Advertisement
ಶನಿವಾರ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಕೇಂದ್ರ ಸಮಿತಿ ಸಭೆಯಲ್ಲಿ ಮಾತನಾಡಿದ ಕಿಮ್, “ಕ್ಷಿಪಣಿ, ಅಣ್ವಸ್ತ್ರಗಳ ಪರೀಕ್ಷೆಯನ್ನು ಇಲ್ಲಿಗೇ ಸ್ಥಗಿತಗೊಳಿಸುತ್ತೇನೆ. ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷಾ ಕೇಂದ್ರದ ಅಗತ್ಯ ಇನ್ನು ಎದುರಾಗದು’ ಎಂದು ಹೇಳಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್, “ಇದು ಉತ್ತರ ಕೊರಿಯಾ ಮತ್ತು ಇಡೀ ಜಗತ್ತಿಗೆ ಸಿಹಿ ಸುದ್ದಿ. ಅತಿದೊಡ್ಡ ಯಶಸ್ಸು. ನಮ್ಮ ಮಾತುಕತೆಗಾಗಿ ಎದುರು ನೋಡುತ್ತಿದ್ದೇನೆ,’ ಎಂದು ಹೇಳಿದ್ದಾರೆ. ದಕ್ಷಿಣ ಕೊರಿಯಾ ಕೂಡ ಸಂತಸ ವ್ಯಕ್ತಪಡಿಸಿದ್ದು, ಕೊರಿಯಾ ಪರ್ಯಾಯ ದ್ವೀಪವನ್ನು ಅಣ್ವಸ್ತ್ರರಹಿತವಾಗಿಸುವಲ್ಲಿ ಇದು ಅರ್ಥಪೂರ್ಣ ಹೆಜ್ಜೆ ಎಂದು ಬಣ್ಣಿಸಿದೆ. ಚೀನಾ, ಐರೋಪ್ಯ ಒಕ್ಕೂಟ, ಜಪಾನ್ ಕೂಡ ಇದನ್ನು ಸ್ವಾಗತಿಸಿವೆ.
ಕಳೆದ ವರ್ಷ ಕಿಮ್ ಜಾಂಗ್ 6 ಅಣ್ವಸ್ತ್ರ ಪರೀಕ್ಷೆ, ನಿರಂತರ ಕ್ಷಿಪಣಿ ಪರೀಕ್ಷೆಗಳ ಮೂಲಕ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದರು. ಯಾವ ಒತ್ತಡಕ್ಕೂ ಬಗ್ಗದ ಹಿನ್ನೆಲೆಯಲ್ಲಿ ಉ.ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ, ಅಮೆರಿಕ, ಐರೋಪ್ಯ ಒಕ್ಕೂಟ, ದಕ್ಷಿಣ ಕೊರಿಯಾ ಮತ್ತಿತರ ದೇಶಗಳು ನಿರ್ಬಂಧವನ್ನೂ ಹೇರಿದ್ದವು. ಟ್ರಂಪ್ ಮತ್ತು ಕಿಮ್ ಟ್ವಿಟರ್‌ನಲ್ಲೇ ಬೈದಾಡಿಕೊಂಡಿದ್ದಲ್ಲದೆ, ಪರಸ್ಪರ ಸಮರ ಸಾರುವ ಬೆದರಿಕೆಯನ್ನೂ ಹಾಕಿದ್ದರು. ಶನಿವಾರದ ಘೋಷಣೆಯಿಂದಾಗಿ ಈ ಎಲ್ಲ ಪ್ರಕ್ಷುಬ್ಧತೆಯೂ ಇದೀಗ ತಣ್ಣಗಾದಂತಾಗಿದೆ.