ಸೆಂಚುರಿಯನ್: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 5 ಸ್ಪೆಷಲಿಸ್ಟ್ ಬೌಲರ್‌ಗಳ ಕಾಂಬಿನೇಶನ್ ಹೊಂದುವ ಸಾಧ್ಯತೆ ಇದೆ ಎಂಬುದಾಗಿ ನೂತನ ಉಪನಾಯಕ ಕೆ.ಎಲ್. ರಾಹುಲ್ ಸುಳಿವಿತ್ತಿದ್ದಾರೆ.
ಆಗ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಅಯ್ಯರ್ ನಡುವೆ ಆಯ್ಕೆ ಪೈಪೋಟಿಯೊಂದು ಕಂಡುಬರಲಿದೆ.
“ಪ್ರತಿಯೊಂದು ತಂಡವೂ ಟೆಸ್ಟ್ ಗೆಲುವಿಗಾಗಿ 20 ವಿಕೆಟ್ ಉರುಳಿಸುವುದು ಅಗತ್ಯ. ವಿದೇಶಿ ಸರಣಿಗಳಲ್ಲಿ ನಾವು 5 ಬೌಲರ್‌ಗಳ ಸೂತ್ರವನ್ನು ಅನುಸರಿಸುತ್ತ ಬಂದಿದ್ದೇವೆ. ಇದರಿಂದ ನಮಗೆ ಲಾಭವೇ ಆಗಿದೆ. ಇದರಿಂದ ವರ್ಕ್‌ಲೋಡ್ ಕೂಡ ಕಡಿಮೆ ಆಗುತ್ತದೆ. ಹೀಗಾಗಿ ಇಲ್ಲಿಯೂ 5 ಬೌಲರ್‌ಗಳನ್ನು ಆಡಿಸುವ ಸಾಧ್ಯತೆ ಇದೆ’ ಎಂದು ರಾಹುಲ್ ಹೇಳಿದರು.
ಆಗ ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ನನ್ನು ಕೈಬಿಡಲೇಬೇಕಾಗುತ್ತದೆ. ರಹಾನೆ, ಅಯ್ಯರ್ ಮತ್ತು ವಿಹಾರಿ ಅವರಲ್ಲಿಬ್ಬರು ಹೊರಗುಳಿಯಬೇಕಾಗುತ್ತದೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ತಲೆಬಾಗಿದ ತಮಿಳ್ ತಲೈವಾಸ್
“ಇದೊಂದು ಕಠಿನ ನಿರ್ಧಾರ. ರಹಾನೆ ಟೆಸ್ಟ್ ತಂಡದ ಪ್ರಮುಖ ಆಟಗಾರ. ವಿದೇಶಗಳಲ್ಲಿ ಅನೇಕ ಉಪಯುಕ್ತ ಇನ್ನಿಂಗ್ಸ್ ಆಡಿದ್ದಾರೆ. ಅಯ್ಯರ್ ಕಾನ್ಪುರದಲ್ಲಿ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಹಾರಿ ಕೂಡ ಉತ್ತಮ ಬ್ಯಾಟ್ಸ್‌ಮನ್. ಇಂದು ಅಥವಾ ನಾಳೆಯೊಳಗೆ ಸುದೀರ್ಘವಾಗಿ ಚರ್ಚಿಸಿ ಆಯ್ಕೆ ಪ್ರಕ್ರಿಯೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ’ ಎಂದು ರಾಹುಲ್ ಹೇಳಿದರು.