ಉಡುಪಿ: ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಏಪ್ರಿಲ್ 2ರ ಗುರುವಾರದಿಂದ ಜಾರಿಗೆ ಬರುವಂತೆ ಟೆಲಿಮೆಡಿಸಿನ್ ಸೇವೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಅವರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಕೆ.ಎಂ.ಸಿ. ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವ ಹಾಗೂ ಆಸ್ಪತ್ರೆಯ ಹಳೆಯ ರೋಗಿಗಳ (follow-up) ಅನುಕೂಲಕ್ಕಾಗಿ ಈ ಟೆಲಿಮೆಡಿಸಿನ್ ಸೇವೆಗಳನ್ನು ಪರಿಚಯಿಸಲಾಗುತ್ತಿದೆ. ಪ್ರಕಟಿಸಿದರು.
ಕೋವಿಡ್- 19 ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಹಲವು ನಿರ್ಬಂಧಗಳಿರುವುದರಿಂದ, ಆಸ್ಪತ್ರೆಯ ಹೆಚ್ಚಿನ ರೋಗಿಗಳು ವೈದ್ಯರೊಂದಿಗೆ ಸಮಯೋಚಿತ ಸಮಾಲೋಚನೆ ಮತ್ತು ಮರು ಸಮಾಲೋಚನೆಯಿಂದ ವಂಚಿತರಾಗಿದ್ದಾರೆ. ಈ ಸಂಗತಿಯನ್ನು ಅರಿತುಕೊಂಡು, ಅಂತಹ ರೋಗಿಗಳಿಗೆ ಸಮಾಲೋಚನೆ ಮತ್ತು ಮರು ಸಮಾಲೋಚನೆಯನ್ನು ನೀಡುವುದನ್ನು ಟೆಲಿಮೆಡಿಸಿನ್ ಸೇವೆಗಳ ಮೂಲಕ ಪರಿಚಯಿಸಲು ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ.
ಈ ಸೇವೆಯಡಿಯಲ್ಲಿ ಜನರು ತಮ್ಮ ಮನೆಯಲ್ಲಿ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ದೂರವಾಣಿ ಮೂಲಕ ಸಮಾಲೋಚನೆ ಮತ್ತು ವೈದ್ಯಕೀಯ ಸಲಹೆಯನ್ನು ನೀಡಲಿದ್ದಾರೆ. ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ ದೂರವಾಣಿ ಕರೆ ಮಾಡುವುದರ ಮೂಲಕ ಎಲ್ಲಾ ವಿಭಾಗದ ವೈದ್ಯರನ್ನು ಸಂಪರ್ಕಿಸಬಹುದು. ಸಂಪರ್ಕಿಸಲು 080 47192235ಗೆ ಕರೆ ಮಾಡಬೇಕಾಗಿ ವಿನಂತಿ.
ಈ ಸೇವೆಗಳ ಹೊರತಾಗಿ ಜ್ವರದ ಚಿಕಿತ್ಸಾಲಯ ಮತ್ತು ತುರ್ತು ಚಿಕಿತ್ಸಾ ಸೇವೆಗಳು ಆಸ್ಪತ್ರೆಯಲ್ಲಿ ಎಂದಿನಂತೆ ಕಾರ್ಯನಿರ್ವಹಿಸಲಿದೆ.