Advertisement
ಇತ್ತೀಚೆಗೆ ಸುರಿದ ಭಾರೀ ಮಳೆಗೆ ರಸ್ತೆ ಕೆಸರುಗದ್ದೆಯಂತಾಗಿದ್ದು ಜನ ಸಂಚಾರ, ವಾಹನ ಓಡಾಟಕ್ಕೆ ತೊಂದರೆಯಾಗಿದೆ. ಕಿರಾಡಿಯಿಂದನಂಚಾರು ಶ್ರೀಲಕ್ಷ್ಮೀ ವೆಂಕಟರಮಣ ದೇವಾಲಯ ಹಾಗೂ ಕಾಮಧೇನು ಗೋಶಾಲೆಯನ್ನು ಸಂಪರ್ಕಿಸುವ ಈ ರಸ್ತೆ ಎರಡೂ ಗ್ರಾಮಗಳ ಸಂಪರ್ಕ ಕೊಂಡಿ ಹಾಗೂ ಎರಡು ಊರಿನ ಹತ್ತಿರದ ಮಾರ್ಗ ಕೂಡ ಹೌದು. ಪ್ರತಿ ನಿತ್ಯ 50ಕ್ಕೂ ಹೆಚ್ಚು ಮನೆಗಳ ನೂರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ದೈನಂದಿನ ಕೆಲಸಗಳಿಗೆ, ಅಗತ್ಯ ವಸ್ತುಗಳ ಖರೀದಿಗೆ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.
ಐದಾರು ಕಿ.ಮೀ. ವಿಸ್ತೀರ್ಣದ ಈ ರಸ್ತೆಯಲ್ಲಿ ಸುಮಾರು 3 ಕಿ.ಮೀ.ನಷ್ಟು ಜಾಗ ಕಾಂಕ್ರೀಟೀಕರಣಕ್ಕೆ ಬಾಕಿ ಇದೆ ಹಾಗೂ ಕೆಲವು ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಣ್ಣಿನ ರಸ್ತೆ ಇರುವ ಕಡೆಗಳಲ್ಲಿ ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಿದೆ ನೀರು ರಸ್ತೆಯ ಮೇಲೆ ಹರಿದು ರಸ್ತೆ ಕೊಚ್ಚಿ ಹೋಗುತ್ತಿದೆ. ಆಡಳಿತ ವ್ಯವಸ್ಥೆ ಆದಷ್ಟು ಬೇಗ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು ನಮ್ಮ ಸಮಸ್ಯೆಯನ್ನು ದೂರ ಮಾಡಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಬೇಡಿಕೆಯಾಗಿದೆ. ಹೆಚ್ಚಿನ ಅನುದಾನ ಅಗತ್ಯ
ಸಮಸ್ಯೆಯ ಬಗ್ಗೆ ಸ್ಥಳೀಯರು ಮನವಿ ಮಾಡಿದ್ದಾರೆ. ಆದರೆ ರಸ್ತೆಯ ಸಮಗ್ರ ದುರಸ್ತಿಗೆ 50ಲಕ್ಷ ರೂ ಅನುದಾನಬೇಕಾಗಬಹುದು. ಹೀಗಾಗಿ ಗ್ರಾ.ಪಂ.ನಿಂದ ಕಾಮಗಾರಿ ಅಸಾಧ್ಯ. ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಇಲಾಖೆಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅತೀ ಹೆಚ್ಚು ಸಮಸ್ಯೆ ಇರುವ ಕಿರಾಡಿ ಭಾಗದಲ್ಲಿ 300ಮೀಟರ್‌ನಷ್ಟು ಸ್ಥಳವನ್ನು 2-3ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸುವುದಾದರೆ ಉದ್ಯೋಗ ಖಾತ್ರಿ ಯೋಜನೆಯಡಿ ಸಹಕಾರ ನೀಡುವುದಾಗಿ ತಿಳಿಸಲಾಗಿದೆ.
Related Articles
Advertisement
ಶೀಘ್ರ ಸಮಸ್ಯೆ ಬಗೆಹರಿಸಿನಮ್ಮೂರಿನ ರಸ್ತೆ ಸಮಸ್ಯೆಯಿಂದ ಮಕ್ಕಳಿಂದ ಹಿಡಿದು ಹಿರಿಯರ ತನಕ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸುವಂತೆ ಆಡಳಿತ ವ್ಯವಸ್ಥೆಯನ್ನು ವಿನಂತಿಸುತ್ತೇವೆ – ಅನಂತಪದ್ಮನಾಭ ಭಟ್, ಕಿರಾಡಿ, ಸ್ಥಳೀಯರು ಬಾಡಿಗೆ ಜತೆ ಗ್ಯಾರೇಜ್ ಚಾರ್ಜ್ ಕೊಡ್ತೀರಾ!
ಈ ಭಾಗದ ಜನರು ನಿತ್ಯ ಸಂಚಾರಕ್ಕೆ ಬಹುತೇಕ ಆಟೋ ರಿಕ್ಷಾ ಅವಲಂಬಿಸಿದ್ದಾರೆ. ರಸ್ತೆಯ ಇಂದಿನ ಪರಿಸ್ಥಿತಿಯಲ್ಲಿ ರಿಕ್ಷಾ ಬಂದರೆ ಮಣ್ಣಿನಲ್ಲಿ ಹೂತು ಮೇಲೇಳುವುದಕ್ಕೆ ಕಷ್ಟ ಹಾಗೂ ಒಮ್ಮೆ ಈ ಮಾರ್ಗವಾಗಿ ಬಂದರೆ ಗ್ಯಾರೇಜ್ ದಾರಿ ಹಿಡಿಯಲೇಬೇಕು ಎನ್ನುವ ದುಃಸ್ಥಿತಿ ಇದೆ. ಹೀಗಾಗಿ ಆಟೋದವರ ಬಳಿ ನಮ್ಮೂರಿಗೆ ಬರ್ತೀರಾ ಅಂತ ಕೇಳಿದ್ರೆ ಬಾಡಿಗೆ ಜತೆ ಗ್ಯಾರೇಜ್ ಚಾರ್ಜ್ ಸೇರಿಸಿ ಕೊಡ್ತೀರಾ ಎಂದು ಕೇಳುತ್ತಾರೆ ಎಂದು ಇಲ್ಲಿನ ನಿವಾಸಿಯೊಬ್ಬರು ಅಳಲು ತೋಡಿಕೊಂಡರು. – ರಾಜೇಶ್ ಗಾಣಿಗ ಅಚ್ಲಾಡಿ