Advertisement

ತಾರಸಿಯಲ್ಲಿ ತರಕಾರಿ ಬೆಳೆಯಲು ಕಿಟ್‌

09:32 AM May 27, 2019 | Lakshmi GovindaRaj |

ಬೆಂಗಳೂರು: ಇದು “ಆಲ್‌ ಇನ್‌ ಒನ್‌’ ತರಕಾರಿ ಬೆಳೆ ಕಿಟ್‌. ಒಂದೇ ಬಾಕ್ಸ್‌ನಲ್ಲಿ ಬೀಜ, ಗೊಬ್ಬರ, ಔಷಧ, ಕೈಪಿಡಿ, ಕೊಕೊಪೀಟ್‌ ಎಲ್ಲವೂ ಲಭ್ಯ!

Advertisement

ಇದರ ಹೆಸರು ಅರ್ಬನ್‌ ಹಾರ್ಟಿ ಕಿಟ್‌. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ತಾರಸಿಯಲ್ಲಿ ತರಕಾರಿ ಬೆಳೆಯುವ “ಟ್ರೆಂಡ್‌’ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರವಾಸಿಗಳ ಅನುಕೂಲಕ್ಕಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಈ ವಿನೂತನ ಕಿಟ್‌ ಪರಿಚಯಿಸಿದೆ.

ಮನೆಯ ಛಾವಣಿಯಲ್ಲಿ ತರಕಾರಿ ಬೆಳೆಯಲು ನಗರದ ಜನ ಉತ್ಸುಕರಾಗಿದ್ದಾರೆ. ಆದರೆ, ಅವರಿಗೆ ಗುಣಮಟ್ಟದ ಬೀಜ, ಗೊಬ್ಬರ ಸಿಗುತ್ತಿಲ್ಲ. ಬೆಳೆಯುವ ಪದ್ಧತಿ ಕುರಿತು ಮಾಹಿತಿ ಕೊರತೆ ಇದೆ. ಪ್ರತಿಯೊಂದು ವಸ್ತುವಿಗೆ ಒಂದೊಂದು ಕಡೆ ಹೋಗಬೇಕಾಗಿದೆ.

ಇದೆಲ್ಲವೂ ಅರ್ಬನ್‌ ಹಾರ್ಟಿ ಕಿಟ್‌ನಲ್ಲೇ ಲಭ್ಯವಾಗುತ್ತದೆ. ಇದರಿಂದ ಜನರಿಗೆ ಅಲೆದಾಟ ತಪ್ಪುತ್ತದೆ. ಜತೆಗೆ ಹೆಚ್ಚು ಇಳುವರಿ ನೀಡುವ ಗುಣಮಟ್ಟದ ಬೀಜಗಳು ಇರುವುದರಿಂದ ಅನುಕೂಲ ಆಗಲಿದೆ ಎಂದು ಐಐಎಚ್‌ಆರ್‌ ಯೋಜನಾ ಸಂಯೋಜಕ ಪ್ರಕಾಶ್‌ ಪಾಟೀಲ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏನೇನು ಇದೆ?: ಕಿಟ್‌ನಲ್ಲಿ ಟೊಮೇಟೊ, ಮೆಣಸಿನಕಾಯಿ, ಬೆಂಡೇಕಾಯಿ, ಬೀನ್ಸ್‌, ಸೊಪ್ಪು ಸೇರಿದಂತೆ ನಾಲ್ಕರಿಂದ ಐದು ಪ್ರಕಾರದ ತರಕಾರಿ ಬೀಜಗಳು, ಹೂವಿನ ಬೆಳೆಗಳು, ನೀಮ್‌ ಪೆಟಲ್‌ಗ‌ಳು, ಎಎಂಸಿ (ಅರ್ಕಾ ಮೈಕ್ರೋಬೈಲ್‌ ಕನ್ಸೋರ್ಷಿಯಂ), ಕೊಕೊಪೀಟ್‌ ಇರುತ್ತದೆ.

Advertisement

ಹತ್ತು ಕುಂಡಗಳಲ್ಲಿ ಈ ಬೀಜಗಳನ್ನು ಊರಿ ತರಕಾರಿ ಬೆಳೆಯಬಹುದು. ಕುಂಡಗಳಲ್ಲಿ ಹಾಕಿದ ಆರು ತಿಂಗಳಲ್ಲಿ ಬೆಳೆ ಬರುತ್ತದೆ. ಬೆಳೆಯುವ ಪದ್ಧತಿ ಬಗ್ಗೆಯೂ ಕೈಪಿಡಿ ಇರಲಿದೆ. ನಾಲ್ಕರಿಂದ ಆರು ಜನರಿಗೆ ಸಾಕಾಗುವಷ್ಟು ತರಕಾರಿ ಇದರಿಂದ ಲಭ್ಯವಾಗಲಿದೆ ಎಂದು ಹೇಳಿದರು.

ಪ್ರಾಥಮಿಕವಾಗಿ ಲಾಲ್‌ಬಾಗ್‌, ಕಬ್ಬನ್‌ ಉದ್ಯಾನದಲ್ಲಿ ಈ ಕಿಟ್‌ಗಳನ್ನು ಮಾರಾಟಕ್ಕೆ ಇಡಲಾಗುವುದು. ಇವುಗಳ ಬೆಲೆ 1,000 ರೂ. ಆದರೆ, ಈಗಷ್ಟೇ ಬಿಡುಗಡೆ ಮಾಡಿರುವುದರಿಂದ ರಿಯಾಯ್ತಿ ದರ ಅಂದರೆ, 500 ರೂ.ಗೆ ನೀಡಲಾಗುವುದು ಎಂದರು. ಮಾಹಿತಿಗೆ ದೂ: 080-23086100 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next