Advertisement

ಕಿದು: ಮೊದಲೇ ನಡೆದಿತ್ತು ಸ್ಥಳಾಂತರ, ಮುಚ್ಚುವ ಸಂಚು!

01:40 PM Dec 01, 2018 | Team Udayavani |

ಸುಬ್ರಹ್ಮಣ್ಯ: ಕಿದು ಸಿಪಿಸಿಆರ್‌ಐ ಕೇಂದ್ರ ಪ್ರಾದೇಶಿಕ ಕೇಂದ್ರವಾಗಿ ಮೇಲ್ದರ್ಜೆಗೇರುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಉನ್ನತ ಮಟ್ಟ ಅಧಿಕಾರಿಗಳ ಅಸಡ್ಡೆಯಿಂದ ಅದು ಮುಚ್ಚುವ ಹಂತಕ್ಕೆ ತಲುಪಿರುವುದಕ್ಕೆ ಕೃಷಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

Advertisement

ವಿಶ್ವದ 5 ತೆಂಗು ವಂಶಾಭಿವೃದ್ಧಿ ಬ್ಯಾಂಕ್‌ ಗಳಲ್ಲಿ ಒಂದಾಗಿರುವ ಕಿದು ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನ ಕೇಂದ್ರ ವಾರ್ಷಿಕ 1.2 ಕೋಟಿ ರೂ. ಲಾಭಗಳಿಸುತ್ತಿದೆ. 300 ಎಕ್ರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ 30 ವರ್ಷಗಳ ಅವಧಿಗೆ ಲೀಸ್‌ಗೆ ಪಡೆದು, ಅಡಿಕೆ, ತೆಂಗು ಮತ್ತು ಕೊಕ್ಕೋ ಗಿಡ ಬೆಳೆಸಿ, ಸಂಶೋಧನೆ ಮಾಡುತ್ತಿದೆ. 46 ವರ್ಷಗಳ ಕೇಂದ್ರವನ್ನು ನಿರಂತರವಾಗಿ ಅವಗಣನೆ ಮಾಡಲಾಗುತ್ತಿದೆ. ಕಟ್ಟಡಗಳು ಶಿಥಿಲ ಸ್ಥಿತಿಯಲ್ಲಿವೆ.

ಕಿದು ಕೇಂದ್ರದಲ್ಲಿ 70ರ ಬದಲು 30 ಸಿಬಂದಿ ಮಾತ್ರ ಇದ್ದಾರೆ. ನಿವೃತ್ತರಾದ ಅಧಿಕಾರಿಗಳ ಹುದ್ದೆಗಳಿಗೆ ಮರುನೇಮಕ ಆಗಿಲ್ಲ. ಖಾಯಂ ಕೃಷಿ ವಿಜ್ಞಾನಿ ಕೂಡ ಇಲ್ಲಿಲ್ಲ. ಸಂಶೋಧನ ಕೇಂದ್ರವೀಗ ಪ್ರಾದೇಶಿಕ ಕೇಂದ್ರದ ಹಂತ ತಲುಪಿದೆ. ಕಾಸರಗೋಡು ಸಿಪಿಸಿಆರ್‌ಐನಲ್ಲಿ 60 ವಿಜ್ಞಾನಿಗಳಿದ್ದಾರೆ. ಇಲ್ಲಿಗೆ ಒಬ್ಬರನ್ನೂ ನೇಮಿಸಿಲ್ಲ.

ಲೀಸ್‌ ಅವಧಿ 2000ನೇ ಇಸವಿಗೆ ಮುಗಿದಿದ್ದರೂ ನವೀಕರಣಕ್ಕೆ ಅಧಿಕಾರಿಗಳು ಉತ್ಸಾಹ ತೋರಿಲ್ಲ. ಕೇಂದ್ರದ ಅಗತ್ಯಗಳನ್ನು ಪೂರೈಸಿ, ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲೂ ಸಮರ್ಥ ವಾದ ಮಂಡಿಸಿಲ್ಲ. ಕೇಂದ್ರವನ್ನು ಸ್ಥಳಾಂತರಿಸುವ ಅಥವಾ ಖಾಯಂ ಆಗಿ ಮುಚ್ಚುವ ಸಂಚು ಹಲವು ವರ್ಷಗಳಿಂದಲೇ ನಡೆಯುತ್ತಿದೆ ಎಂಬ ಶಂಕೆಗೆ ಈ ಅಂಶಗಳು ಪೂರಕವಾಗಿವೆ.

ಮುಖ್ಯಮಂತ್ರಿ, ಸಂಸದರ ಭೇಟಿ
ಭಾರತೀಯ ಕೃಷಿ ಸಂಶೋಧನ ಕೌನ್ಸಿಲ್‌ನ ಪುನರ್‌ ಪರಿಶೋಧನ ಸಮಿತಿ ನಿರ್ಧಾರದ ಹಿನ್ನೆಲೆಯಲ್ಲಿ ಮುಚ್ಚುಗಡೆ ಭೀತಿ ಎದುರಿಸುತ್ತಿರುವ ಕೇರಳದ ಕಾಯಂಕುಳ ಸಂಶೋಧನ ಕೇಂದ್ರ ಉಳಿಸಿಕೊಳ್ಳಲು ಕೇರಳದ ಸಂಸದರು ಕೃಷಿ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ನಮ್ಮ ಜಿಲ್ಲೆಯ ಸಂಸದರು, ರಾಜ್ಯ ಸರಕಾರ ಇನ್ನೂ ಈ ಕುರಿತು ಎಚ್ಚರ ವಹಿಸಿಲ್ಲ. ಗುರುವಾರ ಕೃಷಿಕರ ನಿಯೋಗ ಮುಖ್ಯಮಂತ್ರಿಗಳು, ರಾಜ್ಯದ ಸಂಸದರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದೆ.

Advertisement

ಹೋರಾಟಕ್ಕೆ ಸಿದ್ಧತೆ
ಕೃಷಿ ಸಂಶೋಧನೆಯ ಕೇಂದ್ರಕ್ಕೆ ಸಂಚಕಾರ ಬಂದಿರುವುದು ಕೃಷಿ ಕ್ಷೇತ್ರಕ್ಕೆ ಭಾರೀ ಹಿನ್ನಡೆ. ಇದರ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ.
-ಕಿಶೋರ್‌ ಶಿರಾಡಿ
ಅಧ್ಯಕ್ಷ ಮಲೆನಾಡು ರೈತ ಹಿತರಕ್ಷಣ ವೇದಿಕೆ

ಕಿದು ಫಾರ್ಮ್ ಉಳಿಸಲು ಖಾದರ್‌ಗೆ ಮನವಿ
ಕಡಬ:
ಬಿಳಿನೆಲೆ ಗ್ರಾಮದ ನೆಟ್ಟಣ ಸಿಪಿಸಿಆರ್‌ಐ (ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ) ಕಿದು ಫಾರ್ಮ್ ಮುಚ್ಚುಗಡೆಯಾಗಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿದ ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ನೇತೃತ್ವದ ನಿಯೋಗ ಮನವಿ ನೀಡಿತು.

ಬಿಳಿನೆಲೆ ಗ್ರಾ.ಪಂ. ಸದಸ್ಯರಾದ ಮನೋಜ್‌ ಕುಮಾರ್‌, ಸತೀಶ್‌ ಕಳಿಗೆ, ಎಂಜಿನಿಯರ್‌ ಶಿವಶಂಕರ್‌ ನಿಯೋಗದಲ್ಲಿದ್ದರು. ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ದಿನೇಶ್‌, ತಾ.ಪಂ. ಸದಸ್ಯ ಫ‌ಝಲ್‌ ಕೋಡಿಂಬಾಳ, ಕಾಂಗ್ರೆಸ್‌ ಮುಖಂಡ ತೋಮಸ್‌ ಇಡೆಯಾಳ ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ಉಸ್ತುವಾರಿ ಸಚಿವರು ಈ ಬಗ್ಗೆ ಸಂಸದ ನಳಿನ್‌ ಕುಮಾರ್‌ ಹಾಗೂ ಕೇಂದ್ರ ಕೃಷಿ ಸಚಿವರ ಜತೆ ಈ ಚರ್ಚಿಸುವುದಾಗಿ ತಿಳಿಸಿದರು.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next