Advertisement

ಕಿನ್ನಿಗೋಳಿ: ಮೂಲ ಸೌಕರ್ಯವಿಲ್ಲದ ವಾರದ ಸಂತೆ ಮಾರುಕಟ್ಟೆ

01:05 PM Jan 04, 2024 | Team Udayavani |

ಕಿನ್ನಿಗೋಳಿ: ಇಲ್ಲಿನ ವಾರದ ಸಂತೆ ವ್ಯಾಪಾರ ಇಂದು ಕ್ಷೀಣಿಸುತ್ತಿದೆ. ಈಗ ಸಂತೆ ವ್ಯಾಪಾರ ನಡೆ ಯುವ ಪ್ರದೇಶದಲ್ಲಿ ಕುಡಿಯುವ ನೀರು, ಶೌಚಾಲಯ ಇತ್ಯಾದಿ ಮೂಲ ಸೌಕರ್ಯ ಗಳಿಲ್ಲದೆ ವ್ಯಾಪಾರಿಗಳು, ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.

Advertisement

ಕಿನ್ನಿಗೋಳಿ ವಾರದ ಸಂತೆ ಎಂದರೆ ಹಿಂದೆ ಹತ್ತು ಊರುಗಳಲ್ಲಿ ಪ್ರಸಿದ್ಧಿ ಪಡೆದಿತ್ತು. ಯಾಕೆಂದರೆ ಅಂದಿನ ಕಾಲದಲ್ಲಿ ಬೇರೆಲ್ಲೂ ಸಿಗದ ಒಣ ಮೀನು, ಹುರಿ ಹಗ್ಗ, ಕಷಾಯಕ್ಕೆ ಮನೆ ಮದ್ದು, ಕೋಳಿಗೆ ಮದ್ದು ಇತ್ಯಾದಿಗಳೆಲ್ಲವೂ ಕಿನ್ನಿಗೋಳಿ ಸಂತೆಯಲ್ಲಿ ಸಿಗುತ್ತಿತ್ತು. ಈಗ ಒಣಮೀನು ಇಲ್ಲ, ಹುರಿಹಗ್ಗವೂ ಇಲ್ಲ. 25 ವರ್ಷಗಳ ಹಿಂದೆ ಇದ್ದ ಕಿನ್ನಿಗೋಳಿ ಸಂತೆಯ ವರ್ಚಸ್ಸು ಇಂದು ಅದು ಕಳಕೊಂಡಿದೆ ಎನ್ನುತ್ತಾರೆ ಹಿರಿಯರಾದ ಶೀನದಾಸರು.

ಈಡೇರದ ಭರವಸೆ
ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕಿನ್ನಿಗೋಳಿ ಸಂತೆಯು ಕಿನ್ನಿಗೋಳಿ ದಿನವಹಿ ಮಾರುಕಟ್ಟೆಯಲ್ಲಿ ಹೊರಗಡೆ ನಡೆಯುತ್ತಿತ್ತು. ಕಮೇಣ ಮಾರುಕಟ್ಟೆಯ ಒಳಗಡೆ ಪಂಚಾಯತ್‌ ಅಭಿವೃದ್ಧಿಯ ದೃಷ್ಟಿಯಿಂದ ಅಂಗಡಿ ಕೋಣೆಗಳನ್ನು ಮಾಡಲಾಯಿತು. ಹಾಗಾಗಿ ಆ ಜಾಗದಲ್ಲಿ ಖಾಯಂ ಅಂಗಡಿಗಳು ಆರಂಭಗೊಂಡವು.

ಇದರಿಂದ ವಾರದ ಸಂತೆಗೆ ಸ್ಥಳಾವಕಾಶ ಕಡಿಮೆ ಆಯಿತು. ಸಂತೆಯು ಮುಖ್ಯ ರಸ್ತೆಯ ಬದಿಗೆ ಬರುವಂತಾಯಿತು. ಪರಿಣಾಮ ಟ್ರಾಫಿಕ್‌ ಜಾಮ್‌ ಮುಂತಾದ ಸಮಸ್ಯೆಗಳನ್ನು ಉದ್ಭವಿಸಿತು. ಇದನ್ನು ಮನಗಂಡ ಹೊಸತಾಗಿ ಅಸ್ತಿತ್ವಕ್ಕೆ ಬಂದ ಪಟ್ಟಣ ಪಂಚಾಯತ್‌ ಆಡಳಿತವು ವಾರದ ಸಂತೆಯನ್ನು ಕಿನ್ನಿಗೋಳಿ ಲಿಟ್ಲ ಫ್ಲವರ್‌ ಶಾಲೆಯ ಮುಂದುಗಡೆಯ ಜಾಗಕ್ಕೆ ಸ್ಥಳಾಂತರ
ಮಾಡಿತು.

ಆಗ ಅಲ್ಲಿ ಎಲ್ಲ ರೀತಿಯ ಮೂಲಸೌಲಭ್ಯಗಳ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸಂಬಂಧಪಟ್ಟವರು ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ. ಸಂತೆ ವ್ಯಾಪಾರಸ್ಥರು ಶೌಚಾಲಯಕ್ಕೆ ದೂರದ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಕಟ್ಟಡಕ್ಕೆ ತೆರಳಬೇಕಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಹಾಗೂ ಮಳೆಗಾದಲ್ಲಿ ಸಂತೆ
ಮೈದಾನದಲ್ಲಿ ನೀರು ನಿಲ್ಲುತ್ತದೆ.

Advertisement

ಅಗತ್ಯ ಕ್ರಮ
ವಾರದ ಸಂತೆ ಮಾರುಕಟ್ಟೆಯ ವ್ಯಾಪರಸ್ಥರಿಗೆ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಕಟೀಲು ಮಲ್ಲಿಗೆಯಂಗಡಿಯಲ್ಲಿ ವಾರದ ಒಂದು ದಿನ ಸಂತೆ ಮಾಡುವ ಯೋಚನೆಯು ಇದೆ ಇದರ ಬಗ್ಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ.
*ನಾಗರಾಜ ಎಂ.ಎಲ್‌.,
ಮುಖ್ಯಾಧಿಕಾರಿ ಕಿನ್ನಿಗೋಳಿ ಪ.ಪಂ.

ಕರ ವಸೂಲಿ ಮಾಡಿದರೂ ಸೌಲಭ್ಯವಿಲ್ಲ
ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಹಾಗೂ ಸಬಂಧಪಟ್ಟ ಇಲಾಖೆಗೆ ಇಲ್ಲಿನ ವಾರದ ಸಂತೆಯಲ್ಲಿ ಮೂಲ ಸೌಕರ್ಯ ಇಲ್ಲದೆ
ಪರದಾಡುವಂತಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಮಹಿಳಾ ವ್ಯಾಪಾರಸ್ಥರಿಗೆ ಇನ್ನೂ ಕಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂತೆಯಲ್ಲಿ ಕರ ವಸೂಲಿ ಮಾಡಲಾಗುತ್ತಿದೆ ಅದರೇ ಸೌಕರ್ಯ ಕೊಡುತ್ತಿಲ್ಲ.
ಶ್ರೀಧರ ಶೆಟ್ಟಿ, ಕೃಷಿಕರು, ಕಿನ್ನಿಗೋಳಿ

*ರಘುನಾಥ್‌ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next