ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರು ಗಾಯದ ಕಾರಣದಿಂದ ಸಂಪೂರ್ಣ ಐಪಿಎಲ್ 2023 ಕೂಟದಿಂದ ಹೊರಬಿದ್ದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ರಾಹುಲ್ ಗಾಯಗೊಂಡಿದ್ದರು.
ಕೆಎಲ್ ರಾಹುಲ್ ಅವರು ಮುಂಬರುವ ಜೂನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲೂ ಆಡುವ ಸಾಧ್ಯತೆಯಿಲ್ಲ. ತಂಡದಲ್ಲಿ ಸ್ಥಾನ ಪಡೆದಿರುವ ಅವರು ಅದರಿಂದಲೂ ಹೊರ ಬೀಳುವ ಸಾಧ್ಯತೆಯಿದೆ. ಟೆಸ್ಟ್ ಫೈನಲ್ ಪಂದ್ಯವು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.
ಕ್ರಿಕ್‌ಬಜ್ ವೆಬ್‌ಸೈಟ್‌ನಲ್ಲಿನ ವರದಿಯ ಪ್ರಕಾರ ರಾಹುಲ್ ಈಗ ಸ್ಕ್ಯಾನ್ ಗಳಿಗಾಗಿ ಮುಂಬೈನಲ್ಲಿದ್ದಾರೆ ಮತ್ತು ಅದರ ವರದಿಯ ಬಳಿಕ ಅವರ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಭಾಗವಹಿಸುವಿಕೆಯ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಮೇ 1 ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯವನ್ನು ರಾಹುಲ್ ಗಾಯಗೊಂಡರು.
ರಾಹುಲ್ ಹೊರತಾಗಿ, ಎಡಗೈ ವೇಗಿ ಜಯದೇವ್ ಉನದ್ಕತ್ ಕೂಡ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ಉನದ್ಕತ್ ಅವರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡುವ ಬಗ್ಗೆ ಅನುಮಾನವಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಲೀಗ್ ಹಂತವು ಮೇ 21 ರಂದು ಕೊನೆಗೊಂಡ ನಂತರ ಮೇ 23 ರಂದು ಡಬ್ಲ್ಯುಟಿಸಿ ಫೈನಲ್ ಗಾಗಿ ಭಾರತೀಯ ತಂಡವು ಲಂಡನ್‌ಗೆ ಹೊರಡಲಿದೆ ಎಂದು ವರದಿ ಹೇಳಿದೆ. ಪ್ಲೇಆಫ್ ನಲ್ಲಿ ಆಡುವ ಐಪಿಎಲ್ ತಂಡಗಳ ಆಟಗಾರರು ನಂತರದ ದಿನಾಂಕದಲ್ಲಿ ಲಂಡನ್ ಗೆ ತೆರಳುತ್ತಾರೆ.