Advertisement
ಹಿಂದಿನ ಕಾಲದಲ್ಲಿ ಹೆಣ್ಣು ಮಗಳು ಪ್ರಥಮಬಾರಿಗೆ ಋತುಮತಿಯಾದಾಗ ಊರು ಮತ್ತು ಊರಿನ ಎಲ್ಲಾ ಸಂಬಂಧಿಕರನ್ನು, ಹಿತೈಷಿಗಳನ್ನು ಮತ್ತು ಹಿರಿಯರನ್ನು ಕರೆದು ಅದನ್ನು ಸಂಭ್ರಮವೆಂದು ಭಾವಿಸಿ ದೊಡ್ಡ ಸಮಾರಂಭವನ್ನೇ ಏರ್ಪಡಿಸುತ್ತಿದ್ದರು.
- ಹೆಣ್ಣು ಮಗಳು ಮಾನಸಿಕವಾಗಿ ಗಟ್ಟಿಗೊಳ್ಳಲು ಹಾಗೂ ನಾವೆಲ್ಲ ನಿನ್ನ ಜೊತೆ ಇದ್ದೇವೆ ಎಂದು ಆಕೆಗೆ ಅರ್ಥ ಮಾಡಿಸಲು.
- “ನೀನೀಗ ಈ ಮನೆಯಿಂದ ಮತ್ತೂಂದು ಮನೆಗೆ ಹೋಗಿ ಸಂಸಾರದ ಭಾರ ಹೊರಲು ಸಮರ್ಥಳು’ ಎಂದು ತಿಳಿಸಲು.
- ಆ ಸಮಾರಂಭಕ್ಕೆ ಬಂದಿದ್ದ ಅತಿಥಿಗಳಿಗೆ ನಿಮ್ಮ ಮನೆಯಲ್ಲಿ ಗಂಡುಮಕ್ಕಳಿದ್ದರೆ ಮದುವೆ ಮಾತುಕತೆಗೂ ಈ ಮೂಲಕ ಆಹ್ವಾನಿಸುತ್ತಿದ್ದೇವೆ ಎಂದು ಪ್ರತ್ಯಕ್ಷವಾಗಿ ಮತ್ತು ಅಪ್ರತ್ಯಕ್ಷವಾಗಿ ಕರೆ ನೀಡಲು.
Related Articles
ಈ ಯಾಂತ್ರಿಕ ಯುಗದಲ್ಲಿ ಮಗಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕಾಲಿಟ್ಟರೆ ಮನೆಯವರನ್ನು ಹೊರತುಪಡಿಸಿ ತೀರಾ ಆತ್ಮೀಯ ಸಂಬಂಧಿಕರಿಗೂ ತಿಳಿಸುವ ಅಗತ್ಯವಾಗಲಿ, ಮನಸ್ಥಿತಿಯಾಗಲಿ ಈಗಿಲ್ಲ. ಅದಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಟ್ಟು ಎಲ್ಲರನ್ನು ಕರೆಯುವ ಆವಶ್ಯಕತೆ ಇಲ್ಲವೆನ್ನುವ ಅಭಿಪ್ರಾಯ ಅನೇಕ ಪೋಷಕರದ್ದು. ಇಲ್ಲಿ ಅದು ಸರಿ ತಪ್ಪು ಎನ್ನುವ ತರ್ಕ ಅನಾವಶ್ಯಕ. ಅದು ಅವರವರ ಮನೋಭಾವಕ್ಕೆ ಬಿಟ್ಟ ವಿಚಾರ. ಆದರೆ, ಅದನ್ನು ಯಾವ ಮನಸ್ಥಿತಿಯಲ್ಲಿ ಮಕ್ಕಳು ಸ್ವೀಕರಿಸಬೇಕೆಂದು ಅರ್ಥೈಸಿಕೊಳ್ಳುವಂತೆ ಮಾಡುವ ಕೆಲಸ ಪೋಷಕರದ್ದು.
Advertisement
ಇಲ್ಲಿ ಹೆತ್ತವರ ಜವಾಬ್ದಾರಿ ಏನು?ಇತ್ತೀಚೆಗೆ ಹೆಣ್ಣುಮಗಳಿಗೆ ಒಂಬತ್ತು, ಹತ್ತು ವರ್ಷ ತುಂಬಿತೆಂದರೆ ಎಲ್ಲಾ ಪೋಷಕರಿಗೂ ಇನ್ನೇನು ಮಗಳು ಪ್ರೌಢಳಾಗಬಹುದೆ? ಎನ್ನುವ ಯೋಚನೆ ಕಾಡುತ್ತಿರುತ್ತದೆ. ಈ ವಯಸ್ಸಿಗೆ ಪ್ರೌಢಳಾದರೆ ಕಲಿಕೆಗೆ ತೊಂದರೆಯಾಗಬಹುದೆ?ಆಕೆಗೆ ಯಾವ ರೀತಿಯ ಆಹಾರ ಕೊಡಬೇಕು? ಯಾವ ರೀತಿಯ ಆಹಾರ ಕೊಡಬಾರದು? ಆ ಎಳೆಯ ಮನಸ್ಸಿಗೆ ಈ ವಿಷಯದ ಬಗ್ಗೆ ಯಾವ ರೀತಿ ತಿಳಿ ಹೇಳುವುದು? ಹೀಗೆ ಒಂದರ ಹಿಂದೆ ಒಂದು ಇಂತಹ ಅನೇಕ ಪ್ರಶ್ನೆಗಳು ಕಾಡಬಹುದು. ಇದಕ್ಕೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದರೆ, ತಮ್ಮೊಂದಿಗೆ ಮಕ್ಕಳು ಅದನ್ನು ಹೇಗೆ ನಿಭಾಯಿಸಿಕೊಳ್ಳಬೇಕೆಂದು ಪೂರ್ವತಯಾರಿ ಪೋಷಕರು ಮಾಡಿಕೊಂಡಿರಬೇಕು. ಮಕ್ಕಳಿಗೆ ಪೋಷಕರು ತಿಳಿಸಲೇಬೇಕಾದ ಅಂಶಗಳು
- ಮಗಳು ಪ್ರೌಢಾವಸ್ಥೆಯ ಹೊಸ್ತಿಲಿಗೆ ಇನ್ನೇನು ಕಾಲಿಡಬಹುದು ಎಂಬ ಯೋಚನೆ ನಿಮ್ಮಲ್ಲಿ ಮೂಡಿದಾಗ ಅದರ ಬಗ್ಗೆ ವಿವರಿಸುತ್ತಾ ಅವಳನ್ನು ಮಾನಸಿಕವಾಗಿ ಸಿದ್ಧ ಮಾಡಿ.
- ಅದರ ಜೊತೆಗೆ ಅದನ್ನು ಅವಳು ಸಕಾರಾತ್ಮಕವಾಗಿ ಸ್ವೀಕರಿಸುವಂತೆ ನೋಡಿಕೊಳ್ಳಿ.
- ಪ್ರಕೃತಿ ಹೆಣ್ಣಿಗೆ ಕೊಟ್ಟ ವಿಶೇಷ ಸುಂದರ ವರದಾನ ಇದು… ಎಂದು ಮನದಟ್ಟು ಮಾಡಿಕೊಡಿ.
- ಆ ಸಂದರ್ಭದಲ್ಲಿ ತನ್ನ ಸ್ವತ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು? ಋತುಮತಿಯಾದಾಗ ಬರುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕೆಂದು ಮೊದಲೇ ತಿಳಿಸಿರಿ.
- ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕಾಲಿಟ್ಟಾಗ ಆಕೆ ಅನುಭವಿಸುವ ಮಾನಸಿಕ ಗೊಂದಲಗಳನ್ನು ಅರಿತು ಸೂಕ್ತವಾದ ಸಮಾಧಾನ ಹೇಳಲು ಪ್ರಯತ್ನಿಸಿ.
- ಅವರ ಪ್ರತಿಯೊಂದು ಪ್ರಶ್ನೆಗಳಿಗೂ ಅತ್ಯಂತ ತಾಳ್ಮೆಯಿಂದ ವಿವೇಚನೆಯಿಂದ ಉತ್ತರಿಸಿ.
- ಮಗಳು ಪ್ರೌಢಾವಸ್ಥೆಗೆ ಕಾಲಿಟ್ಟ ಮೇಲೆ ಪುರುಷ ಸಮಾಜದ ಜೊತೆ ಹೇಗೆ ನಡೆದುಕೊಳ್ಳಬೇಕು? ಅವಳಿಗೆ ಅಪಾಯವಾಗುವ ಸಂದರ್ಭ ಬಂದರೆ ಅವಳನ್ನು ಅವಳೇ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದನ್ನು ನಿಮಗೆ ತಿಳಿದ ಮಟ್ಟಿಗಾದರೂ ಸಲಹೆ ನೀಡಿ.
- ಸಾಧ್ಯವಾದಷ್ಟು ಅವಳಿಗೆ ಉತ್ತಮ ಆಹಾರ ನೀಡುವುದರ ಜೊತೆಗೆ ಹೆಚ್ಚಿನ ಮಾನಸಿಕ ಸ್ಥೈರ್ಯ ತುಂಬಿ.
- ಪರೀಕ್ಷೆಯ ಸಂದರ್ಭದಲ್ಲೂ ಋತುಮತಿಯಾದಾಗ ಅದನ್ನು ಹೇಗೆ ನಿಭಾಯಿಸಬೇಕೆಂದು ಮನದಟ್ಟಾಗುವಂತೆ ತಿಳಿ ಹೇಳಿ.