Advertisement

ಮಾನವೀಯತೆಯ ಸಾಕಾರಮೂರ್ತಿ ಕೆ.ಕೆ. ಪೈ

06:00 AM Jan 14, 2018 | |

ಕೆ.ಕೆ. ಪೈಯವರು ನಮ್ಮನ್ನಗಲಿ ಇಂದಿಗೆ ಒಂಭತ್ತು ವರ್ಷಗಳಾದವು. ಅವರು ಭೌತಿಕವಾಗಿ ನಮ್ಮಿಂದ ದೂರವಾದರೂ ಅವರ ಚಿಂತನೆ ಮತ್ತು ವಿಚಾರಧಾರೆಗಳು, ಅವರು ಒತ್ತು ನೀಡುತ್ತಿದ್ದ ಮಾನವೀಯತೆ ಮತ್ತು ಮೌಲ್ಯಗಳು, ಇತರರ ಬಗ್ಗೆ ಅವರು ತೋರಿಸುತ್ತಿದ್ದ ಕಾಳಜಿ, ಅನುಕಂಪ ಮತ್ತು ಸೋತವರಿಗೆ ಅವರು ನೀಡುತ್ತಿದ್ದ ನೆರವಿನ ಹಸ್ತ ಮತ್ತು ನೊಂದವರಿಗೆ ತುಂಬುತ್ತಿದ್ದ ಧೈರ್ಯ ಮತ್ತು ನೀಡುತ್ತಿದ್ದ ಉತ್ತೇಜನ ಇವೆಲ್ಲ ಇಂದೂ ಜೀವಂತವಾಗಿದ್ದು ಅವುಗಳನ್ನು ನಾವು ಮರೆಯುವಂತಿಲ್ಲ. ಅವರ ಸ್ಮತಿ ದಿನವಾದ ಇಂದು ಈ ವಿಷಯಗಳ ಮೇಲೆ ಬೆಳಕು ಚೆಲ್ಲಿದರೆ ಅದು ಅವರಿಗೆ ನೀಡುವ ಶ್ರದ್ಧಾಂಜಲಿ ಎಂಬುದು ನನ್ನ ನಂಬಿಕೆ.

Advertisement

ಪರೋಪಕಾರಿ 
ಕೆ.ಕೆ. ಪೈಯವರು ವಿದ್ಯಾರ್ಥಿಯಾಗಿರುವಾಗಲೇ ಮಾನವೀಯತೆಯನ್ನು ಯಥೇತ್ಛವಾಗಿ ಮೈಗೂಡಿಸಿಕೊಂಡಿದ್ದ ಪರೋಪಕಾರಿಯಾಗಿದ್ದರು. ಪ್ರತಿ ತರಗತಿಯಲ್ಲಿ ಪ್ರಥಮ ಸ್ಥಾನಿಯಾಗಿ ಅಂತಿಮ ಬಿ.ಕಾಂ. ಪದವಿ ಪರೀಕ್ಷೆಯಲ್ಲಿ ರ್‍ಯಾಂಕ್‌ ಪಡೆದ ಕೆ.ಕೆ. ಪೈ ಯಾವಾಗಲೂ ಸಹಪಾಠಿಗಳ ಕುರಿತಾಗಿ ಬಹಳ ಕಾಳಜಿ ತೋರಿಸುತ್ತಿದ್ದರು. ಅಸೌಖ್ಯದಿಂದ ವಾರಗಟ್ಟಲೆ ಕ್ಲಾಸ್‌ಗಳಿಗೆ ಗೈರು ಹಾಜರಾದ ಸಹಪಾಠಿಗಳಿಗೆ ತನ್ನ ನೋಟ್ಸನ್ನು ನೀಡಿ ಮತ್ತು ಕಷ್ಟದ ಪಾಠಗಳನ್ನು ವಿವರಿಸುವ ಮೂಲಕ ನೆರವಾಗುತ್ತಿದ್ದರು.

ಮಾನವೀಯ ದೃಷ್ಟಿಕೋನ 
ಸಿಂಡಿಕೇಟ್‌ ಬ್ಯಾಂಕಿನ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ಕೆ.ಕೆ. ಪೈ ತನ್ನ ನಿರ್ಧಾರಗಳನ್ನು ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಚಾರಗಳನ್ನು ಮಾನವೀಯತೆಯ ದೃಷ್ಟಿಕೋನದಿಂದಲೂ ಪರಿಶೀಲಿಸುತ್ತಿದ್ದರು ಮತ್ತು ವಿಶ್ಲೇಷಿಸುತ್ತಿದ್ದರು.   ದುರ್ಬಲ ವರ್ಗಗಳಿಗೆ ಮತ್ತು ಅವಕಾಶ ವಂಚಿತರಿಗೆ ನೆರವಾದ ಇವರು, ಈ ವರ್ಗಗಳ ಸುಮಾರು 14,000 ಯುವಕ, ಯುವತಿಯರಿಗೆ ಬ್ಯಾಂಕಿನಲ್ಲಿ ನೌಕರಿ ಒದಗಿಸಿದರು. 1969ರಲ್ಲಿ ಬ್ಯಾಂಕಿನ ನೌಕರರ ಸಂಖ್ಯೆ 5872 ಆಗಿತ್ತು. 1978ರ ಎಪ್ರಿಲ್‌ 22ರಂದು ಕೆ.ಕೆ. ಪೈ ಬ್ಯಾಂಕ್‌ ಬಿಟ್ಟು ತೆರಳುವ ವೇಳೆಗೆ ನೌಕರರ ಸಂಖ್ಯೆ 19750 ಮೀರಿತು. ಬಡ ಕುಟುಂಬಗಳಿಗೆ ಸೇರಿದ ಮತ್ತು ಕೇವಲ ಎಸ್‌.ಎಸ್‌.ಎಲ್‌.ಸಿ. ವರೆಗೆ ಕಲಿತ ಯುವಕ ಯುವತಿಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ನೀಡಲಾಯಿತು. ವಿಧವೆಯರಿಗೆ, ಅನಾಥ ಯುವಕರಿಗೆ, ಶಿಕ್ಷಕರ ಮಕ್ಕಳಿಗೆ, ಸನ್ಯಾಸ ಬಿಟ್ಟು ಸಾಮಾನ್ಯ ಬದುಕಿಗೆ ಹಿಂದಿರುಗಿದವರಿಗೆ, ರೈತನ ಮಗನಾದ ನಾನೂ ಸೇರಿದಂತೆ ಸಾವಿರಾರು ರೈತ ಕುಟುಂಬಗಳಿಗೆ ಸೇರಿದ ಯುವಕರಿಗೆ, ದುರಂತಗಳಿಂದ ನೊಂದವರಿಗೆ, ಅಂಗವಿಕಲರಿಗೆ, ನಿರ್ಗತಿಕರಿಗೆ (destitutes)ಬ್ಯಾಂಕಿನಲ್ಲಿ ಕೆಲಸ ನೀಡಿ ಅವರೆಲ್ಲರ ಕುಟುಂಬಗಳ ಪಾಲಿಗೆ ಅನ್ನದಾತರಾದರು.

ಪ್ರೋತ್ಸಾಹ, ಪ್ರೇರಣೆ
ಸ್ವಂತ ಉದ್ಯೋಗಗಳ ಸೃಷ್ಟಿಗೂ ಕೆ.ಕೆ. ಪೈ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರು. ಯುವಜನ ಸಂಸ್ಥೆಯಾದ ಜೇಸಿ ಸಂಸ್ಥೆಯ ಸಹಭಾಗಿತ್ವದೊಂದಿಗೆ “ಸ್ವಂತ ಉದ್ಯೋಗ ಯತ್ನ ಯೋಜನೆ’ ((Self Employment Endeavour Project)ಯನ್ನು ಆರಂಭಿಸಿ ಆ ಮೂಲಕ 1,600 ಯುವಕರಿಗೆ ಸ್ವಂತ ಉದ್ದಿಮೆ ಆರಂಭಿಸಲು ನೆರವಾದರು. ಇದರ ಫ‌ಲವಾಗಿ 4200 ಇತರ ಹೆಚ್ಚುವರಿ ಉದ್ಯೋಗಗಳೂ ಸೃಷ್ಟಿಸಲ್ಪಟ್ಟವು. ಸವಾಲುಗಳನ್ನು ಎದುರಿಸಿ ಯಶಸ್ಸು ಗಳಿಸಲು ಶ್ರಮಿಸುವ ಯುವಕರೆಂದರೆ ಕೆ.ಕೆ. ಪೈಗಳಿಗೆ ಅಕ್ಕರೆ, ಅಭಿಮಾನ. ಅಂತಹ ಯುವಕರಿಗೆ ಅವರು ಯಾವಾಗಲೂ ಪ್ರೋತ್ಸಾಹ, ಪ್ರೇರಣೆ ನೀಡುತ್ತಿದ್ದರು. ಅಬುಧಾಬಿಯಲ್ಲಿ ಬೃಹತ್‌ ಆಸ್ಪತ್ರೆಯೂ ಸೇರಿದಂತೆ ವಿವಿಧ ಉದ್ದಿಮೆಗಳನ್ನು ನಡೆಸುತ್ತಿರುವ ಉಡುಪಿಯ ಬಿ.ಆರ್‌. ಶೆಟ್ಟಿ , ಸತೀಶ್‌ಚಂದ್ರ ಹೆಗ್ಡೆ ಮತ್ತಿತರ ಹಲವಾರು ಉದ್ಯಮಿಗಳಿಗೆ ಉತ್ತೇಜನ ಮತ್ತು ಪ್ರೇರಣೆ ನೀಡಿ ಅವರೆಲ್ಲರ ಯಶಸ್ಸು ಮತ್ತು ಬೆಳವಣಿಗೆಯಿಂದ ಸಂತೃಪ್ತರಾದವರು ಕೆ.ಕೆ. ಪೈ.

ನೊಂದವರಿಗೆ ಧೈರ್ಯ
ಕೆ.ಕೆ. ಪೈ ನೀಡಿದ ಹಿತವಚನ ಮತ್ತು ತುಂಬಿದ ಧೈರ್ಯ ಆಗಾಗ ನೆನಪಾಗುತ್ತದೆ. ನಾನು ನನ್ನ ತಾಯಿಯನ್ನು ಕಳೆದುಕೊಂಡ ಬಳಿಕ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ದುಃಖದಿಂದ ಖನ್ನತೆ ಯನ್ನು ಅನುಭವಿಸುತ್ತಿದ್ದೆ.  ಇದು ಕೆ.ಕೆ. ಪೈಯವರಿಗೆ ಹೇಗೋ ತಿಳಿಯಿತು. ಸಿಂಡಿಕೇಟ್‌ ಬ್ಯಾಂಕ್‌ ಪ್ರವರ್ತಿಸಿದ ಪ್ರಾದೇಶಿಕ ಗ್ರಾಮೀಣ ಬ್ಯಾಂಕೊಂದರಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದ ನನಗೆ ಒಂದು ದಿನ ಕೆ.ಕೆ. ಪೈಗಳ ಫೋನ್‌ ಬಂತು. ಅವರು ಈ ವಾರ ಊರಿಗೆ ಬಂದವರು ನನ್ನನ್ನು ಭೇಟಿಯಾಗಿ ಎಂದು ಹೇಳಿ ಫೋನ್‌ ಇಟ್ಟರು. ಮುಂದಿನ ಶನಿವಾರ ಉಡುಪಿಗೆ ಹೋದವ ಆದಿತ್ಯವಾರ ಬೆಳಿಗ್ಗೆ ಅವರ ಮನೆಗೆ ಹೋದೆ. ಅವರು ನನ್ನಲ್ಲಿ ಸುಮಾರು ಒಂದು ತಾಸು ಮಾತನಾಡಿದರು. “ನೀವಿನ್ನೂ 40ರ ಹರೆಯದವರು. ನಿಮಗೆ ಚಿಕ್ಕ ಮಕ್ಕಳಿದ್ದಾರೆ. ನಿಮ್ಮ ಜವಾಬ್ದಾರಿ ತುಂಬಾ ಇದೆ. Everyone born on this earth should die sooner or later. ನಿಮ್ಮ ತಾಯಿ 82-83 ವರ್ಷ ಬದುಕಿದರು. ಇನ್ನು ದುಃಖ ಬಿಡಿ’ ಎಂದು ನನಗೆ ತುಂಬಾ ಧೈರ್ಯ ತುಂಬಿದರು. 

Advertisement

ಆರೋಗ್ಯದ ಕಾಳಜಿ
ಕೆ.ಕೆ. ಪೈಯವರ ಬಗ್ಗೆ ಎಲ್ಲವನ್ನು ಹೇಳಲು ಸಾಧ್ಯ ವಾಗದು. ಒಬ್ಬ ವಿದ್ಯಾರ್ಥಿಯ ಆರೋಗ್ಯದ ಕುರಿತು ಅವರು ತೋರಿಸಿದ ಕಾಳಜಿ ಅವರ ಒಂದು ಪತ್ರದಿಂದ ಸ್ಪಷ್ಟವಾಗುತ್ತದೆ. ಆ ಪತ್ರದಲ್ಲಿ ಅವರು ಉಡುಪಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗೆ ಕೆ.ಕೆ.ಪೈ ಟ್ರಸ್ಟ್‌ನಿಂದ ಆರ್ಥಿಕ ನೆರವು ನೀಡಬೇಕೆಂದು ಕೇಳಿಕೊಂಡಿದ್ದರು. ಅವರು ಈ ರೀತಿ ಬರೆದಿದ್ದರು. “The parents of this young boy are very poor and Kidney transplant surgery is very expensive. They are trying to collect donations for this treatment. Please give from the trust maximum help possible. The boy deserves to live as he is very young and his mother is donating the kidney..’ಇನ್ನು ಎಷ್ಟೋ ದಶಕಗಳ ಕಾಲ ಬದುಕಿ ಎಷ್ಟೋ ಸಾಧನೆಗಳನ್ನು ಭವಿಷ್ಯದ ದಿನಗಳಲ್ಲಿ ತೋರಿಸಲು ಸಾಧ್ಯವಿರುವ ಹುಡುಗನೊಬ್ಬನ ವಿಚಾರದಲ್ಲಿ ಕೆ.ಕೆ. ಪೈ ಇಷ್ಟು ಕಾಳಜಿ ತೋರಿಸಿ ಮಾನವೀಯತೆ ಮೆರೆದರು. 

ಮಾನವ ಮುಖ
ಯಾರಾದರೂ ನೌಕರನ ತಂದೆ ತಾಯಿ ದೀರ್ಘ‌ ಕಾಲ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಾಗ ಆ ನೌಕರನನ್ನು ತಂದೆ ತಾಯಿ ಇದ್ದ ಊರಿಗೆ ವರ್ಗ ಮಾಡಿದರು. ಹವಾಮಾನ ಹೊಂದಿಕೆಯಾಗದೆ ಆರೋಗ್ಯ ಕೆಟ್ಟ ಸಂದರ್ಭಗಳಲ್ಲಿ ಆರೋಗ್ಯಕ್ಕೆ ಸೂಕ್ತವಾದ ಊರುಗಳಿಗೆ ವರ್ಗಾವಣೆ ಮಾಡಿದರು. ಕೆ.ಕೆ. ಪೈ ವ್ಯಕ್ತ ಪಡಿಸುತ್ತಿದ್ದ ಅಭಿಪ್ರಾಯದ ಪ್ರಕಾರ ನೌಕರರ ಆಯ್ಕೆ ನೇಮಕಾತಿ ಮತ್ತು ವರ್ಗಾವಣೆಯೂ ಸೇರಿದಂತೆ ನೌಕರನ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ವ್ಯಕ್ತಿ ಸಂಬಂಧವಿಲ್ಲದ (impersonal) ಪ್ರಕ್ರಿಯೆಯಾಗಲು ಸಾಧ್ಯವಿಲ್ಲ. 

ಈ ಎಲ್ಲಾ ಪ್ರಕ್ರಿಯೆಗಳು ಮತ್ತು ಒಟ್ಟಾರೆ ನೌಕರರ ನಿರ್ವಹಣಾ ವ್ಯವಸ್ಥೆ ನೌಕರರ ಮತ್ತು ಸಂಸ್ಥೆಯ ನಡುವೆ ಬಲಿಷ್ಠವಾದ ಬಂಧನದ ಬೆಳವಣಿಗೆಗೆ ಕಾರಣವಾಗಬೇಕು ಎಂಬುದು ಕೆ.ಕೆ. ಪೈಯವರ ನಿಲುವಾಗಿತ್ತು.  ಸಾಲ ನೀಡಿಕೆ, ಬ್ಯಾಂಕಿನ ನಿರ್ವಹಣೆಯ ವಿವಿಧ ಆಯಾಮಗಳಲ್ಲಿ ಮಾನವೀಯತೆ ಮೆರೆದರು.

ಸಮಾಜ ಮುಖೀ
ಬ್ಯಾಂಕಿಂಗ್‌, ಶಿಕ್ಷಣ ಸೇರಿದಂತೆ ತಾವು ದುಡಿದ ಎಲ್ಲಾ ಕ್ಷೇತ್ರಗಳಲ್ಲೂ ಕೆ.ಕೆ. ಪೈಯವರು ಸಮಾಜ ಮುಖೀಯಾಗಿ ಕರ್ತವ್ಯ ನಿರ್ವಹಿಸಿದರು.   ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ  ಸ್ವಾತಂತ್ರ್ಯಹೋರಾಟಗಾರ ಆಗಿದ್ದರು. ಅಖೀಲ ಭಾರತ ಫಾರ್ವರ್ಡ್‌ ಬ್ಲಾಕ್‌ನ ಪ್ರಪ್ರಥಮ ಸ್ವಾಗತ ಸಮಿತಿ ಸದಸ್ಯರಾಗಿದ್ದರು. ಉಡುಪಿ ನಗರಸಭೆಯ ಅಧ್ಯಕ್ಷರಾಗಿರುವಾಗ ಅವರಿಗೆ ಜನರ ಸಮಸ್ಯೆಗಳ  ಮಾಹಿತಿ ಲಭ್ಯವಾಯಿತು. ಉಡುಪಿಯ ಜನರ ಸಮಸ್ಯೆಗಳ ನಿವಾರಣೆಗೆ ಯತ್ನಿಸಿದರು. 

– ಡಾ| ಕೆ.ಕೆ. ಅಮ್ಮಣ್ಣಾಯ 

Advertisement

Udayavani is now on Telegram. Click here to join our channel and stay updated with the latest news.

Next