‘ಕನ್ನಡತಿ’ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ಕಿರಣ್ ರಾಜ್ ಅಭಿನಯದ “ಬಡ್ಡೀಸ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ “ಬಡ್ಡೀಸ್’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಜೂನ್ 24 ರಂದು ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.
ಇತ್ತೀಚೆಗೆ “ಬಡ್ಡೀಸ್’ ಚಿತ್ರದ ಬಿಡುಗಡೆ ಕುರಿತು ಹಾಗೂ ಲಿರಿಕಲ್ ಸಾಂಗ್ ಬಿಡುಗಡೆ ಪ್ರಯುಕ್ತ ವಿಶೇಷ ಸಮಾರಂಭ ನಡೆಸಿದ ಚಿತ್ರತಂಡ, ಅಲ್ಲಿ “ಬಡ್ಡೀಸ್’ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿತು. ನಟ ಕಿರಣ್ ರಾಜ್ ಅವರ ತಂದೆ, ತಾಯಿ ಹಾಗೂ ಅಭಿಮಾನಿ ಸಮರ್ಥ್ “ಬಡ್ಡೀಸ್’ ಸಿನಿಮಾದ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದರು.
ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಗುರುತೇಜ್ ಶೆಟ್ಟಿ, “ಕಥೆ ಸಿದ್ದಮಾಡಿ ಕೊಂಡು, ನಿರ್ಮಾಪಕರ ಹುಡುಕಾಟದಲ್ಲಿದ್ದಾಗ, ಸ್ನೇಹಿತರ ಮೂಲಕ ದುಬೈ ನಿವಾಸಿ ಭಾರತಿ ಶೆಟ್ಟಿ ಅವರ ಪರಿಚಯ ವಾಯಿತು. ಕಥೆ ಮೆಚ್ಚಿದ ಅವರು ನಿರ್ಮಾಣಕ್ಕೆ ಮುಂದಾದರು. ಇದೊಂದು ಸ್ನೇಹದ ಮಹತ್ವ ಸಾರುವ ಚಿತ್ರ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಕಥಾಹಂದರ. “ಬಡ್ಡೀಸ್’ ಎಂದರೆ ಕಾಲೇಜಿನಲ್ಲಿ ಈಗಿನ ಹುಡುಗರು ಸ್ನೇಹಿತರನ್ನು ಕರೆಯುವ ಪದ. ಕಿರಣ್ ರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಎಲ್ಲಾ ತಂದೆ ಸಾಮಾನ್ಯವಾಗಿ ಮಗನಿಗೆ ಕಾರು, ಬೈಕು ಮುಂತಾದವುಗಳನ್ನು ನೀಡುತ್ತಾರೆ. ಆದರೆ ನಮ್ಮ ಸಿನಿಮಾದಲ್ಲಿ ಶ್ರೀಮಂತ ತಂದೆ, ಮಗನಿಗೆ ಸ್ನೇಹಿತರನ್ನೇ ಉಡುಗೊರೆ ನೀಡುತ್ತಾನೆ. ನಾಯಕ ಹಾಗೂ ಮೂವರು ಸ್ನೇಹಿತರ ಜೊತೆ ನಡೆಯುವ ಕಥಾಹಂದರವಿದು. ಪ್ರೇಮಕಥೆಯೊಂದಿಗೆ, ಸೆಂಟಿಮೆಂಟ್ ಸನ್ನಿವೇಶಗಳು ಸಿನಿಮಾದಲ್ಲಿ ನೋಡುಗರ ಮನಸ್ಸಿಗೆ ಹತ್ತಿರವಾಗಲಿದೆ’ ಎಂದು ಚಿತ್ರದ ಕಥಾಹಂದರ ವಿವರಿಸಿದರು.
ಇದನ್ನೂ ಓದಿ: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕಿ ಭಾರತಿ ಶೆಟ್ಟಿ, “ನಾನು ಮೂಲತಃ ಬೆಂಗಳೂರಿನವಳು. ಕಳೆದ ಕೆಲವು ವರ್ಷಗಳಿಂದ ದುಬೈನಲ್ಲಿದ್ದೀನಿ. ಜಾಹೀರಾತು ಸಂಸ್ಥೆ ನಡೆಸುತ್ತಿದ್ದೇನೆ. ಚಿಕ್ಕಂದಿನಿಂದಲೇ ಸಿನಿಮಾ ಮಾಡಬೇಕೆಂಬ ಹಂಬಲ. ಅಪ್ಪ, ಅಮ್ಮ ರಾಜಕುಮಾರ್ ಮುಂತಾದವರ ಚಿತ್ರಗಳನ್ನು ನೋಡಿಕೊಂಡು ಬಂದು ಕಥೆ ಹೇಳುತ್ತಿದ್ದರು. ಆಗಿನಿಂದಲೂ ನನಗೆ ಸಿನಿಮಾ ಆಸಕ್ತಿ. ಗುರುತೇಜ್ ಶೆಟ್ಟಿ ಗೆಳೆಯರೊಬ್ಬರ ಮೂಲಕ ಪರಿಚಯವಾಗಿ, ಕಥೆ ಕಳುಹಿಸಿದ್ದರು. ಕಥೆ ಹಿಡಿಸಿತು. ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಾಯದಿಂದ ಚಿತ್ರ ಉತ್ತಮವಾಗಿ ಬಂದಿದೆ’ ಎಂದರು.
“ಈ ಹಿಂದೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರೂ, ನನಗೆ ಸಾಕಷ್ಟು ಹೆಸರು ತಂದುಕೊಟ್ಟದ್ದು “ಕನ್ನಡತಿ’ ಧಾರಾವಾಹಿ ಪಾತ್ರ. ಆನಂತರ ಒಳ್ಳೆಯ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿದ್ದ ನನಗೆ ಗುರುತೇಜ್ ಶೆಟ್ಟಿ ಅವರು ಹೇಳಿದ್ದ ಕಥೆ ಹಿಡಿಸಿತು. ಹಿಂದೆ “ಮಾರ್ಚ್ 22′ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನಾಯಕನಾಗಿ ಇದು ಮೊದಲ ಚಿತ್ರ. ಸ್ನೇಹದ ಮಹತ್ವ ಸಾರುವ ಈ ಚಿತ್ರದಲ್ಲಿ ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಇದೆ’ ಎನ್ನುವುದು ನಾಯಕ ಕಿರಣ್ ರಾಜ್ ಮಾತು.
ನಾಯಕಿ ಸಿರಿ ಪ್ರಹ್ಲಾದ್, ನಟ ಗೋಪಾಲ್ ದೇಶಪಾಂಡೆ, ನೃತ್ಯ ನಿರ್ದೇಶ ಧನಂಜಯ್ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು “ಬಡ್ಡೀಸ್’ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. “ಬಡ್ಡೀಸ್’ ಚಿತ್ರದ ಹಾಡುಗಳಿಗೆ ಜ್ಯೂಡಿ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಯುಎಸ್‌ಎ ನಿವಾಸಿ ನಿಭಾ ಶೆಟ್ಟಿ ಛಾಯಾಗ್ರಹಣ ಮಾಡಿದ್ದಾರೆ.