Advertisement
ಈಗಾಗಲೇ ಇಂತಹ ಎಷ್ಟೋ ಕಥೆಗಳು ಬಂದು ಹೋಗಿವೆ. ಹೆಸರಿಗಷ್ಟೇ ಅವರು “ರಾಜರು’. ಆದರೆ, ಅವರು ಮಾಡೋದೆಲ್ಲಾ ಬೇಜಾರು! ನಿರ್ದೇಶಕರು ನಾಲ್ವರು ಪಕ್ಕಾ ಲೋಕಲ್ ಹುಡುಗರನ್ನಿಟ್ಟುಕೊಂಡು ಒಂದು, ಅಲ್ಲಲ್ಲ ನಾಲ್ಕು ಪ್ರೇಮಕಥೆ ಹೆಣೆದಿದ್ದಾರೆ. ಇಲ್ಲಿರೋದು ಒಬ್ಬಳೇ ನಾಯಕಿ. ಅವಳನ್ನು ಪ್ರೀತಿಸೋ ಹುಡುಗರು ಮಾತ್ರ ನಾಲ್ವರು. ಕೊನೆಗೆ ಯಾರ ಕೈ ಹಿಡಿಯುತ್ತಾಳೆ ಅನ್ನೋದೇ ಒನ್‌ಲೈನ್.
Related Articles
Advertisement
ಇಲ್ಲಿ ಕಥೆಗೆ ಇನ್ನಷ್ಟು ಮಹತ್ವ ಕೊಡಬಹುದಿತ್ತು. ಈಗಿನ ಕಾಲಕ್ಕೆ ಕಥೆ ಹೊಂದದಿದ್ದರೂ, ಈಗಿನ ಟ್ರೆಂಡ್‌ಗೆ ತಕ್ಕಂತೆ ಮೇಕಿಂಗ್ ಮಿಸ್ ಆಗಿಲ್ಲ ಎಂಬುದೇ ಸಮಾಧಾನ. ಅಷ್ಟಕ್ಕೂ ಆ ಕ್ರೆಡಿಟ್ ಛಾಯಾಗ್ರಾಹಕರಿಗೆ ಸಲ್ಲಬೇಕು. ಆ ರಾಜರ ಸಣ್ಣಪುಟ್ಟ ಎಡವಟ್ಟುಗಳನ್ನೆಲ್ಲಾ ಕ್ಯಾಮೆರಾ ಮರೆ ಮಾಚಿಸುತ್ತದೆ. ಆ ಹುಡುಗಿ ಹಿಂದಿಂದೆ ಸುತ್ತುವ ಆ ನಾಲ್ವರು ಹುಡುಗರ ಲವ್ ಎಪಿಸೋಡ್‌ಗೆ ಒಂದಷ್ಟು ಚೌಕಟ್ಟು ಹಾಕಿಕೊಳ್ಳಬೇಕಿತ್ತು.
ಅತಿಯಾದ ಪ್ರೀತಿ ಸುತ್ತಾಟ ಕೊಂಚ ಕಿರಿಕಿರಿ ಉಂಟು ಮಾಡುತ್ತೆ. ದ್ವಿತಿಯಾರ್ಧದ ವೇಗ ಮೊದಲರ್ಧ ಇದ್ದಿದ್ದರೆ, ಬಹುಶಃ “ರಾಜರು’ ಇಷ್ಟವಾಗುತ್ತಿದ್ದರೇನೋ? ಆದರೆ, ನಿರ್ದೇಶಕರು ಆ ಸಾಹಸಕ್ಕೆ ಪ್ರಯತ್ನಿಸಿಲ್ಲ. ನಿರಂಜನ್ ಶೆಟ್ಟಿ ನಟನೆಯಲ್ಲಿನ್ನೂ ಬದಲಾಗಬೇಕಿದೆ. ಡೈಲಾಗ್ ಡಿಲವರಿಯಲ್ಲೂ ಸುಧಾರಣೆ ಬೇಕು. ಆದರೆ ಫೈಟು, ಡ್ಯಾನ್ಸ್ ಬಗ್ಗೆ ಮಾತಾಡುವಂತಿಲ್ಲ.
ಉಳಿದಂತೆ ಮಂಜ ಪಾತ್ರಧಾರಿಯ ನಟನೆಯಲ್ಲಿ ಲವಲವಿಕೆ ಇದೆ. ಇನ್ನು ಶಾಲಿನಿ ತನ್ನ ಅಂದದಷ್ಟೇ ನಟನೆಯಲ್ಲೂ ಇಷ್ಟವಾಗುತ್ತಾರೆ. ತೆರೆ ಮೇಲೆ ಬರುವ ಜಗ್ಗ, ಕಿರಣ, ಸುಧಾಕರ್ ಪಾತ್ರಗಳು ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿವೆ. ಶ್ರೀಧರ್ ವಿ.ಸಂಭ್ರಮ್ ಸಂಗೀತದಲ್ಲಿ ಎರಡು ಹಾಡು ಚೆನ್ನಾಗಿವೆ. ಹಿನ್ನೆಲೆ ಸಂಗೀತವೂ ಪೂರಕವಾಗಿದೆ. ಸಿನಿಟೆಕ್ ಸೂರಿ ಕ್ಯಾಮೆರಾದಲ್ಲಿ ರಾಜರ “ಹೈಟೆಕ್’ ಸವಾರಿ ಕಾಣಬಹುದು.
ಚಿತ್ರ: ರಾಜರುನಿರ್ಮಾಣ: ಮೂರ್ತಿ, ಶಿವಕುಮಾರ್, ರಮೇಶ್, ಚಂದ್ರಶೇಖರ್
ನಿರ್ದೇಶನ: ಗಿರೀಶ್
ತಾರಾಗಣ: ನಿರಂಜನ್ ಶೆಟ್ಟಿ, ಶಾಲಿನಿ, ಪೃಥ್ವಿ ಅಂಬರ್, ಜಗದೀಶ್, ಶರಣ್‌ರಾಜ್, ಹೊನ್ನವಳ್ಳಿ ಕೃಷ್ಣ, ರಾಕ್‌ಲೈನ್ ಸುಧಾಕರ್ ಮುಂತಾದವರು * ವಿಜಯ್ ಭರಮಸಾಗರ