ಬೆಂಗಳೂರು: ಏಕದಿನ ವಿಶ್ವಕಪ್ ಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಮಿಡಲ್ ಆರ್ಡರ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಪ್ರಮುಖ ಆಟಗಾರರು ಗಾಯಗೊಂಡಿರುವ ಕಾರಣ ಸದ್ಯ ಟೀಂ ಇಂಡಿಯಾದಲ್ಲಿ ಹಲವು ಯುವ ಆಟಗಾರರ ಪ್ರಯೋಗ ಮಾಡಲಾಗುತ್ತಿದೆ. ಆದರೆ ಅವರ್ಯಾರು ಗಟ್ಟಿ ಪ್ರದರ್ಶನ ನೀಡಲು ಸಫಲರಾಗಿಲ್ಲ.
ಇದೇ ವೇಳೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ ಸಿಕ್ಕಿದೆ. ವೇಗಿ ಜಸ್ಪ್ರೀತ್ ಬುಮ್ರಾ ಪುನಾರಾಗಮನದಿಂದ ಸಂತಸಗೊಂಡಿದ್ದ ಅಭಿಮಾನಿಗಳು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ವಿಚಾರದಲ್ಲಿ ಬೇಸರಗೊಂಡಿದ್ದಾರೆ.
ಮಿಡಲ್ ಆರ್ಡರ್ ನ ಪ್ರಮುಖ ಆಟಗಾರರಾದ ರಾಹುಲ್ ಮತ್ತು ಅಯ್ಯರ್ ಏಷ್ಯಾಕಪ್ ವೇಳೆ ತಂಡಕ್ಕೆ ಎಂಟ್ರಿ ಕೊಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅವರಿಬ್ಬರು ಏಷ್ಯಾ ಕಪ್ ಕೂಟದಲ್ಲಿ ಆಡುವುದು ಅನುಮಾನ ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ಇದನ್ನೂ ಓದಿ:Gundlupete: ಟೊಮೆಟೋ ಗಿಡ ಬುಡಸಮೇತ ಕತ್ತರಿಸಿದ ಕಿಡಿಗೇಡಿಗಳು: ರೈತನಿಗೆ ಲಕ್ಷಾಂತರ ರೂ. ನಷ್ಟ
ಇಬ್ಬರೂ ಆಟಗಾರರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫಿಟ್‌ನೆಸ್ ಕುರಿತು ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರೂ, ಅವರಿನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಆಡವಷ್ಟು ಫಿಟ್ ಆಗಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಸೂಚಿಸಿದ್ದಾರೆ. ಅವರುಗಳು ಸೆಪ್ಟೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಕಮ್ ಬ್ಯಾಕ್ ಮಾಡಬಹುದು ಎಂದು ವರದಿ ಹೇಳಿದೆ. ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯು ವಿಶ್ವಕಪ್ ಗೆ ಮೊದಲು ಭಾರತ ಆಡುವ ಕೊನೆಯ ಸರಣಿಯಾಗಿದೆ.
ಕೆಎಲ್ ರಾಹುಲ್ ಅವರು ಎನ್ ಸಿಎ ನಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಒಂದು ವೇಳೆ ಅವರು ಫಿಟ್ ಆದರೆ ಏಕದಿನ ವಿಶ್ವಕಪ್ ನಲ್ಲಿ ಬಹುತೇಕ ಅವರೇ ಟೀಂ ಇಂಡಿಯಾದ ವಿಕೆಟ್ ಕೀಪರ್ ಆಗಿರಲಿದ್ದಾರೆ.