Advertisement

Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್‌

03:05 PM Jan 08, 2025 | Team Udayavani |

ಕಿನ್ನಿಗೋಳಿ: ಈಗಷ್ಟೇ ಜನವರಿ ತಿಂಗಳು ಆರಂಭವಾಗಿದೆ. ಆದರೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದ ಕಾಪಿಕಾಡು, ಉಲ್ಲಂಜೆ, ಪದ್ಮನೂರು ಹಾಗೂ ತಾಳಿಪಾಡಿ ಗುತ್ತು, ಬಲ್ಲಣ ಪ್ರದೇಶದಲ್ಲಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಈ ಭಾಗದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು ಕಳೆದ ಕೆಲವು ನಾಲ್ಕು ದಿನಕ್ಕೆ ಒಂದು ಸಲ ನಳ್ಳಿಯಲ್ಲಿ ನೀರು ಬರುತ್ತದೆ ಎಂದು ಗ್ರಾಮಸ್ಥರು ಆಳಲು ತೋಡಿಕೊಂಡಿದ್ದಾರೆ.

Advertisement

ಮೊದಲು ಈ ಪರಿಸರದಲ್ಲಿ ಸಾಕಷ್ಟು ನೀರು ಇತ್ತಾದರೂ ಈಗ ಹೆಚ್ಚಿನವರು ನಳ್ಳಿನೀರನ್ನೇ ಅವಲಂಬಿಸಿದ್ದಾರೆ. ಆದರೆ, ಈಗ ಸರಿಯಾಗಿ ನೀರು ಬಾರದೆ ಇರುವುದು ಅವರ ದಿನ ನಿತ್ಯದ ಚಟುವಟಿಕೆಗಳನ್ನು ಏರುಪೇರು ಮಾಡಿದೆ.

ಇಲ್ಲಿನ ನೀರಿನ ಸಮಸ್ಯೆ ಎಷ್ಟು ತೀವ್ರವಾಗಿದೆ ಎಂದರೆ ಪಟ್ಟಣ ಪಂಚಾಯತ್‌ ವತಿಯಿಂದ ಕಳೆದ ಒಂದೇ ವಾರದ ಅವಧಿಯಲ್ಲಿ ಕಿನ್ನಿಗೋಳಿ ಗುತ್ತಕಾಡು ರಸ್ತೆಯಲ್ಲಿ, ಪದ್ಮನೂರು ಬಳಿ, ಬಲ್ಲಣ, ಕಟೀಲು ಅಜಾರು ಬಳಿ ಹೀಗೆ ನಾಲ್ಕು ಕಡೆ ಕೊಳವೆ ಬಾವಿ ತೋಡಲಾಗಿದೆ. ಇದರಿಂದ ನೀರು ಸರಬರಾಜು ಮಾಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪಟ್ಟಣ ಪಂಚಾಯತ್‌ ಮುಂದಾಗಿದೆ.

ಬಹುಗ್ರಾಮ ನೀರು ಬರುತ್ತಿಲ್ಲ
ಮೆನ್ನಬೆಟ್ಟು ವ್ಯಾಪ್ತಿಯಲ್ಲಿ ಶ್ರೀರಾಮ ಮಂದಿರ, ಕನ್ಸೆಟ್ಟಾ ಆಸ್ಪತ್ರೆ, ಜಲ್ಲಿಗುಡ್ಡೆ ಸೇರಿದಂತೆ ಮೂರು ಕಡೆ ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ಕಳೆದ ವರ್ಷ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಬರುತ್ತಿತ್ತು. ಇದರಿಂದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರವಾಗಿತ್ತು. ಆದರೆ ಈ ವರ್ಷ ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಸರಿಯಾಗಿ ಸರಬರಾಜು ನಡೆದಿಲ್ಲ ಎನ್ನಲಾಗಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಂದಿನಿ ನದಿಯು ಸ್ವಲ್ಪ ಭಾಗ ಹರಿಯುತ್ತಿದ್ದು, ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲು ಯೋಜನೆ ಸಿದ್ಧಪಡಿಸಿಕೊಳ್ಳಬೇಕಾಗಿದೆ ಎನ್ನುವುದು ಜನಾಭಿಪ್ರಾಯ.

ಕುಡಿಯುವ ನೀರಿನ ಘಟಕ ಗ್ರಹಣ ಬಾಧೆ ಕೇಳುವವರೆ ಇಲ್ಲ , ಇಲಾಖೆಯಿಂದಲೇ ನಿರ್ಲಕ್ಷ …?
ಮೂಲ್ಕಿ ತಾಲೂಕು ಪಂಚಾಯತ್‌ನ ಮುಂಭಾಗದಲ್ಲಿ , ಕಟೀಲು ಗಿಡಗೆರೆ , ಗುತ್ತಕಾಡು ಶಾಲಾ ಮೈದಾನ ಬಳಿ ಜಿಲ್ಲಾ ಪಂಚಾಯತ್‌ ನಿಂದ ಕೆಲವು ವರ್ಷದ ಹಿಂದೆ ಕುಡಿಯುವ ನೀರಿನ ಘಟಕ ಆರಂಭವಾಗಿದೆ. ಆದರೆ, ಒಂದು ದಿನವೂ ಸರಿಯಾಗಿ ನೀರು ಬಂದಿಲ್ಲ. ಸರಕಾರ ಯೋಜನೆಯನ್ನು ತಂದು ಹಣವನ್ನು ಪೋಲು ಮಾಡಲಾಗುತ್ತಿದೆ, ಇನ್ನಾದರೂ ಈಯೋಜನೆಗೆ ಮರು ಜೀವ ಕೊಡಬಹುದಲ್ಲವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ

Advertisement

ಕಿನ್ನಿಗೋಳಿ ನೀರಿನ ಸ್ಥಿತಿಗತಿ
ಜನಸಂಖ್ಯೆ – 23358
ಮನೆಗಳು- 6987
ನಳ್ಳಿ ನೀರಿನ ಸಂಪರ್ಕ – 2758
ನೀರಿನ ಮೂಲ: ಕೊಳವೆ ಬಾವಿ, ತೆರೆದ ಬಾವಿ ಹಾಗೂ 32 ಓವರ್‌ಹೆಡ್‌ ಟ್ಯಾಂಕ್‌ ಮೂಲಕ. ಗುತ್ತಕಾಡುವಿನಲ್ಲಿ ವಿಶ್ವಬ್ಯಾಂಕ್‌ ಕುಡಿಯುವ ನೀರಿನ ಸಮಿತಿ ಮೂಲಕ ನಿರ್ವಹಣೆ ನಡೆಯುತ್ತಿದೆ.

ಮೊದಲೇ ಉತ್ತಮವಾಗಿತ್ತು
ಕಿನ್ನಿಗೋಳಿಯ ನಮ್ಮ ಭಾಗಕ್ಕೆ ಬಹು ಗ್ರಾಮ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಅದು ನಮಗೆ ತಲುಪಿಲ್ಲ. ಗ್ರಾಮ ಪಂಚಾಯತ್‌ ಇದ್ದಾಗ ಈ ರೀತಿಯ ಸಮಸ್ಯೆ ಇರಲಿಲ್ಲ. ಈಗ ಪಟ್ಟಣ ಪಂಚಾಯತ್‌ನಲ್ಲಿ ಚುನಾಯಿತ ಆಡಳಿತವಿಲ್ಲ. ಹೀಗಾಗಿ ನಮ್ಮ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ ಎಂದು ಉಲ್ಲಂಜೆ ನಿವಾಸಿ ಕಿಶೋರ್‌ ಭಂಡಾರಿ ಹೇಳಿದ್ದಾರೆ.

ಜಲಜೀವನ್‌ ಮಿಷನ್‌ ನೀರೂ ಇಲ್ಲ!
ಕೇಂದ್ರ ಸರಕಾರದ ಜಲಜೀವನ್‌ ಮಿಷನ್‌ ಕುಡಿಯುವ ನೀರಿನ ಯೋಜನೆಯಡಿ ನಮಗೂ ನೀರು ಕೊಡಿ ಎಂಬ ಬೇಡಿಕೆಗೆ ಇನ್ನೂ ಸ್ಪಂದನೆ ಇಲ್ಲ. ಮೆನ್ನಬೆಟ್ಟು ಗ್ರಾಮದ ಉಲ್ಲಂಜೆ ಪರಿಸರದಲ್ಲಿ ತುಂಬಾ ಮನೆಗಳು ಇರುವುದರಿಂದ ಹೊಸ ಟ್ಯಾಂಕ್‌ ನಿರ್ಮಿಸಿ ಎಂದು ಮನವಿ ಕೊಟ್ಟಿದ್ದೇವೆ. ಇನ್ನೂ ನೀರು ಪೂರೈಕೆ ವ್ಯವಸ್ಥೆ ಆಗಿಲ್ಲ.
-ಗಿರೀಶ್‌ ಮಡಿವಾಳ ,ಉಲ್ಲಂಜೆ

-ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next