ಶಾರ್ಜಾ: ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಮತ್ತು ಗೆಲುವಿನ ಹಳಿ ಏರುವಲ್ಲಿ ಯಶಸ್ವಿಯಾದ ಕಿಂಗ್ಸ್ ಇಲೆವೆನ್ ತಂಡಗಳು ರವಿವಾರ ಶಾರ್ಜಾದಲ್ಲಿ ಸೆಣಸಾಟ ನಡೆಸಲಿವೆ. ಹಿಂದಿನ ಪಂದ್ಯಗಳಲ್ಲಿ ಎರಡೂ ತಂಡಗಳು ತೋರ್ಪಡಿಸಿದ ಸ್ಫೋಟಕ ಬ್ಯಾಟಿಂಗ್ ಪರಾಕ್ರಮದಿಂದ ಈ ಮುಖಾಮುಖೀ ತೀವ್ರ ಕುತೂಹಲ ಕೆರಳಿಸಿದೆ.
ಚೆನ್ನೈ ವಿರುದ್ಧ 216 ರನ್ ಪೇರಿಸಿ ಮೆರೆದಾಡಿದ್ದ ರಾಜಸ್ಥಾನ್ ಪಾಲಿಗೆ ರವಿವಾರ ಶುಭ ಸಮಾಚಾರವೊಂದು ಕಾದಿದೆ. ಇಂಗ್ಲೆಂಡಿನ ಬಿಗ್ ಹಿಟ್ಟರ್ ಜಾಸ್ ಬಟ್ಲರ್ ಅವರ ಕ್ವಾರಂಟೈನ್ ಅವಧಿ ಮುಗಿದಿದ್ದು, ಪಂಜಾಬ್ ಎದುರಿನ ಪಂದ್ಯಕ್ಕೆ ಲಭ್ಯರಾಗುತ್ತಾರೆ. ಅವರು ಯಶಸ್ವಿ ಜೈಸ್ವಾಲ್ ಜತೆ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಆಗ, ಸ್ಟೀವನ್ ಸ್ಮಿತ್ ಮಧ್ಯಮ ಕ್ರಮಾಂಕಕ್ಕೆ ವಾಪಸಾಗಲಿದ್ದಾರೆ.
ಜಾಸ್ ಬಟ್ಲರ್ ಅವರಿಗಾಗಿ ಡೇವಿಡ್ ಮಿಲ್ಲರ್ ಜಾಗ ಖಾಲಿ ಮಾಡುವ ಸಾಧ್ಯತೆ ಇದೆ. ಕೀಪಿಂಗ್ ಜವಾಬ್ದಾರಿ ಬಟ್ಲರ್ ಹೆಗಲೇರಿದರೆ, ಸಂಜು ಸ್ಯಾಮ್ಸನ್ ಇನ್ನಷ್ಟು ಬಿಂದಾಸ್ ಆಗಿ ಬ್ಯಾಟ್ ಬೀಸಬಹುದು.
ಹರಿತಗೊಳ್ಳಬೇಕಿದೆ ರಾಜಸ್ಥಾನ್ ಬೌಲಿಂಗ್
ಚೆನ್ನೈ ವಿರುದ್ಧ ಸಿಡಿದು ನಿಂತ ಸಂಜು ಸ್ಯಾಮ್ಸನ್ ಕೇವಲ 32 ಎಸೆತಗಳಿಂದ 74 ರನ್ ಸಿಡಿಸಿ ಈಗಾಗಲೇ ಅಪಾಯದ ಮುನ್ಸೂಚನೆ ನೀಡಿದ್ದಾರೆ. ಸ್ಪಿನ್ ಎಸೆತಗಳನ್ನು ಕಣ್ಣುಮುಚ್ಚಿ ಬಾರಿಸಿದ ಸ್ಯಾಮ್ಸನ್ ಬರೋಬ್ಬರಿ 9 ಸಿಕ್ಸರ್ ಸಿಡಿಸಿದ್ದರು. ಪಂಜಾಬ್ ವಿರುದ್ಧವೂ ಅವರು ಇದೇ ಆಟವನ್ನು ಪುನರಾವರ್ತಿಸಿದರೆ ರಾಜಸ್ಥಾನಕ್ಕೆ ಲಾಭ ಖಚಿತ. ಸ್ಮಿತ್ ಕೂಡ 69 ರನ್ ಬಾರಿಸಿ ಕಪ್ತಾನನ ಜವಾಬ್ದಾರಿಯನ್ನು ಚೊಕ್ಕವಾಗಿ ನಿಭಾಯಿಸಿದ್ದರು. ಕೊನೆಯಲ್ಲಿ ಜೋಫ್ರಾ ಆರ್ಚರ್ 8 ಎಸೆತಗಳಿಂದ 4 ಸಿಕ್ಸರ್ ಸಿಡಿಸಿದ್ದನ್ನು ಮರೆಯಲಾಗದು.
ಆದರೆ ರಾಜಸ್ಥಾನ್ ಬೌಲಿಂಗ್ ಇನ್ನಷ್ಟು ಹರಿತಗೊಳ್ಳಬೇಕಿದೆ. ಪಂಜಾಬ್ ಬ್ಯಾಟಿಂಗ್ ಸರದಿ ಚೆನ್ನೈಗಿಂತ ಬಲಿಷ್ಠವಾಗಿರುವುದೇ ಇದಕ್ಕೆ ಕಾರಣ.
ಚಳಿ ಹಿಡಿಸಿದ ರಾಹುಲ್
ಆರ್‌ಸಿಬಿ ಎದುರಿನ ಮುಖಾಮುಖೀಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕೆ.ಎಲ್.ರಾಹುಲ್ ಈಗ ಪಂಜಾಬ್ ತಂಡದ ದೈತ್ಯ ಶಕ್ತಿಯಾಗಿ ಬೆಳೆದಿದ್ದು, ಎದುರಾಳಿಗಳಿಗೆಲ್ಲ ಚಳಿ ಹಿಡಿಸಿದ್ದಾರೆ. ಜತೆಗೆ ಮತ್ತೋರ್ವ ಬಿಗ್ ಹಿಟ್ಟರ್ ಕ್ರಿಸ್ ಗೇಲ್ ಕೂಡ ರೇಸ್‌ನಲ್ಲಿದ್ದಾರೆ. ಮೂರನೇ ಪಂದ್ಯದಲ್ಲಾದರೂ “ಯುನಿವರ್ಸ್ ಬಾಸ್’ ಆಡಬಹುದೇ ಎಂಬ ನಿರೀಕ್ಷೆ ಎಲ್ಲರದು. ಅವರು ನಿಕೋಲಸ್ ಪೂರಣ್ ಜಾಗಕ್ಕೆ ಬರಬಹುದು. ಪೂರಣ್ ಕೂಡ ಈವರೆಗೆ ಪರಿಪೂರ್ಣ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಆಲ್‌ರೌಂಡರ್ ಜಿಮ್ಮಿ ನೀಶಮ್ ತಂಡದ ಮತ್ತೋರ್ವ ಅಪಾಯಕಾರಿ ಆಟಗಾರ. ಜತೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿದು ನಿಲ್ಲುವುದನ್ನೂ ತಂಡ ನಿರೀಕ್ಷಿಸುತ್ತಿದೆ.
ಆರ್‌ಸಿಬಿಯನ್ನು ದಿಕ್ಕಾಪಾಲು ಮಾಡಿದ ಶಮಿ, ಕಾಟ್ರೆಲ್, ಬಿಶ್ನೋಯ್, ಮುರುಗನ್ ಅಶ್ವಿನ್, ಟೆವಾಟಿಯಾ ಅವರನ್ನೊಳಗೊಂಡ ಬೌಲಿಂಗ್ ಪಡೆ ರಾಜಸ್ಥಾನ ವಿರುದ್ಧವೂ ಮೇಲುಗೈ ಸಾಧಿಸೀತೇ ಎಂಬುದು ಮತ್ತೂಂದು ಕೌತುಕ.