Advertisement

ಕಿಂಡಿ ಅಣೆಕಟ್ಟು ರಕ್ಷಣ ತಡೆಗೋಡೆ ಕಾಮಗಾರಿ ಚುರುಕು

09:53 PM Apr 30, 2020 | Sriram |

ಬೆಳ್ತಂಗಡಿ: ಕಳೆದ ಮಳೆಗಾಲ ದಲ್ಲಿ ನೇತ್ರಾವತಿ ನದಿಯ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿದ್ದ ಧರ್ಮಸ್ಥಳದ ಸ್ನಾನಘಟ್ಟ ಸಮೀಪದ ಕಿಂಡಿ ಅಣೆಕಟ್ಟು ತಡೆಗೋಡೆ ಕಾಮಗಾರಿ ಆರಂಭಗೊಂಡಿದೆ.

Advertisement

ಮುಖ್ಯಮಂತ್ರಿ ವಿಕೋಪ ಪರಿಹಾರ ನಿಧಿಯ ಅನುದಾನದಡಿ 2 ಕೋ.ರೂ. ಬಿಡುಗಡೆಯಾಗಿದ್ದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿ ಕೈಗೆತ್ತಿಕೊಂಡಿದೆ.

ಮಳೆಗಾಲಕ್ಕೂ ಮುನ್ನ ಕಾಮಗಾರಿ ಮುಗಿಸಲೇಬೇಕಾಗಿರುವ ಅನಿವಾರ್ಯ ದಿಂದ ಮೇ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಸಹಿತ ಗ್ರಾ.ಪಂ. ವ್ಯಾಪ್ತಿಗೆ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನಿಂದಲೇ ಪ್ರತಿನಿತ್ಯ ಕುಡಿಯುವ ನೀರನ್ನು ಅವಲಂಬಿಸಿದೆ.

ಜ. 2020ರಲ್ಲಿ ಟೆಂಡರ್‌ ಕರೆದಿದ್ದು, ಫೆ.ಯಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ 20 ದಿವಸ ಕಾಮಗಾರಿ ವಿಳಂಬವಾಗಿದ್ದು, ಪ್ರಸಕ್ತ ಅಗತ್ಯ ಕಾಮಗಾರಿಗಳಿಗೆ ಸರಕಾರ ಅನುಮತಿ ನೀಡಿರುವುದರಿಂದ ಮತ್ತೆ ಕಾಮಗಾರಿ ಆರಂಭಿಸಲಾಗಿದೆ.

Advertisement

6 ಮೀ. ಎತ್ತರ ಹಾಗೂ 60 ಮೀಟರ್‌ ಉದ್ದದ (28 ಅಡಿ ಎತ್ತರ ಹಾಗೂ 196.8 ಅಡಿ ಉದ್ದ) ತಡೆಗೋಡೆ ರಚನೆಯಾಗುತ್ತಿದೆ. ಗೋಡೆ ನಿರ್ಮಾಣ ಬಳಿಕ ಸ್ನಾನಘಟ್ಟದ ಸುತ್ತಮುತ್ತ ಇಂಟರ್‌ ಲಾಕ್‌ ಅಳವಡಿಕೆ ಒಳಚರಂಡಿ ಕಾಮಗಾರಿ ಹಂತ ಹಂತವಾಗಿ ಪೂರ್ಣಗೊಳ್ಳಲಿದೆ.

ಧರ್ಮಸ್ಥಳ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ 400 ಮಿ.ಲೀ. ನೀರು ಸಂಗ್ರಹವಾಗುತ್ತಿದ್ದು, 3 ತಿಂಗಳ ಬೇಸಗೆ ಅವಧಿಗೆ ಸಾಕಾಗುವಷ್ಟು ನೀರು ಶೇಖರಣೆಗೊಳ್ಳು ತ್ತದೆ. ಕೇವಲ ಧರ್ಮಸ್ಥಳ ಕ್ಷೇತ್ರ ಒಂದಕ್ಕೆ ಇದರಿಂದ ಪ್ರತಿನಿತ್ಯ ಯಾತ್ರಾರ್ಥಿಗಳ ದೈನಂದಿನ ಕಾರ್ಯಕ್ಕಾಗಿ 30 ಲಕ್ಷ ಲೀಟರ್‌ ಬಳಕೆಯಾಗುತ್ತಿದೆ. ಕಳೆದ ಬೇಸಗೆಯಲ್ಲಿ ಕಿಂಡಿ ಅಣೆಕಟ್ಟು ನೀರು ಬರಿದಾಗಿ ಆತಂಕ ಮೂಡಿಸಿತ್ತು. ಪ್ರಸಕ್ತ ಕೋವಿಡ್‌-19
ದಿಂದಾಗಿ ಯಾತ್ರಾರ್ಥಿಗಳು ಇಲ್ಲದಿರುವುದರಿಂದ ನೀರಿನ ಕೊರತೆ ಕಂಡುಬಂದಿಲ್ಲ.

ಶೀಘ್ರವೇ ಕಾಮಗಾರಿ ಪೂರ್ಣ
ನಾಡಿನ ಪವಿತ್ರ ನದಿ ಹಾಗೂ ಪುಣ್ಯ ಕ್ಷೇತ್ರ ಧರ್ಮಸ್ಥಳ ಯಾತ್ರಾರ್ಥಿಗಳ ಅನುಕೂಲ ದೃಷ್ಟಿಯಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮನವಿ ಮೇರೆಗೆ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಹರೀಶ್‌ ಪೂಂಜ, ಶಾಸಕರು ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next