ಕೋಲ್ಕತಾ: ಪಶ್ಚಿಮ ಬಂಗಾಳದ ಕಿರಿಟೇಶ್ವರಿ ಗ್ರಾಮವು ಭಾರತದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಎಂಬ ಹಿರಿಮೆಗೆ ಪಾತ್ರವಾಗಿದೆ.
ಗ್ರಾಮದಲ್ಲಿ ಕೋಮು ಸಾಮರಸ್ಯ ಮತ್ತು ವಿಶಿಷ್ಟ ವಾಸ್ತುಶಿಲ್ಪಕ್ಕಾಗಿ ಭಾರತೀಯ ಪ್ರವಾಸೋದ್ಯಮ ಇಲಾಖೆಯಿಂದ ದೇಶದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಪ್ರಶಸ್ತಿಗೆ ಭಾಜನವಾಗಿದೆ.
ಶಕ್ತಿಪೀಠಗಳಲ್ಲಿ ಒಂದಾದ ಕಿರಿಟೇಶ್ವರಿ ದೇಗುಲದ ಕಾರಣಕ್ಕಾಗಿ ಬರ್ಹಾಂಪುರ ಜಿಲ್ಲೆಯ ಈ ಗ್ರಾಮವು ಕಿರಿಟೇಶ್ವರಿ ಎಂದು ಹೆಸರು ಪಡೆದಿದೆ. ಈ ಗ್ರಾಮದಲ್ಲಿ 800-1000 ವರ್ಷಗಳ ಹಳೆಯ ಇತರೆ ದೇಗುಲಗಳು ಮತ್ತು ನೂತನ ದೇಗುಲಗಳು ಕೂಡ ಇವೆ.
ಈ ಪ್ರದೇಶವು ಕೋಮು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಕಿರಿಟೇಶ್ವರಿ ದೇಗುಲದ ಸಮಿತಿಯಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಕೂಡ ಇದ್ದಾರೆ. ಜತೆಗೆ ದೇಗುಲದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಮುಸ್ಲಿಮರು ಭಾಗಿಯಾಗುತ್ತಾರೆ. 300 ವರ್ಷಗಳ ಹಳೆಯ ಈ ದೇಗುಲಕ್ಕೆ ಬೇಕಾದ ಜಮೀನನ್ನು ಕೂಡ ಕೆಲವು ಮುಸ್ಲಿಮರು ನೀಡಿದ್ದಾರೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ಪ್ರತಿ ವರ್ಷ ಮುಸ್ಲಿಮರು ಸೇರಿದಂತೆ ಸುಮಾರು 8,000 ಜನರು ದೇಗುಲಕ್ಕೆ ಭೇಟಿ ನೀಡುತ್ತಾರೆ.
“ನನ್ನ 20ನೇ ವಯಸ್ಸಿನಿಂದ ಪ್ರತಿ ನಿತ್ಯ ನಾನು ದೇಗುಲಕ್ಕೆ ಭೇಟಿ ನೀಡುತ್ತಿದ್ದೇನೆ. ನಮ್ಮ ತಾತ ಈ ದೇಗುಲಕ್ಕೆ ಸ್ವಲ್ಪ ಜಮೀನನ್ನು ದಾನ ಮಾಡಿದ್ದರು’ ಎಂದು ಕಿರಿಟೇಶ್ವರಿ ದೇಗುಲ ಸಮಿತಿಯ ಸದಸ್ಯ ಸಿರಾಜುಲ್ ಇಸ್ಲಾಂ(62) ಹೇಳಿದ್ದಾರೆ.