ಬಹುತೇಕರಿಗೆ ರೈಟ್ ಬ್ರದರ್ಸ್ ಗೊತ್ತು. ಆದರೆ, ಕೈಟ್ ಬ್ರದರ್ಸ್ ಗೊತ್ತಾ? ಆ ರೈಟ್‌ಬ್ರದರ್ಸ್ ಆಗಸದಲ್ಲಿ ಹಾರುವ ವಿಮಾನ ಕಂಡು ಹಿಡಿದವರು. ಆದರೆ, ಈ ಕೈಟ್ ಬ್ರದರ್ಸ್ ಯಾರು?
“ಕೈಟ್ ಬ್ರದರ್ಸ್’ ಎಂಬ ಹೊಸ ಸಿನಿಮಾವೊಂದು ಸದ್ದಿಲ್ಲದೆಯೇ ಶುರುವಾಗಿ ಚಿತ್ರೀಕರಣವಾಗುತ್ತಿದೆ. ಈ ಚಿತ್ರದ ಮೂಲಕ ಮಂಜುನಾಥ ಬಗಾಡೆ ನಿರ್ದೇಶಕರಾಗುತ್ತಿದ್ದಾರೆ. ಹಲವು ವರ್ಷಗಳ ಕಾಲ ಕಿರುತೆರೆ, ಹಿರಿತೆರೆಯಲ್ಲೂ ಕೆಲಸ ಮಾಡಿದ್ದ ಮಂಜುನಾಥ ಬಗಾಡೆ, ಇದೀಗ ಕಥೆ-ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನಕ್ಕಿಳಿದಿದ್ದಾರೆ. ಭಜರಂಗ ಸಿನಿಮಾ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಮೊದಲ ಚಿತ್ರವಿದು. ಶೀರ್ಷಿಕೆಯೇ ಹೇಳುವಂತೆ ಇದೊಂದು “ಗಾಳಿಪಟ’ ಹಿನ್ನೆಲೆಯಲ್ಲಿ ಸಾಗುವ ಕಥೆ. “ನಥಿಂಗ್ ಈಸ್ ಇಂಪಾಸಿಬಲ್’ ಎನ್ನುವ ಮಂತ್ರ ನಂಬಿರುವ 12 ವರ್ಷದ ಇಬ್ಬರು ಹಳ್ಳಿ ಹುಡುಗರ ಕಾಮಿಡಿ ಅಡ್ವೆಂಚರಸ್ ಡ್ರಾಮ ಇಲ್ಲಿದೆ.
“ಮನುಷ್ಯನ ಜೀವನದ ಬಾಲ್ಯ ಎನ್ನುವ ಸುವರ್ಣ ಯುಗ ನೆನಪಿಗೆ ತಂದು ಕೊಡುವ ಕಥೆಯಲ್ಲಿ ಮಹಾತ್ಮ ಗಾಂಧೀಜಿಯೂ ಇಲ್ಲಿ ಪ್ರಮುಖ ಪಾತ್ರವಾಗಿ ಕಾಣಸಿಗುವುದು ಒಂದು ವಿಶೇಷ’ ಎನ್ನುತ್ತಾರೆ ನಿರ್ದೇಶಕ ಮಂಜುನಾಥ ಬಗಾಡೆ. ಇಲ್ಲಿ “ಕೈಟ್ ಬ್ರದರ್ಸ್’ ಯಾರು, ಅವರಿಗೇಕೆ ಕೈಟ್ ಬ್ರದರ್ಸ್ ಎಂಬ ಹೆಸರು ಬಂತು, ಎಂಬ ಪ್ರಶ್ನೆಗಳಿಗೆ ಸಿನಿಮಾ ನೋಡಬೇಕು ಎನ್ನುವ ನಿರ್ದೇಶಕರು, ಹಳ್ಳಿಯಿಂದ ಸಿಟಿಗೆ ಬರುವ ಇಬ್ಬರು ವಿದ್ಯಾರ್ಥಿಗಳು ಮಾಡುವ ಸಾಧನೆಯೇ ಚಿತ್ರದ ಹೈಲೈಟ್ ಎನ್ನುತ್ತಾರೆ . ಇಲ್ಲಿ ಇನ್ನೊಂದು ಪ್ರಮುಖ ಪಾತ್ರವೂ ಇದೆ. ಆ ಪಾತ್ರವನ್ನು ವಿನೋದ್ ಬಗಾಡೆ ಎಂಬುವವರು ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಳ್ಳುತ್ತಿವೆ. ಮಾ.ಸಮರ್ಥ ಆಶಿ, ಮಾ. ಪ್ರಣೀಲ… ನಾಡಿಗೇರ, ಬೇಬಿ ಶ್ರೇಯಾ ಹರಿಹರ, ಶಿವಕುಮಾರ್ ರಾಯನಾಳ, ಅಭಿಷೇಕ್ ಮುದರೆಡ್ಡಿ, ಕಿರಣ್ ಬಗಾಡೆ, ಅಭಿಷೇಕ್ ಕುರಳಿ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಅನಸೂಯಾ ಹಂಚಿನಾಳ, ರಾಜೀವ ಸಿಂಗ್ ಹಲವಾಯಿ ಎಂಬ ರಂಗಭೂಮಿ ಕಲಾವಿದರಿದ್ದಾರೆ.
ಚಿತ್ರದ ಇನ್ನೊಂದು ವಿಶೇಷವೆಂದರೆ, ಅಶೋಕ್ ಕಶ್ಯಪ್ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಅನೀಶ್ ಚೆರಿಯಾನ್ ಸಂಗೀತವಿದೆ. ಸಂತೋಷ್ ರಾಧಾಕೃಷ್ಣನ್ ಸಂಕಲನ ಮಾಡಿದರೆ, ಯೋಗರಾಜ್‌ಭಟ್, ಜಯಂತ್ ಕಾಯ್ಕಿಣಿ, ಸಿಂಪಲ್ ಸುನಿ, ಮಂಜುನಾಥ ಬಗಾಡೆ ಅವರ ಸಾಹಿತ್ಯ ಚಿತ್ರಕ್ಕಿದೆ. ಬೆಂಗಳೂರು, ಅಹಮದಾಬಾದ್, ಧಾರವಾಡ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಆಗಸ್ಟ್ ಹೊತ್ತಿಗೆ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮುಂದೆ ಚಿತ್ರ ಬರಲಿದೆ.