ಲಕ್ನೋ: ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಶುಕ್ರವಾರದ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 176 ರನ್ ಗಳಿಸಿದರೆ, ಲಕ್ನೋ ತಂಡವು ಕೇವಲ ಎರಡು ವಿಕೆಟ್ ಕಳೆದುಕೊಂಡು 19 ಓವರ್ ಗಳಲ್ಲಿ ಗುರಿ ಬೆನ್ನತ್ತಿ ಜಯ ಗಳಿಸಿತು.
ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರು 82 ರನ್ ಗಳಿಸಿ ತಂಡಕ್ಕೆ ಜಯ ತಂದಿತ್ತರು. 53 ಎಸೆತ ಎದುರಿಸಿದ ರಾಹುಲ್ 82 ರನ್ ಮಾಡಿದರು. ಈ ಇನ್ನಿಂಗ್ಸ್ ನಲ್ಲಿ ಮೂರು ಸಿಕ್ಸರ್ ಮತ್ತು ಒಂಬತ್ತು ಬೌಂಡರಿ ಹೊಡೆದರು.
ಮೊದಲ ವಿಕೆಟ್ ಗೆ ಕ್ವಿಂಟನ್ ಡಿಕಾಕ್ ಅವರೊಂದಿಗೆ ರಾಹುಲ್ 134 ರನ್ ಜೊತೆಯಾಟವಾಡಿದರು. ಡಿಕಾಕ್ ಅವರು 54 ರನ್ ಗಳಿಸಿದರು. ಇದು ಲಕ್ನೋ ಮೈದಾನದಲ್ಲಿ ಮೊದಲ ವಿಕೆಟ್ ಗೆ ದಾಖಲಾದ ಅತಿ ದೊಡ್ಡ ಜೊತೆಯಾಟವಾಗಿದೆ.
177 ರನ್ ಲಕ್ನೋದಲ್ಲಿ ಚೇಸ್ ಮಾಡಿದ ಅತಿ ದೊಡ್ಡ ಮೊತ್ತವಾಗಿದೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 168 ರನ್ ಚೇಸ್ ಮಾಡಿತ್ತು.
ಧೋನಿ ದಾಖಲೆ ಮುರಿದ ಕೆಎಲ್: ಸಿಎಸ್ ಕೆ ವಿರುದ್ದ ಅರ್ಧಶತಕ ಸಿಡಿಸಿದ ಕೆಎಲ್ ರಾಹುಲ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯೊಂದನ್ನು ಮುರಿದರು. ವಿಕೆಟ್ ಕೀಪರ್ ಬ್ಯಾಟರ್ ಆಗಿ ಅತೀ ಹೆಚ್ಚು 50 ಪ್ಲಸ್ ರನ್ ಗಳಿಸಿದ ಐಪಿಎಲ್ ದಾಖಲೆಯಲ್ಲಿ ರಾಹುಲ್ ಮೊದಲ ಸ್ಥಾನಕ್ಕೆ ಬಂದರು.
ವಿಕೆಟ್ ಕೀಪರ್ ಬ್ಯಾಟರ್ ಆಗಿ ರಾಹುಲ್ 25ನೇ 50 ಪ್ಲಸ್ ರನ್ ಗಳಿಸಿದರು. ಧೋನಿ, 24 ಬಾರಿ, ಡಿಕಾಕ್ 23 ಬಾರಿ, ದಿನೇಶ್ ಕಾರ್ತಿಕ್ 21 ಬಾರಿ ಈ ಸಾಧನೆ ಮಾಡಿದ್ದಾರೆ.