ಮೂರೂ ಪಕ್ಷಗಳಿಗೆ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂಬ ಸ್ಥಿತಿ ಸದ್ಯ ಇಲ್ಲ. ಗುಪ್ತಚರ ವರದಿಯೂ ಇದನ್ನೇ ಹೇಳುತ್ತಿದೆ. ಹೀಗಾಗಿ ಫಲಿತಾಂಶ ಪ್ರಕಟವಾಗುವವರೆಗೆ ಮೂರೂ ಪಕ್ಷಗಳಿಗೆ ಪ್ರತೀ ಕಣವೂ ಚಿಂತೆಯೇ!
ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಕೇಸರಿ ಅಲೆ ಸೃಷ್ಟಿಸುವ ಲೆಕ್ಕಾಚಾರ ನಿರೀಕ್ಷಿತ ಫಲ ನೀಡುವ ಸಾಧ್ಯತೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಗೆಲ್ಲುವುದ ಕ್ಕಾಗಿ ಹಳೆಯ ಸೂತ್ರವನ್ನೇ ಮತ್ತಷ್ಟು ಬಲಪಡಿಸುವುದಕ್ಕೆ ಕಾರ್ಯತಂತ್ರ ರೂಪಿಸಲು ಬಿಜೆಪಿ ಸಜ್ಜಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಸೂತ್ರವನ್ನು ರಾಜ್ಯ ನಾಯಕರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಈಗಾ ಗಲೇ ಬಿಜೆಪಿ ಪ್ರಬಲವಾಗಿ ಬೇರು ಬಿಟ್ಟಿರುವ ಜಿಲ್ಲೆಗಳ ಜತೆಗೆ ಹಳೆ ಮೈಸೂರು ಭಾಗದ ಕೆಲವು ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೆ ಅಧಿ ಕಾರದ ಚುಕ್ಕಾಣಿ ಹಿಡಿಯುವುದು ಸುಲಭ ಎಂಬುದು ಬಿಜೆಪಿಯ ಲೆಕ್ಕಾಚಾರ ವಾಗಿತ್ತು. ಆದರೆ ಈ ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಸ್ಥಾನ ಕಸಿದು ಕೊಳ್ಳುವುದು ಸುಲಭವಲ್ಲ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಜಾಗೃತಗೊಂಡಿರುವ ಬಿಜೆಪಿ ಕರಾವಳಿ, ಕಿತ್ತೂರು, ಕಲ್ಯಾಣ ಕರ್ನಾಟಕ, ಮಲೆ ನಾಡು ಜಿಲ್ಲೆಗಳಲ್ಲಿ ಶಕ್ತಿ ವೃದ್ಧಿಸಿಕೊಳ್ಳಲು ನಿರ್ಧರಿಸಿದೆ.
ಮಲೆನಾಡಿನ 3 ಜಿಲ್ಲೆ ಒಳ ಗೊಂಡಂತೆ ಕರಾವಳಿಯಿಂದ ಕಲಬುರ್ಗಿಯ ವರೆಗಿನ 128 ಕ್ಷೇತ್ರ ಗಳಿಗೆ ಸಂಬಂಧಿಸಿ ಅಮಿತ್ ಶಾ “ರೋಡ್ ಮ್ಯಾಪ್’ ರಚಿಸಿದ್ದು, ಈ ಭಾಗದಲ್ಲಿ 90ರಿಂದ 100 ಸ್ಥಾನಗಳ ಗುರಿ ಮುಟ್ಟಿದರೆ ಬಿಜೆಪಿಗೆ ಮತ್ತೆ ಅಧಿಕಾರ ಖಚಿತ ಎಂಬ ಲೆಕ್ಕಾಚಾರ ಹಾಕಿಕೊಟ್ಟಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಹಿಂದುತ್ವ ಹಾಗೂ ಲಿಂಗಾಯತ ಮತ ಬ್ಯಾಂಕ್ ಗಟ್ಟಿಗೊಳಿಸುವುದರಿಂದ ಇಷ್ಟು ಸ್ಥಾನಗಳಲ್ಲಿ ಜಯ ಗಳಿಸುವುದಕ್ಕೆ ಅವಕಾಶವಿದ್ದು, ಇದಕ್ಕೆ ಬೇಕಾದ ಸಿದ್ಧತೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶನಿವಾರ ನಡೆಯುವ ಸಭೆಗೆ ವಿಶೇಷ ಮಹತ್ವ ಲಭಿಸಿದೆ.
ಈ ಮಧ್ಯೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ರಾಜ್ಯ ಪ್ರವಾಸದ ಜತೆಗೆ ವಿಜಯಸಂಕಲ್ಪ ಯಾತ್ರೆ, ಬೂತ್ ವಿಜಯ ಕಾರ್ಯಕ್ರಮಗಳು ಕಾರ್ಯಕರ್ತರು ಹಾಗೂ ಶಾಸಕರಲ್ಲಿ ತುಸು ಹುಮ್ಮಸ್ಸು ಸೃಷ್ಟಿಸಿದೆ ಎಂಬುದು ಬಿಜೆಪಿಯ ವಾದ. ಅಮಿತ್ ಶಾ ಶನಿವಾರ ಹಾವೇರಿಯಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದು, ಕಿತ್ತೂರು ಕರ್ನಾಟಕ ಭಾಗದಲ್ಲಿ ಮತಬ್ಯಾಂಕ್ ಛಿದ್ರವಾಗದಂತೆ ತಡೆಯಲು ಯತ್ನಾಳ್ ಅವರನ್ನೂ ಒಳಗೊಂಡಂತೆ ಲಿಂಗಾಯತ ನಾಯಕರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
- ರಾಘವೇಂದ್ರ ಭಟ್