ಬೆಂಗಳೂರು: ಕಿತ್ತೂರು ಕರ್ನಾಟಕದಲ್ಲಿ ಜೆಡಿಎಸ್ ಕೋರ್ ಕಮಿಟಿಯ ಸದಸ್ಯರು ಮೂರು ದಿನ ಬಿಟ್ಟು ಕಾರ್ಯಕರ್ತರ ಸಭೆ, ಸಮಾರಂಭಗಳನ್ನು ಏರ್ಪಡಿಸಿ ಪಕ್ಷ ಸಂಘಟನೆ ನಡೆಸಲಿದ್ದೇವೆ ಎಂದು ಕೋರ್ ಕಮಿಟಿಯ ಸಂಚಾಲಕ ವೈ.ಎಸ್.ವಿ.ದತ್ತಾ ಹೇಳಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 11ರಿಂದ 13ರವರೆಗೆ ಕಿತ್ತೂರು ಕರ್ನಾಟಕಕ್ಕೆ ನಮ್ಮ ಕೋರ್ ಕಮಿಟಿಯ 21 ಸದಸ್ಯರು ಭೇಟಿ ನೀಡಲಿದ್ದಾರೆ. ಅ. 11ರಂದು ಬಾಗಲಕೋಟೆ, ವಿಜಯಪುರ, ಅ.12ರಂದು ಹುಬ್ಬಳ್ಳಿಯಲ್ಲಿ ಗದಗ, ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಹಾಗೂ ಅ. 13ರಂದು ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಗಳ ಕಾರ್ಯಕರ್ತರ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು.
ನಾವು ಕಲ್ಯಾಣ ಕರ್ನಾಟಕದಲ್ಲಿ ನಡೆಸಿದ ಸಭೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಭೆಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಈ ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯಯೋಜನೆಗಳು ಹೇಗಿರಬೇಕು ಎಂಬುದರ ಚರ್ಚೆ ನಡೆಸಿದ್ದೇವೆ ಎಂದು ದತ್ತಾ ಮಾಹಿತಿ ನೀಡಿದ್ದಾರೆ.
ಬೆಳೆ ನಷ್ಟಕ್ಕೆ ಪರಿಹಾರ ನೀಡಿಲ್ಲ: ರಾಜ್ಯದಲ್ಲಿ ಬರದಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದರೂ ಸರ್ಕಾರ ಪರಿಹಾರವನ್ನು ನೀಡಿಲ್ಲ. ನಮ್ಮಲ್ಲಿ 40 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದರೂ ಬೆಳೆ ನಷ್ಟಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ ಈ ವರೆಗೆ ಒಂದೇ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ. ದೇವೇಗೌಡ ಇದೇ ವೇಳೆ ಆರೋಪಿಸಿದರು.
ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋನಿಯಾ ಗಾಂಧಿ ನನ್ನ ತಾಯಿ, ಪ್ರಿಯಾಂಕ ಗಾಂಧಿ ನನ್ನ ಸೋದರಿ ಎಂದೆಲ್ಲ ಹೇಳಿದ್ದರು. ಈಗ ನಾನು ಎರಡೂವರೆ ವರ್ಷ ಮುಖ್ಯಮಂತ್ರಿ ಎಂದು ಹೇಳುವ ತಾಕತ್ತು ಅವರಿಗಿಲ್ಲ.
ಸಿದ್ದರಾಮಯ್ಯ ಅವರಿಗೆ ಇರುವ ಎದೆಗಾರಿಕೆ ಶಿವಕುಮಾರ್‌ಗಿಲ್ಲ. ಆದ್ದರಿಂದ ಅವರದ್ದು ಉತ್ತರ ಕುಮಾರನ ಪೌರುಷ ಎಂದು ಜನರು ಮಾತಾನಾಡಿಕೊಳ್ಳುತ್ತಿದ್ದಾರೆ.
-ಜಿ.ಟಿ.ದೇವೇಗೌಡ, ಜೆಡಿಎಸ್ ಮುಖಂಡ