ಕಿರುತೆರೆ ನಟ ಕಿರಣ್ ರಾಜ್ ಶೀಘ್ರದಲ್ಲಿಯೇ “ರಾನಿ’ಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಕಿರಣ್ ರಾಜ್ ಅಭಿನಯದ “ರಾನಿ’ ಸಿನಿಮಾದ ಟೈಟಲ್, ಫಸ್ಟ್‌ಲುಕ್ ಮತ್ತು ಪೋಸ್ಟರ್ ಬಿಡುಗಡೆಯಾಗಿದ್ದು, ಮೊದಲ ಬಾರಿಗೆ ಔಟ್ ಅಂಡ್ ಔಟ್ ಮಾಸ್ ಲುಕ್‌ನಲ್ಲಿ ಕಿರಣ್ ರಾಜ್ ಪ್ರೇಕ್ಷಕರ ಮುಂದೆ ಬರುವ ಸುಳಿವು ಕೊಟ್ಟಿದ್ದಾರೆ.
ಇದೀಗ ನಾಯಕ ನಟ ಕಿರಣ್ ರಾಜ್ ಜನ್ಮದಿನದ ಪ್ರಯುಕ್ತ “ರಾನಿ’ ಚಿತ್ರತಂಡ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ. ಇದೇ ಜುಲೈ 5ರಂದು ನಟ ಕಿರಣ್ ರಾಜ್ ಹುಟ್ಟುಹಬ್ಬವಿದ್ದು, ಅಂದು “ರಾನಿ’ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ.
“ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಆ್ಯಕ್ಷನ್ ಶೈಲಿಯ ಸಿನಿಮಾ. ಗ್ಯಾಂಗ್‌ಸ್ಟರ್ ಹಿನ್ನೆಲೆಯ ಸಿನಿಮಾವದರೂ ಕುಟುಂಬ ಸಮೇತ ನೋಡುವಂತಹ ಭಾವನಾತ್ಮಕ ವಿಷಯಗಳಿವೆ. ಈ ಹಿಂದೆ ನಾಯಕ ಕಿರಣ್ ರಾಜ್ ದುಬೈಗೆ ಹೋಗಿ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ “ರಾನಿ’ ಸಿನಿಮಾದ ಟೈಟಲ್ ರಿಲೀಸ್ ಮಾಡಿದ್ದರು. ಅವರ ಈ ಸಾಹಸಕ್ಕೆ ಇಡೀ ಚಿತ್ರರಂಗವೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅದಾದ ನಂತರ ಬಿಡುಗಡೆಯಾದ ಪೋಸ್ಟರ್ ಕೂಡ ಸಿನಿಮಾದ ಮೇಲಿನ ಕುತೂಹಲ ಹೆಚ್ಚಿಸಿತ್ತು. ಈ ಬಾರಿ ಸಿನಿಮಾದ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಸಿನಿಮಾದ ನಿರ್ದೇಶಕ ಗುರುತೇಜ್ ಶೆಟ್ಟಿ.
ಇನ್ನು “ರಾನಿ’ ಸಿನಿಮಾದಲ್ಲಿ ನಾಯಕ ನಟ ಕಿರಣ್ ರಾಜ್ ಅವರೊಂದಿಗೆ ರವಿಶಂಕರ್, ಮೈಕೋ ನಾಗರಾಜ್, ಉಗ್ರಂ ರವಿ, ಉಗ್ರಂ ಮಂಜು, ಬಿ. ಸುರೇಶ, ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರು, ಗಿರೀಶ್ ಹೆಗ್ಡೆ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾದಲ್ಲಿ ಸಮೀಕ್ಷಾ, ಅಪೂರ್ವ, ರಾದ್ಯಾ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಾಘವೇಂದ್ರ ಬಿ. ಕೋಲಾರ್ ಛಾಯಾಗ್ರಹಣವೆ. ಚಿತ್ರದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಸಚಿನ್ ಬಸ್ರೂರ್ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ.
“ಸ್ಟಾರ್ ಕ್ರಿಯೇಷನ್’ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ಈ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷ ಡಿಸೆಂಬರ್‌ನಲ್ಲಿ “ರೋನಿ’ಯನ್ನು ಥಿಯೇಟರ್‌ಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.