Advertisement

ದಿ ಕಿಂಗ್ ಇಸ್ ಬ್ಯಾಕ್..; ಮತ್ತೆ ಪ್ರಜ್ವಲಿಸುತ್ತಿದ್ದಾನೆ ಕ್ರಿಕೆಟ್ ಲೋಕದ ಸೂರ್ಯ

01:51 PM Oct 22, 2022 | Team Udayavani |

ಆತ ತಂದೆ ಸತ್ತ ದಿನವೇ ಬ್ಯಾಟ್ ಹಿಡಿದು ಬಂದ ಅಪ್ರತಿಮ ಹೋರಾಟಗಾರ. ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುವ ಹಠವನ್ನು ಹೊಂದಿದವ. ಅದ್ಯಾಕೋ ಗೊತ್ತಿಲ್ಲ ಆತನ ಕೆರಿಯರ್ ಮುಗಿಯಿತೆಂದು ಹೇಳುವವರು ದೊಡ್ಡ ದಂಡೇ ಸಿದ್ದವಾಗಿತ್ತು. ಕ್ರಿಕೆಟ್ ಜಗತ್ತಿನ ಕಿಂಗ್.. ದಾಖಲೆಯನ್ನು ಬರೆಯುವುದು ಎಂದರೆ ಈತನಿಗೆ ನೀರು ಕುಡಿದಷ್ಟೇ ಸಲೀಸು. ಪ್ರತಿ ಬಾರಿಯೂ ಈತನ ಮೇಲೆ ಅಭಿಮಾನಿಗಳು ಶತಕವನ್ನು ನಿರೀಕ್ಷೆ ಮಾಡುವುದು. ಹೌದು. ಇದೆಲ್ಲಾ ಕಿಂಗ್ ಕೊಹ್ಲಿ ಬಗ್ಗೆ ಹೇಳುತ್ತಿರುವುದು.

Advertisement

ಕ್ರಿಕೆಟ್ ದೇವತೆ ಈತನ ಮೇಲೆ ಮುನಿಸಿಕೊಂಡಿದ್ದಳೋ? ಅಥವಾ ಗ್ರಹಚಾರ ಕೆಟ್ಟಿತ್ತೋ? ಕ್ರಿಕೆಟ್ ಬಾನಂಗಳದ ಸೂರ್ಯನಿಗೆ ಗ್ರಹಣ ಕಟ್ಟಿತ್ತು. ಅದೃಷ್ಟ ಕೈ ಕೊಟ್ಟಿತ್ತು. ಹಾಗಂತ ಕೊಹ್ಲಿ ಬ್ಯಾಟಿಂಗ್ ಕಳಪೆಯಾಗಿತ್ತು ಎಂದಲ್ಲ. ಶತಕ ಬಂದಿರಲಿಲ್ಲ ಅಷ್ಟೇ.

ಕೊಹ್ಲಿ ಮತ್ತೆ ಅದೆ ಹಳೆಯ ಖದರ್ ನಲ್ಲಿ ಫಾರ್ಮ್ ಗೆ ಬಂದಿದ್ದಾರೆ. ಕ್ರಿಕೆಟ್ ಸೂರ್ಯನಿಗೆ ಕವಿದಿದ್ದ ಗ್ರಹಣ ಕಳಚಿ ಬಿದ್ದಿದೆ. ಸಾವಿರ ದಿನಗಳ ನಂತರ ಶತಕ. 34 ತಿಂಗಳುಗಳ ನಂತರ ವಿರಾಟ್ ಕೊಹ್ಲಿ ಬ್ಯಾಟ್’ನಿಂದ ಶತಕ, 71ನೇ ಅಂತಾರಾಷ್ಟ್ರೀಯ ಶತಕ ಬಂದಿತ್ತು. ಅದು ಏಷ್ಯಾ ಕಪ್ ಟೂರ್ನಿಯ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಾಗಿತ್ತು.

ಸಾವಿರ ಮಾತುಗಳಿಗೆ ಕೊಟ್ಟ ಪ್ರತೀಕಾರ!

ಒಮ್ಮೆ ವಿರಾಟ್ ಕೊಹ್ಲಿ ಇದ್ದ ಸ್ಥಿತಿಯನ್ನು ನೆನಪಿಸಿಕೊಳ್ಳಿ. ನಾಯಕತ್ವದಿಂದ ಕೆಳಗಿಳಿಸಲಾಯ್ತು. ರನ್ ಬರ ಎದುರಿಸುತ್ತಿರುವವ ಎಂದು ಟೀಕೆ ಮಾಡಲಾಯ್ತು. ಕ್ರಿಕೆಟ್ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳಿತು ಎಂದು ಅರ್ಧಂಬರ್ಧ ತಿಳಿದ ಕ್ರಿಕೆಟ್ ಪಂಡಿತರ ಪುಕ್ಕಟೆ ಸಲಹೆ ಕೇಳಬೇಕಾಯ್ತು. ಸಾವಿರ ಮಾತುಗಳು ಬಂದಿದ್ದು ಕೊಹ್ಲಿ ಬ್ಯಾಟ್ ನಿಂದ ಶತಕ ಬರ್ತಿಲ್ಲ ಎಂಬುದಕ್ಕಾಗಿತ್ತು. ಈ ಸಾವಿರ ದಿನಗಳಲ್ಲಿ ನೀನು ಅನುಭವಿಸಿದ ನೋವು, ಯಾತನೆ, ಎದುರಿಸಿದ ಟೀಕೆ-ಟಿಪ್ಪಣಿ, ಎಲ್ಲವೂ ಇಲ್ಲಿಗೇ ಮುಗಿದು ಹೋಯಿತು. ಶತಕದ ಸೌಂಡ್ ವಿಶ್ವಕ್ಕೆ ಕೇಳಿದೆ. ಕಿವುಡನ ಕಿವಿಯಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳು ಬಡಿದ ಚಪ್ಪಾಳೆ ಸೌಂಡ್ ಗುಂಯ್ ಗುಡುತ್ತಿರಬೇಕು. ಕೊಹ್ಲಿಯ ಕೌಂಟರ್ ಹಾಗಿತ್ತು. ಲೇಟ್ ಆದರೂ ಲೇಟೆಸ್ಟ್ ಎಂಬಂತೆ ಸೆಂಚುರಿ ಬಂದಿತ್ತು.

Advertisement

ವಿರೋಧಿಗಳು ನಿನಗೆ ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸಿದರು. ಆದರೆ ನೀನು ಕುಗ್ಗಲಿಲ್ಲ. ಅವರು ಹೇಳಿದಂತೆ ನೀನು ಕೇಳಲಿ ಎಂದು ಬಗ್ಗಿಸಲು ನೋಡಿದರು ಆದರೆ ನೀನು ಅದಕ್ಕೂ ಬಗ್ಗಲಿಲ್ಲ. ನೀನು ಸಲಾಂ ಹೊಡೆಯಬಹುದು ಎಂದು ಭಾವಿಸಿದ್ದರು .ಆದರೆ ನೀನು ಸಲಾಂ ಹೊಡೆಯಲಿಲ್ಲ.. ನಿನ್ನನ್ನು ತುಳಿಯಲು ನೋಡಿದರು, ನೀನು ತುಳಿಸಿಕೊಳ್ಳಲಿಲ್ಲ.. ಬದಲಾಗಿ ನೀನು ಭುಜಕ್ಕೆ ಭುಜ ಕೊಟ್ಟು ನಿಲ್ಲುವವ ಹೊರತು ಒಳ ಮಾರ್ಗವನ್ನು ಅಥವಾ ವಾಮಮಾರ್ಗವನ್ನು ಬಳಸುವವನಲ್ಲ ಎನ್ನುವುದನ್ನು ತೋರಿಸಿಕೊಟ್ಟವ. ಒಬ್ಬ ಆಟಗಾರನನ್ನು ಮುಗಿಸಲು ಏನೆಲ್ಲ ಮಾಡಬೇಕೋ ಅಷ್ಟನ್ನೂ ಮಾಡಿದರು. ಆದರೆ ಅವರಿಗೆ ಗೊತ್ತಿಲ್ಲ, ನೀನು ಕ್ರಿಕೆಟನ್ನು ಎಷ್ಟು ಆರಾಧಿಸುತ್ತಿಯಾ ಎಂದು. ಅದೇ ಆರಾಧನೆ ನಿನ್ನ ಮತ್ತೆ ಪುಟಿದೆದ್ದು ಬರುವಂತೆ ಮಾಡಿದೆ..

ಕೌಶಲ್ಯದಲ್ಲಿ ವಿರಾಟ್ ಪರ್ಫೆಕ್ಟ್..

ಕ್ರಿಕೆಟನ್ನು ಪ್ರೀತಿಸುವ ಹಾಗೂ ಆರಾಧಿಸುವ ವ್ಯಕ್ತಿ ವಿರಾಟ್. ತನ್ನ ಕ್ರಿಕೆಟ್ ಮೇಲಿನ ಭಕ್ತಿಯನ್ನು ತೋರಿಸಲು ಯಾವತ್ತೂ ವಿರಾಟ್ ಮುಂದೆ ಇದ್ದಾರೆ. ವಿಶ್ವದ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಕೊಹ್ಲಿ ನಿಲ್ಲುತ್ತಾರೆ. ಕ್ರಿಕೆಟಿನ ಪಾಠಗಳನ್ನು ವಿನಮ್ರವಾಗಿ ಕಲಿತ ಅಪ್ಪಟ ವಿದ್ಯಾರ್ಥಿ ವಿರಾಟ್. ಕಷ್ಟದಲ್ಲಿ ಕಲಿತ ಕೊಹ್ಲಿ ಕೌಶಲ್ಯವನ್ನು ಚೆನ್ನಾಗಿ ರೂಢಿಸಿಕೊಂಡು ಬಂದವರು. ತನ್ನ ಕಮಿಟ್ಮೆಂಟ್ ನೂರಕ್ಕೆ ನೂರು ನೀಡಿ, ಮೈದಾನದಲ್ಲಿ ಪಾದರಸದಂತೆ ಚುರುಕಾಗಿ ಇರುವುದು ವಿರಾಟ್ ಕೊಹ್ಲಿಯ ವಿಶೇಷತೆ.

ಪ್ರತಿ ಪಂದ್ಯದಲ್ಲೂ ಶತಕದ ನಿರೀಕ್ಷೆ!

ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ದುನಿಯಾ ನೋಡುವ ರೀತಿಯೇ ಬೇರೆ. ಅಭಿಮಾನಿಗಳು ಇಡುವ ಭರವಸೆಯಿದೆ ಬೇರೆ. ಕೊಹ್ಲಿ ಪ್ರತಿ ಪಂದ್ಯದಲ್ಲೂ ಶತಕದ ಬಾರಿಸಬೇಕು. ತನ್ನ ಖದರ್ , ಅಗ್ರೆಸ್ಸಿವ್ ತೋರಿಸಬೇಕೆಂದು ನಿರೀಕ್ಷೆ ಇಡುತ್ತಾರೆ. ಆದರೆ ವಿರಾಟ್ ಸಹ ಒಬ್ಬ ಮನುಷ್ಯ ಎನ್ನುವುದನ್ನು ಮರೆತೆ ಬಿಡುತ್ತಾರೆ. ಅಷ್ಟೆ ಅಲ್ಲ ಎದುರಾಳಿ ತಂಡ ಸಹ ಗೆಲುವನ್ನು ಸಂಪಾದಿಸಲು ಹೋರಾಡುತ್ತಿರುತ್ತದೆ ಎನ್ನುವುದನ್ನ ನಾವು ಅಷ್ಟಾಗಿ ಯೋಚಿಸುವುದೇ ಇಲ್ಲ. ಕೊಹ್ಲಿ ಬ್ಯಾಟ್ ಸದಾ ಶತಕವನ್ನು ಸಿಡಿಸಿ ಆಕಾಶದತ್ತ ಮುಖಮಾಡಿ ನಿಲ್ಲಬೇಕು ಎಂದು ಯೋಚಿಸುತ್ತಿರುತ್ತಾರೆ. ವಾಸ್ತವವೇ ಬೇರೆ, ಕಲ್ಪನೆಯೇ ಬೇರೆ. ವಿರಾಟ್ ಶತಕ ಸಿಡಿಸಿರಲಿಲ್ಲ ಅನ್ನೋದನ್ನ ಬಿಟ್ಟರೆ ಆತನ ಸ್ಟ್ರೈಕ್ ರೇಟ್ ಆಗಲಿ , ಸರಾಸರಿ ಆಗಲಿ ಯಾವತ್ತೂ ಕಡಿಮೆ ಆಗಲಿಲ್ಲ. ಒಬ್ಬ ಉತ್ತಮ ಫಾರ್ಮ್ ನಲ್ಲಿರುವ ಆಟಗಾರನಿಗಿಂತ ಚೆನ್ನಾಗಿ ಕೊಹ್ಲಿಯ ಸರಾಸರಿ ಇತ್ತು. ಆದರೆ ಶತಕದ ಆಪಾದನೆ ಮಾತ್ರ ಕೊಹ್ಲಿ ಕೇಳಿಸಿಕೊಳ್ಳಬೇಕಾಯ್ತು.

ಸಚಿನ್ ದಾಖಲೆ ಮುರಿತಾರಾ ಕೊಹ್ಲಿ?

ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ದಾಖಲೆಯನ್ನು ಮುರಿಯುವ ತಾಕತ್ತು ಸದ್ಯದ ಪರಿಸ್ಥಿತಿಯಲ್ಲಿ ಕೊಹ್ಲಿ ಬಳಿ ಮಾತ್ರ. ಶತಕದ ದಾಖಲೆ ಆಗಿರಬಹುದು ಇಲ್ಲಾ ಅತಿ ಹೆಚ್ಚು ರನ್ ಗಳಿಸಿದ್ದಾಗಿರಬಹುದು. ವಿರಾಟ್ ಅಬ್ಬರಿಸಲು ಪ್ರಾರಂಭಿಸಿದರೆ ಎದುರಾಳಿ ಕಥೆ ಮುಗಿದಂತೆ. ಕೊಹ್ಲಿ ಅಂಕಿ ಅಂಶಗಳನ್ನು ಗಮನಿಸಿದರೆ ಎಲ್ಲಾ ಅಂದುಕೊಂಡಂತೆ ಆಗಬಹುದು. 71 ಶತಕ ಬಾರಿಸಿರುವ ಕಿಂಗ್ ಕೊಹ್ಲಿ ತಮ್ಮ ಫಾರ್ಮ್ ಮುಂದುವರಿಸಿಕೊಂಡು ಹೋದರೆ ಹೊಸ ಇತಿಹಾಸ ಬರೆಯುವುದು ನಿಚ್ಚಳ. ಅತಿ ಹೆಚ್ಚು ಅನ್ನುವ ಅಂಕಿ ಅಂಶ ಬಂದಾಗ ಕೊಹ್ಲಿ ನಂಬರ್ 1 ಆಗಿರುತ್ತಾರೆ. ಟಿ-20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಅರ್ಧಶತಕ, ಅತೀ ಹೆಚ್ಚು ಚುಟುಕು ಕ್ರಿಕೆಟ್ ರನ್, ನೂರಕ್ಕೂ ಅಧಿಕ ಸಿಕ್ಸರ್, ಏಷ್ಯಾ ಕಪ್ ಟೂರ್ನಿ 2022ಯಲ್ಲಿ ಗರಿಷ್ಠ ಸ್ಕೋರರ್.. ಕೊಹ್ಲಿ ಅಂದರೆ ಹಾಗೆ ಅಷ್ಟೊಂದು ಕಮಿಟ್ಮೆಂಟ್, ಕ್ಲಾಸ್ , ಕನ್ಸಿಸ್ಟೆನ್ಸಿ..

2008 ರಲ್ಲಿ 0 ಶತಕ, 2009ರಲ್ಲಿ ಒಂದು ಶತಕ, 2010 ರಲ್ಲಿ 3 ಶತಕ, 2011 ರಲ್ಲಿ 4 ಶತಕ, 2012 ರಲ್ಲಿ 8, 2013 ರಲ್ಲಿ 6, 2014 ರಲ್ಲಿ 8, 2015ರಲ್ಲಿ 4, 2016ರಲ್ಲಿ 7, 2017 ರಲ್ಲಿ 11, 2018 ರಲ್ಲಿ 11, 2019 ರಲ್ಲಿ 7, 2020 ಹಾಗೂ 2021 ರಲ್ಲಿ 0, 2022ರಲ್ಲಿ 1 ಶತಕವನ್ನು ಬಾರಿಸಿ ಮುನ್ನುಗ್ಗುತ್ತಿದ್ದಾರೆ. ಕೊಹ್ಲಿಯ ಬ್ಯಾಟಿಂಗ್ ಟ್ರ್ಯಾಕ್ ರೆಕಾರ್ಡ್ ನೋಡಿದರೆ ಆತನ ಬ್ಯಾಟಿಂಗ್ ವೈಭವ ಹೇಗಿದೆಯೆಂದು ತಿಳಿಯುತ್ತದೆ. ಇತ್ತೀಚಿನ ಎರಡು ವರ್ಷ ಕೊಹ್ಲಿ ಶತಕವನ್ನು ಬಾರಿಸಿಲ್ಲ ಅನ್ನೋದನ್ನ ಬಿಟ್ಟರೆ, ವಿರಾಟ್ ಭಾರತ ಕ್ರಿಕೆಟ್ ಗೆ ಯಾವತ್ತೂ ಮೋಸ ಮಾಡಿಲ್ಲ.

ವಿರಾಟ್ ಕೊಹ್ಲಿ ಅನ್ನುವ ಮಿಂಚು ಭಾರತೀಯ ಕ್ರಿಕೆಟ್ ಗೆ ವಿದ್ಯುತ್ ಸಂಚಾರವನ್ನು ಮಾಡುತ್ತಲೇ ಬಂದಿದೆ. ಕೊಹ್ಲಿ ನಾಯಕತ್ವದಲ್ಲಿ ದೊಡ್ಡ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಆದರೆ ವಿದೇಶಿ ನೆಲದಲ್ಲಿ ಗೆಲುವನ್ನು ಸಾಧಿಸುವ ಕಲೆಯನ್ನು ಕಲಿಸಿದ್ದು ಕೊಹ್ಲಿಯ ನಾಯಕತ್ವ ಆಗಿತ್ತು. ರವಿಶಾಸ್ತ್ರಿ ಹಾಗೂ ಕೊಹ್ಲಿ ಕಾಂಬಿನೇಷನ್ ಭಾರತ ಕ್ರಿಕೆಟ್ ನಲ್ಲಿ ಸಂಚಲನವನ್ನು ಮೂಡಿಸಿತ್ತು. ಟೆಸ್ಟ್, ಏಕದಿನ ಹಾಗೂ ಟಿ-20 ಮೂರು ಫಾರ್ಮೆಟ್ ನಲ್ಲಿ ತನ್ನ ಛಾಪನ್ನು ಮೂಡಿಸಿದೆ ಕಲಿ ಅಂದ್ರೆ ಅದು ವಿರಾಟ್.

ಇದೀಗ ಟಿ-20 ವಿಶ್ವಕಪ್ ಟೂರ್ನಿ ಬಂದಿದೆ. ಕೊಹ್ಲಿ ಫಾರ್ಮ್ ಗೆ ಬಂದಿರೋದು ಟೀಂ ಇಂಡಿಯಾ ಮಟ್ಟಿಗೆ ಆನೆಬಲ ಬಂದಂತಾಗಿದೆ. ಓಪನಿಂಗ್ ಅಥವಾ ವನ್ಡೌನ್ ಸ್ಥಾನದಲ್ಲಿ ವಿರಾಟ್ ಬ್ಯಾಟ್ ಬೀಸುತ್ತಾರೆ. ವಿರಾಟ್ ಫಾರ್ಮ್ ವಿಶ್ವಕಪ್ ಟೂರ್ನಿಯಲ್ಲಿ ಮಹತ್ತರ ಪಾತ್ರವನ್ನು ನಿಭಾಯಿಸುತ್ತದೆ.

ವಿರಾಟ್ ಇಷ್ಟವಾಗಲು ಸಾವಿರ ಸಾವಿರ ಕಾರಣಗಳಿವೆ. ಆದರೆ ಯಾವುದೇ ದಾಖಲೆಗಳಿಗೋಸ್ಕರ ಕೊಹ್ಲಿ ಆಡಿದವನಲ್ಲ. ಆತನ ಆಟದಲ್ಲಿ ಯಾವ ಅಜೆಂಡಾವೂ ಇಲ್ಲ. ಇರುವುದೊಂದೇ ಅಜೆಂಡಾ, ತಂಡವನ್ನು ಗೆಲ್ಲಿಸಬೇಕೆಂಬ ಅಜೆಂಡಾ ಅಷ್ಟೇ. ಆತ ಗ್ರೇಟ್, ಗ್ರೇಟೆಸ್ಟ್..

ಪ್ರಸಾದ್ ಹೆಗಡೆ

ನಗರೆ, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next