Advertisement

ಕಿಟ್ಟ ಕುಟುಂಬಕ್ಕೆ ಸಿಕ್ಕಿಲ್ಲ ಪರಿಹಾರ!

11:55 AM Apr 12, 2022 | Team Udayavani |

ಕಾರ್ಕಳ: ಕಾರ್ಕಳದ ಕ್ಕುಕುಂದೂರು ಗ್ರಾಮದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಮನೆ ಕಳೆದುಕೊಂಡ ಬಡ ಕುಟುಂಬವೊಂದು ದಯನೀಯ ಸ್ಥಿತಿಯಲ್ಲಿದ್ದು ಈ ಕುಟುಂಬಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ತಮ್ಮ ಕಷ್ಟಗಳಿಗೆ ಸರಕಾರ ಸ್ಪಂದಿಸಬೇಕೆಂದು ಕುಟುಂಬ ಮೊರೆ ಇಟ್ಟಿದೆ.

Advertisement

ಪರಿಶಿಷ್ಟ ಜಾತಿಗೆ ಸೇರಿದ ಇಳಿವಯಸ್ಸಿನ ಕಿಟ್ಟ -ಕಮಲಾ ದಂಪತಿ ಕಳೆದ 35ಕ್ಕೂ ಅಧಿಕ ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡು ಇಲ್ಲಿ ವಾಸವಾಗಿದ್ದರು. 4 ತಿಂಗಳ ಹಿಂದೆ ಈ ಮನೆಯಲ್ಲಿ ನಡೆದ ಅಗ್ನಿ ದುರಂತದ ಬಳಿಕ ಕುಟುಂಬ ಬೀದಿಗೆ ಬಿದ್ದಿದೆ.

ಡಿ. 31ರ ರಾತ್ರಿ ಇವರ ಮನೆಯ ವಿದ್ಯುತ್‌ ವಯರಿಂಗ್‌ನಲ್ಲಿ ಶಾರ್ಟ್‌ ಸರ್ಕ್ನೂಟ್‌ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮನೆಯೇ ಹೊತ್ತಿ ಉರಿದಿತ್ತು. ಈ ಅವಘಡದಲ್ಲಿ ಲಕ್ಷಾಂತರ ರೂ. ಸೊತ್ತು ನಾಶವಾಗಿ ಅಪಾರ ಹಾನಿ ಸಂಭವಿಸಿತ್ತು.

ಮನೆ ಹೊತ್ತಿ ಉರಿದ ಅವಶೇಷಗಳು ಇಂದಿಗೂ ಹಾಗೆಯೇ ಉಳಿದಿವೆ. ಈ ಭಾಗದಲ್ಲಿ ನಿತ್ಯವೂ ಮಳೆಯಾಗುತ್ತಿದೆ. ಮನೆಯಿಂದ ಹೊರ ಬಂದ ಕುಟುಂಬ ಅವಶೇಷಗಳಡಿ ಅಂಗಳದಲ್ಲಿ ಜೋಪಡಿ ಹಾಕಿ ಗಾಳಿ, ಮಳೆಗೆ ಮೈಯೊಡ್ಡಿ ಕುಟುಂಬ ದಿನ ಕಳೆಯುತ್ತಿದೆ.

ಘಟನೆ ನಡೆದು ನಾಲ್ಕು ತಿಂಗಳಿದಿಂದ ಮನೆ ಅಂಗಳವನ್ನು ಆಶ್ರಯಿಸಿಕೊಂಡ ಕುಟುಂಬಕ್ಕೆ ಮಕ್ಕಳೇ ಈಗ ಅಧಾರ. ಪುತ್ರ, ವಿವಾಹಿತೆ ಪುತ್ರಿ ಮತ್ತು ಆಕೆಯ ಇಬ್ಬರು ಮಕ್ಕಳ ಜತೆ ದಂಪತಿ ವಾಸಿಸುತ್ತಿದ್ದು, ಮಗಳು ಶ್ರೀಕ್ಷೇತ್ರ ಧ. ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಲ ಪಡೆದು ಸಣ್ಣ ಮನೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಸಾಲದ ಜತೆಗೆ ಅನಾರೋಗ್ಯ ಪೀಡಿತ ವೃದ್ಧ ಕಿಟ್ಟರಿಗೆ ಔಷಧ ಇತ್ಯಾದಿಗಳಿಗೆ ಆರ್ಥಿಕ ಕೊರತೆ , ಸಾಲ ತೀರಿಸಲಾಗದೆ, ಜೀವನ ನಡೆಸಲು ಕುಟುಂಬ ಪರಿತಪಿಸುತ್ತಿದೆ.

Advertisement

ಕೂಗಳತೆಯಲ್ಲಿದೆ ಕಂದಾಯ ಕಚೇರಿ

ಅವಘಡ ಸಂಭವಿಸಿ ನಾಲ್ಕು ತಿಂಗಳು ಕಳೆದರೂ ಕಂದಾಯ, ಗ್ರಾ.ಪಂ. ಕಚೇರಿ ಕುಟುಂಬ ವಾಸವಿರುವ ಸ್ಥಳದ ಕೂಗಳತೆ ದೂರದಲ್ಲಿದ್ದರೂ ಅವರು ಈ ಕಡೆ ಪರಿಹಾರ ನೀಡಲು ಗಮನಹರಿಸಿಲ್ಲ.

ನಾಲ್ಕು ತಿಂಗಳಾದರೂ ಪರಿಹಾರವಿಲ್ಲ

ಘಟನೆ ನಡೆದ ದಿನ ಸ್ಥಳೀಯಾಡಳಿತ, ಮೆಸ್ಕಾಂ ಇಲಾಖೆ ಅಧಿಕಾರಿಗಳು ಎಲ್ಲರೂ ಭೇಟಿ ನೀಡಿದ್ದರು. ಗ್ರಾ.ಪಂ. ತುರ್ತು ಪರಿಹಾರವೆಂದು 1 ಸಾವಿರ ರೂ. ನೀಡಿ ಕೈ ತೊಳೆದುಕೊಂಡಿದೆ. ಕಂದಾಯ ಅಧಿಕಾರಿಗಳು ನಷ್ಟದ ಲೆಕ್ಕ ಹಾಕಿ ಹೋಗಿದ್ದಾರೆ. ಆದರೆ ಪರಿಹಾರ ಗಗನಕಸುಮವಾಗಿದೆ.

ಬೂದಿಯಾದ ಚಿನ್ನ, ಹಣ

ಮಗ ದುಡಿದು, ಐದು ಮಂದಿ ಹೆಣ್ಣು ಮಕ್ಕಳು ಸಹಾಯ ಮಾಡಿದ ಹಣವನ್ನು ದಂಪತಿ ಕೂಡಿಟ್ಟಿದ್ದರು. 5 ಮಂದಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದರು. ಇದ್ದ ಒಬ್ಬ ಮಗನಿಗೆ ಮದುವೆ ನಿಶ್ಚಯ ವಾಗಿತ್ತು. ಅದಕ್ಕೆಂದು ಚಿನ್ನದ ಒಡವೆ ಖರೀದಿಸಿ ಮನೆಯಲ್ಲಿ ಇಟ್ಟಿದ್ದೆವು. ಅದೆಲ್ಲವೂ ಬೆಂಕಿಗೆ ಆಹುತಿ ಆಗಿವೆ. ಸ್ವಲ್ಪ ಕೂಡಿಟ್ಟ ಹಣವೂ ಬೂದಿಯಾಗಿದೆ. ಇದರ ಮನೆಯ ಇತರ ಎಲ್ಲ ವಸ್ತು ಗಳು ಬೆಂಕಿಗೆ ಕರಕಲಾಗಿವೆ ಎಂದು ವೃದ್ಧೆ ಕಮಲಾ ತಿಳಿಸಿದ್ದಾರೆ.

ಪರಿಶೀಲಿಸಲಾಗುವುದು

ಹಾನಿಗೊಳಗಾಗಿ ನಷ್ಟ ಉಂಟಾದ ಸಂದರ್ಭ ಪರಿಹಾರ ನೀಡಲು ಕೆಲವೊಂದು ಸರಕಾರದ ನಿಯಮಾವಳಿ ಇರುತ್ತದೆ. ಶಾರ್ಟ್‌ ಸರ್ಕ್ನೂಟ್‌ ನ ಎಲ್ಲ ಪ್ರಕರಣಗಳಿಗೆ ಪರಿಹಾರ ನೀಡಲು ಬರುವುದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಪ್ರದೀಪ್‌ ಕುರ್ಡೇಕರ್‌ ತಹಶೀಲ್ದಾರ್‌, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next