ಸವಣೂರು: ಕಂಟೈನ್ಮೆಂಟ್ ಪ್ರದೇಶದಲ್ಲಿ ವಾಸವಿರುವ ಜನರಿಗೆ ನಿರಂತರವಾಗಿ ಅವಶ್ಯಕ ದಿನಸಿ ವಿತರಣೆಯಲ್ಲಿ ಸಹಕಾರ ನೀಡುತ್ತಿರುವ ಜೆಸಿಐ ಸವಣೂರು ಘಟಕ ತಾಲೂಕಾಡಳಿತ ವ್ಯವಸ್ಥೆ ಹಾಗೂ ದಾನಿಗಳ ನಡುವೆ ಕೊಂಡಿಯಾಗಿ ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ತಿಳಿಸಿದರು. ಪಟ್ಟಣದ ವಿವಿಧ ಸಂಘ, ಸಂಸ್ಥೆಗಳು ಹಾಗೂ ದಾನಿಗಳಿಂದ ವಿವಿಧ ಜೀವನಾವಶ್ಯಕ ವಸ್ತುಗಳನ್ನು ಪಡೆದು ಎಸ್.ಎಂ. ಕೃಷ್ಣನಗರ(ಸೀಲ್‌ಡೌನ್ ಪ್ರದೇಶ)ದ 400 ಕುಟುಂಬಗಳಿಗೆ ವಿತರಿಸಲು ದಿನಸಿ ಕಿಟ್‌ಗಳನ್ನು ತಯಾರಿಸಿದ ಜೆಸಿಐ ಸವಣೂರು ಘಟಕದ ಪದಾ ಕಾರಿಗಳು ತಾಲೂಕು ಆಡಳಿತ ವ್ಯವಸ್ಥೆಗೆ ಹಸ್ತಾಂತರಿಸಿದ ಕಿಟ್‌ಗಳನ್ನು ಸ್ವೀಕರಿಸಿ ಮಾತನಾಡಿದರು. ಜೆಸಿಐ ಕರೆಗೆ ಸ್ಪಂದಿಸುತ್ತಿರುವ ದಾನಿಗಳು ನಿತ್ಯ ಜೀವನಾವಶ್ಯಕ ವಸ್ತುಗಳನ್ನು ನೀಡಿರುವುದು ಸಂತಸ ಸಂಗತಿಯಾಗಿದೆ. ದಾನಿಗಳಿಂದ ಪಡೆಯಲಾದ ಅಡುಗೆ ಎಣ್ಣೆ, ಪೇಸ್ಟ್, ಚಹಾಪುಡಿ ಸೇರಿದಂತೆ ವಿವಿಧ ಜೀವನ ಅವಶ್ಯಕ ವಸ್ತುಗಳ ಕಿಟ್ಟನ್ನು ವಿತರಿಸುವುದರ ಜೊತೆಗೆ ಸರ್ಕಾರದ ವತಿಯಿಂದ ಉಚಿತ ಪಡಿತರ ಹಾಗೂ ಪ್ರತಿ ದಿನ 400 ಕುಟುಂಬಗಳಿಗೆ ಉಚಿತ ಹಾಲನ್ನು ವಿತರಿಸಲಾಗುತ್ತಿದೆ. ಸೀಲ್‌ಡೌನ್ ಅವಧಿಮುಂದುವರಿಯಲಿದೆ ಎಂದರು. ಜೆಸಿಐ ನಮ್ಮ ಸವಣೂರು ಘಟಕದ ನಿಕಟಪೂರ್ವ ಅಧ್ಯಕ್ಷ ಯೋಗೇಂದ್ರ ಜಂಬಗಿ ಮಾತನಾಡಿದರು. ಜೆಸಿಐ ಸವಣೂರ ಘಟಕದ ಅಧ್ಯಕ್ಷ ವಿದ್ಯಾಧರ ಕುತನಿ, ಉಪಾಧ್ಯಕ್ಷ ರಮೇಶ ಅರಗೋಳ, ಶಂಕ್ರಯ್ಯ ಹಿರೇಮಠ, ಆನಂದ ಮತ್ತಿಗಟ್ಟಿ, ಕಾರ್ಯದರ್ಶಿ ಸತೀಶ ಪೂಜಾರ, ಸ್ಥಳೀಯ ಕಿರಾಣಿ ವರ್ತಕರ ಸಂಘದ ಪದಾಕಾರಿಗಳಾದ ಮುರಳಿಧರ ಶೆಂಡಿಗೆ, ಮಂಜುನಾಥ ಶೆಟ್ಟರ ಹಾಗೂ ಇತರರು ಇದ್ದರು.