನ್ನದ ವಿನಿಮಯ ದರ ಬದಲಾದಾಗ ಅದರಿಂದ ಲಭ್ಯವಾಗುವ ಮೊತ್ತವೇ ರಿಸರ್ವ್‌ ಬ್ಯಾಂಕ್‌ನ ಗಳಿಕೆ. ಈ ಆದಾಯವೇ ಮೀಸಲು ನಿಧಿಯೂ ಆಗಿರುತ್ತದೆ.
 
ಹೆಚ್ಚುವರಿ ಹಣ 

ಸರ್ಕಾರದ ಪ್ರಕಾರ ಆರ್‌ಬಿಐಗೆ ಸಾಕಷ್ಟು ಪ್ರಮಾಣದ ಬಂಡವಾಳವಿದೆ. ಹೀಗಾಗಿ ಹೆಚ್ಚಿರುವ ನಿಧಿಯನ್ನು ಸರ್ಕಾರಕ್ಕೆ ಸಾಗಿಸಬೇಕಿದೆ. ಸಾಮಾನ್ಯವಾಗಿ ಎಲ್ಲ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳೂ ತನ್ನ ಒಟ್ಟು ಸ್ವತ್ತಿನ ಮೇಲೆ ಶೇಕಡಾವಾರು ಆಧಾರದಲ್ಲಿ ಮೀಸಲು ಇಡುತ್ತದೆ. ಅಂದರೆ ನಮ್ಮ ಆರ್‌ಬಿಐ ಹೊಂದಿರುವ ಸ್ವತ್ತಿನ ಶೇ. 26.5 ರಷ್ಟು ಮೀಸಲು ಹೊಂದಿದೆ. ಕಳೆದ ವಿತ್ತ ವರ್ಷದಲ್ಲಿ ಇದು ಶೇ. 25.4 ಆಗಿತ್ತು. ಜಾಗತಿಕವಾಗಿ ಶೇ. 16 ರಷ್ಟು ಮೀಸಲು ಇರಬೇಕು ಎಂಬುದು ಮಾನದಂಡ.

ಕೇಂದ್ರೀಯ ಬ್ಯಾಂಕ್‌ಗೆ ಬಂಡವಾಳ ಏಕೆ ಬೇಕು?
ಯಾವುದೇ ದೇಶದ ಕೇಂದ್ರೀಯ ಬ್ಯಾಂಕ್‌ಗೆ ಒಂದಷ್ಟು ಮೊತ್ತದ ಬಂಡವಾಳ ಬೇಕೇ ಬೇಕು. ಯಾಕೆಂದರೆ ಇಡೀ ದೇಶದ ಆರ್ಥಿಕತೆಯನ್ನು ಸಮತೋಲನದಲ್ಲಿರಿಸುವ ಮಹತ್ವದ ಜವಾಬ್ದಾರಿ ಇದರ ಮೇಲಿರುತ್ತದೆ. ಇನ್ನೊಂದೆಡೆ ವಿದೇಶಿ ಸ್ವತ್ತು, ಅಂದರೆ ಕರೆನ್ಸಿ ಮತ್ತು ಚಿನ್ನ ಹಾಗೂ ಇತರ ಸ್ವತ್ತನ್ನು ಹೊಂದಿರುತ್ತವೆ.  ಇದರ ಮೌಲ್ಯ ಬದಲಾದಾಗ ಅದನ್ನು ಭರ್ತಿ ಮಾಡಿಕೊಳ್ಳಲು ಆರ್‌ಬಿಐಗೆ ಸಾಮರ್ಥ್ಯ ಇರಬೇಕು. ನಮ್ಮ ಆರ್‌ಬಿಐ ವಿದೇಶಿ ಸ್ವತ್ತಿನ ಮೌಲ್ಯ 26.4 ಲಕ್ಷ ಕೋಟಿ ರೂ. ಇನ್ನೊಂದೆಡೆ, ಸರ್ಕಾರ ಅಸ್ಥಿರವಾದಾಗ ಹಣಕಾಸು ಸಂಸ್ಥೆಗಳ ಹೊರೆ ಹೊರಬೇಕಾಗುತ್ತದೆ. ಆಗ ಈ ಹೊರೆಯನ್ನು ಆರ್‌ಬಿಐ ಕಡಿಮೆ ಮಾಡಲು ಈ ನಿಧಿಯನ್ನು ಬಳಸಲಾಗುತ್ತದೆ. ಇದೆಲ್ಲದರ ಜೊತೆಗೆ ಅತ್ಯಂತ ಪ್ರಮುಖವಾದ ಸಂಗತಿಯೆಂದರೆ ಕರೆನ್ಸಿ ಮತ್ತು ವಿನಿಮಯ ದರಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ರೂಪಾಯಿ ಮೌಲ್ಯ ಹೆಚ್ಚು ಕಡಿಮೆಯಾದಾಗ ಆರ್‌ಬಿಐ ಅದನ್ನು ತುಂಬಿಕೊಡಲು ಹಣ ವೆಚ್ಚ ಮಾಡಬೇಕಾಗುತ್ತದೆ.

ಇವೆಲ್ಲವೂ ಒಂದೆಡೆಯಾದರೆ, ಆರ್‌ಬಿಐ ಪ್ರತಿಯೊಂದಕ್ಕೂ ಸರ್ಕಾರದ ಎದುರು ಅಥವಾ ಹಣಕಾಸು ಇಲಾಖೆಯೆದುರು ಕೈಚಾಚಿ ನಿಲ್ಲಲು ಸಾಧ್ಯವಿಲ್ಲ. ಇದು ಆರ್‌ಬಿಐ ಸ್ವಾಯತ್ತತೆಯ ಪ್ರಶ್ನೆ. ಹೀಗಾಗಿ, ಆರ್‌ಬಿಐನ ಸ್ವಾಯತ್ತತೆಗಾಗಿ ಇದು ಆರ್ಥಿಕವಾಗಿಯೂ ಸ್ವತಂತ್ರವಾಗಿರಬೇಕು.

ಕಾನೂನೇ ಇಲ್ಲ!
ಆರ್‌ಬಿಐ ಕಾಯ್ದೆಯಲ್ಲಿ ಸರ್ಕಾರಕ್ಕೆ ಎಷ್ಟು ಹಣವನ್ನು ವರ್ಗಾವಣೆ ಮಾಡಬೇಕು ಎಂಬ ಬಗ್ಗೆ ಯಾವುದೇ ನಿಯಮವನ್ನು ಉಲ್ಲೇಖೀಸಿಲ್ಲ. ಅಷ್ಟೇ ಅಲ್ಲ, ಈ ಬಗ್ಗೆ ಕಾಲಕಾಲಕ್ಕೆ ಆರ್‌ಬಿಐ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ. ಒಂದು ವೇಳೆ ಆರ್‌ಬಿಐ ಬಳಿ ಹಣವಿಲ್ಲದಿದ್ದರೆ, ಖಾತೆಯಲ್ಲಿ ಸೊನ್ನೆಯಾದರೂ ಆರ್‌ಬಿಐ ಕೆಲಸ ಮಾಡಬಹುದು. ಆಗ ಸರ್ಕಾರದ ಬೊಕ್ಕಸದಿಂದ ಆರ್‌ಬಿಐಗೆ ಹಣ ನೀಡಬೇಕಿರುತ್ತದೆ.
ಸಾಮಾನ್ಯವಾಗಿ ಅಮೆರಿಕದ ಫೆಡರಲ್‌ ಬ್ಯಾಂಕ್‌ ಹೆಚ್ಚುವರಿ ನಿಧಿಯನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುತ್ತದೆ. ಇದಕ್ಕೆ ಪ್ರತ್ಯೇಕ ಕಾನೂನಿದೆ. ಫೆಡರಲ್‌ ರಿಸರ್ವ್‌ ಆ್ಯಕ್ಟ್ ಮತ್ತು ಕನ್ಸೂéಮರ್‌ ಪ್ರೊಟೆಕ್ಷನ್‌ ಆ್ಯಕ್ಟ್ ಅನ್ನು ಫೆಡ್‌ ಹೊಂದಿದೆ. ಇದೇ ರೀತಿ ಇಂಗ್ಲೆಂಡ್‌ನ‌ ಬ್ಯಾಂಕ್‌ ಆಫ್ ಇಂಗ್ಲೆಂಡ್‌ ಕೂಡ ಹೆಚ್ಚುವರಿ ನಿಧಿಯನ್ನು ಕಾಲಕಾಲಕ್ಕೆ ಸರ್ಕಾರಕ್ಕೆ ನೀಡುತ್ತದೆ. ಕಳೆದ ವರ್ಷವಷ್ಟೇ ಫೆಡ್‌ 190 ಕೋಟಿ ಡಾಲರ್‌ ಅನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಿದೆ.

ಸರ್ಕಾರಕ್ಕೆ ಅನುಕೂಲ
ಆರ್‌ಬಿಐ ಸಾಮಾನ್ಯವಾಗಿ ಪಡೆಯುವುದು ಚಲಾವಣೆಯಲ್ಲಿರುವ ಹಣವನ್ನೇ. ಒಂದು ವೇಳೆ ಹೆಚ್ಚು ಮೊತ್ತದ ಹಣ ಆರ್‌ಬಿಐ ಮೀಸಲು ನಿಧಿಯಲ್ಲಿ ಉಳಿದುಕೊಂಡರೆ ಅದು ಹಣಕಾಸು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿಯೇ ಬಹುತೇಕ ದೇಶಗಳಲ್ಲಿ ಈ ಬಗ್ಗೆ ಸ್ಪಷ್ಟ ಕಾನೂನು ರೂಪಿಸಲಾಗಿದೆ.

ಇದರಿಂದ ಸರ್ಕಾರ ಹಲವು ರೀತಿಯಲ್ಲಿ ಅನುಕೂಲ ಪಡೆಯಬಹುದು. ಆರ್‌ಬಿಐ ಸರ್ಕಾರಕ್ಕೆ ಯಾವ ಪ್ರಮಾಣದಲ್ಲಿ ಹಣ ನೀಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ವಿಚಾರಕ್ಕಾಗಿ ಆರ್‌ಬಿಐ ಸಮಿತಿ ರಚಿಸಿದ್ದು, ಇದು ಹಂತ ಹಂತವಾಗಿ ಹೆಚ್ಚುವರಿ ಮೀಸಲು ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಆರ್‌ಬಿಐ ನಿವೃತ್ತ ಗವರ್ನರ್‌ ಬಿಮಲ್‌ ಜಲನ್‌ ಈ ಸಮಿತಿಯ ನೇತೃತ್ವ ವಹಿಸಿದ್ದು, ಶೀಘ್ರದಲ್ಲೇ ವರದಿ ನೀಡುವ ಸಾಧ್ಯತೆಯಿದೆ. ಸಮಿತಿ ವರದಿ ನೀಡಿದ ನಂತರದಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

– ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next