Advertisement

62 ಸಾವಿರ ರೈತರಿಗಿಲ್ಲ “ಕಿಸಾನ್‌ ಸಮ್ಮಾನ್‌”

12:06 PM Jan 07, 2022 | Team Udayavani |

ಬೀದರ: ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಹೊಸ ವರ್ಷದ ಉಡುಗರೆಯಾಗಿ ಪ್ರಧಾನಿ ಮೋದಿ “ಕಿಸಾನ್‌ ಸಮ್ಮಾನ್‌’ ಯೋಜನೆಯಡಿ 10ನೇ ಕಂತಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿದ್ದಾರೆ. ಆದರೆ ಮಹತ್ವಕಾಂಕ್ಷಿ ಯೋಜನೆಯಡಿ ಜಿಲ್ಲೆಯ 62 ಸಾವಿರ ರೈತರು ಈ ಕಂತಿನದಿಂದ ವಂಚಿತರಾಗಿದ್ದು, ಸರ್ಕಾರದ ನೆರವಿನ ಹಣಕ್ಕೆ ಎದುರು ನೋಡುತ್ತಿದ್ದಾರೆ.

Advertisement

ರೈತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವರ್ಷಕ್ಕೆ 6,000 ಹಣವನ್ನು ಮೂರು ಸಮಾನ ಕಂತುಗಳಲ್ಲಿ ನೀಡುತ್ತಿದೆ. ಇದಕ್ಕೆ ಜತೆಯಾಗಿ ರಾಜ್ಯ ಸರ್ಕಾರ 4,000 ರೂ. ಎರಡು ಕಂತುಗಳಲ್ಲಿ ಜಮೆ ಮಾಡುತ್ತಿವೆ. ಅದರಂತೆ ಕೇಂದ್ರದಿಂದ ವಾರ್ಷಿಕವಾಗಿ 3ನೇ ಕಂತಾಗಿ 2 ಸಾವಿರ ರೂ.ಗಳಂತೆ ಜ.1ರಂದು ನಿಧಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಬಾರಿ ರೈತರ ದಾಖಲಾತಿಗಳ ಪರಿಶೀಲನೆ ಹೆಸರಲ್ಲಿ ಸುಮಾರು 62,214 ಕೃಷಿಕರ ಹಣವನ್ನು ಸಿಲುಕಿಕೊಂಡಿದ್ದು, ಯೋಜನೆಯಿಂದ ವಂಚಿತರನ್ನಾಗಿ ಮಾಡಲಾಗಿದೆ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆ 1,76,625 ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಈ ಹಿಂದಿನ ಕಂತುಗಳ ಲಾಭವನ್ನು ಪಡೆದುಕೊಂಡಿದ್ದಾರೆ. 2 ಹೆಕ್ಟೇರ್‌ ನೊಳಗೆ ಕೃಷಿ ಭೂಮಿ ಹೊಂದಿರುವ ಸಣ್ಣ-ಅತಿ ಸಣ್ಣ ರೈತರ ಖಾತೆಗೆ ಡಿಜಿಟಲ್‌ ಬ್ಯಾಂಕಿಂಗ್‌ ಮೂಲಕ ನೇರವಾಗಿ ಜಮೆ ಮಾಡಲಾಗಿದೆ. 10ನೇ ಕಂತಿನಲ್ಲಿ ಮಾತ್ರ ಜಿಲ್ಲೆಯ 1,14,411 ಕೃಷಿಕರಿಗೆ ಮಾತ್ರ ಈವರೆಗೆ ಹಣ ಜಮೆ ಆಗಿದೆ.

ಇನ್ನೂ ಬರೋಬ್ಬರಿ 62,214 ರೈತರ ಕೈಗೆ ಹಣ ಸಿಕ್ಕಿಲ್ಲ. ಭೂಮಿ ರೆಕಾರ್ಡ್ ನಲ್ಲಿ ರೈತರ ಕೃಷಿ ಭೂಮಿ ಮತ್ತು ಆಧಾರ್‌ ಸಂಖ್ಯೆ ಇತರೆ ದಾಖಲೆಗಳಲ್ಲಿ ತಪ್ಪು ಕಂಡು ಬಂದಿದ್ದರಿಂದ ಕಡಿತ ಮಾಡಲಾಗಿದ್ದು, ಜನವರಿ ಅಂತ್ಯದೊಳಗೆ ಮರು ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಈ ಕಾರಣಕ್ಕೆ ವಿಳಂಬವಾಗಿದೆ ಎಂಬುದು ಕೃಷಿ ಅಧಿಕಾರಿಗಳ ಸಬೂಬು. ಆದರೆ, ಹಿಂದಿನ ಕಂತುಗಳಲ್ಲಿ ಪ್ರೋತ್ಸಾಹ ಧನ ಪಡೆದಿರುವ ರೈತರ ದಾಖಲೆಗಳು ಮುಂದಿನ ಕಂತುಗಳಲ್ಲಿ ಹೇಗೆ ತಪ್ಪು ಆಗುತ್ತವೆ ಎಂದು ಆತಂಕ.

ಕೋವಿಡ್‌-19 ಜತೆಗೆ ಅತಿವೃಷ್ಟಿಯಿಂದಾಗಿ ಕೃಷಿಕರು ಆರ್ಥಿಕವಾಗಿ ಕುಸಿತ ಕಂಡಿದ್ದಾರೆ. ಈಗ ಸಾಲ ಸೂಲ ಮಾಡಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಆದರೆ, ಈಗ ದಾಖಲೆಗಳ ಪರಿಶೀಲನೆ ನೆಪದಲ್ಲಿ ಕಡಿತ ಮಾಡಿರುವುದು ಪ್ರಧಾನಿಗಳು ಘೋಷಿಸಿದ್ದ ಸಿಹಿ ಸುದ್ದಿ ರೈತರಿಗೆ ಇನ್ನೂ ಕಹಿಯಾಗಿಯೇ ಪರಿಣಮಿಸಿದೆ.

Advertisement

ಇದನ್ನೂ ಓದಿ:ಕೇಂದ್ರದಿಂದಲೇ ಭದ್ರತಾ ಲೋಪವಾಗಿದೆ, ಪ್ರಧಾನಿಗಳೇ ಮಾರ್ಗಸೂಚಿಗಳನ್ನು ಪಾಲಿಸಿಲ್ಲ: ಖರ್ಗೆ

“ಕಿಸಾನ್‌ ಸಮ್ಮಾನ್‌’ ಅಡಿ ಜಿಲ್ಲೆಗೆ 10ನೇ ಕಂತಿನಲ್ಲಿ 22.88 ಕೋಟಿ ರೂ. ಸೇರಿ ಈವರೆಗಿನ ಎಲ್ಲ ಕಂತುಗಳಲ್ಲಿ 358.52 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಅದರಲ್ಲಿ ಕೇಂದ್ರ ಸರ್ಕಾರದಿಂದ 1.91 ಲಕ್ಷ ರೈತರಿಗೆ 264 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 1,62,991 ರೈತರಿಗೆ 94.52 ಕೋಟಿ ರೂ. ಬಂದಿದೆ. ಜಿಲ್ಲೆಗೆ ಬಿಡುಗಡೆಯಾದ ಒಟ್ಟಾರೆ ನಿಧಿಯಲ್ಲಿ ಅತಿ ಹೆಚ್ಚು ಭಾಲ್ಕಿ ತಾಲೂಕು 84.49 ಕೋಟಿ ರೂ. ಮತ್ತು ಅತಿ ಕಡಿಮೆ ಬೀದರ ತಾಲೂಕು 56.63 ಕೋಟಿ ರೂ. ಸೇರಿದಂತೆ. ಇನ್ನುಳಿದಂತೆ ಔರಾದ ತಾಲೂಕು 77.49 ಕೋಟಿ, ಬಸವಕಲ್ಯಾಣ 75.03 ಕೋಟಿ ಮತ್ತು ಹುಮನಾಬಾದ್‌ 64.88 ಕೋಟಿ ರೂ. ಜಮೆ ಆಗಿದೆ.

“ಕಿಸಾನ್‌ ಸಮ್ಮಾನ್‌’ ಅಡಿ ಜಿಲ್ಲೆಯ ನೋಂದಾಯಿತ ರೈತರ ಪೈಕಿ 1,14,411 ಮಂದಿಗೆ ಹಣ ಜಮೆ ಆಗಿದೆ. ಇನ್ನುಳಿದ 62,214 ಕೃಷಿಕರಿಗೆ ಹಣ ಬಂದಿಲ್ಲ. ಅವರ ಕೃಷಿ ಭೂಮಿ ದಾಖಲೆ ಮತ್ತು ಆಧಾರ್‌ ಸಂಖ್ಯೆ ಮರು ಪರಿಶೀಲನೆ ನಡೆಯುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಈವರೆಗೆ ಯೋಜನೆಯಡಿ ಜಿಲ್ಲೆಗೆ ಒಟ್ಟಾರೆ 358.52 ಕೋಟಿ ಹಣ ಬಂದಿದೆ. -ತಾರಾಮಣಿ ಜಿ.ಎಚ್‌, ಜಂಟಿ ಕೃಷಿ ನಿರ್ದೇಶಕರು, ಬೀದರ

ಕಿಸಾನ್‌ ಸಮ್ಮಾನ್‌ ಯೋಜನೆಯ ಲಾಭದಿಂದ ಜಿಲ್ಲೆಯ ಸಾವಿರಾರು ರೈತರು ವಂಚಿತರಾಗಿದ್ದಾರೆ. 9ನೇ ಕಂತು ಪಡೆದಿರುವ ಸಾಕಷ್ಟು ರೈತರಿಗೆ ಹೊಸ ಕಂತಿನಿಂದ ಕಡಿತ ಮಾಡಲಾಗಿದೆ. ಈ ಹಿಂದೆ ಸರಿಯಾಗಿದ್ದ ದಾಖಲೆಗಳು ಈಗ ತಪ್ಪು ಎಂದು ಹೇಳಿ ಮರು ಪರಿಶೀಲನೆ ಹೆಸರಿನಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಈ ಸಮಸ್ಯೆ ಪರಿಹರಿಸಿ ಹಣ ಕೃಷಿಕರ ಕೈಸೇರುವಂತೆ ಕ್ರಮ ವಹಿಸಬೇಕು. -ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧ್ಯಕ್ಷ, ರೈತ ಸಂಘ, ಬೀದರ

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next