ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಯುವಕನೊಬ್ಬನನ್ನು ಅಪಹರಿಸಿದ ಆರೋಪದ ಮೇರೆಗೆ ಕನ್ನಡಪರ ಸಂಘಟನೆ ಅಧ್ಯಕ್ಷ ಪ್ರಕಾಶ್ ಸೇರಿ ಆರು ಮಂದಿ ವಿರುದ್ಧ ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪ್ರಕಾಶ್, ಕನ್ನಡ ಪರ ಸಂಘಟನೆಯ ಐದು ಮಂದಿ ಮಹಿಳಾ ಕಾರ್ಯಕರ್ತೆಯರ ಜತೆ ಸೇರಿ ಮೇ ತಿಂಗಳಲ್ಲಿ ಶಂಕರಮಠದ ಬಳಿ ಮಂಜು ನಾಥ್ ಎಂಬುವರನ್ನು ಅಪಹರಿಸಿದ್ದ. ಖಾಸಗಿ ಬ್ಯಾಂಕ್ ಉದ್ಯೋಗಿಯಾದ ಮಂಜುನಾಥ್, ಹನುಮಂತನಗರದ ಮಂಜುಳಾ ಎಂಬುವರ ಬಳಿ 8 ಲಕ್ಷ ರೂ. ಸಾಲ ಪಡೆದಿದ್ದರು. ನಂತರ 5 ಲಕ್ಷ ರೂ. ಹಿಂದಿರುಗಿಸಿದ್ದ ಅವರು, ಬಾಕಿ 3 ಲಕ್ಷ ರೂ.ಗೆ ಮಂಜು ಳಾಗೆ ಚೆಕ್ ಕೊಟ್ಟಿದ್ದರು. ಆದರೆ, ಆ ಚೆಕ್ ಬೌನ್ಸ್ ಆಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.
ಚೆಕ್‌ಬೌನ್ಸ್ ಆದ ಹಿನ್ನೆಲೆಯಲ್ಲಿ ಮಂಜುಳಾ, ಕನ್ನಡ ಪರ ಸಂಘಟನೆ ಅಧ್ಯಕ್ಷ ಪ್ರಕಾಶ್‌ನನ್ನು ಭೇಟಿಯಾಗಿ ಮಂಜುನಾಥ್‌ನಿಂದ ಬಾಕಿ ಹಣ ವಸೂಲಿ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಬಳಿಕ ಪ್ರಕಾಶ್, ಮಂಜುನಾಥ್‌ನನ್ನು ಅಪಹರಿಸಿ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದ. ಆ ಸಂಚಿನಂತೆ ತನ್ನ ಸಂಘಟನೆಯ ಕಾರ್ಯಕರ್ತೆಯರಿಂದ ಮಂಜುನಾಥ್‌ಗೆ ಕರೆ ಮಾಡಿಸಿದ್ದ. ಕೊರಿಯರ್ ಬಂದಿರುವುದಾಗಿ ಕಾರ್ಯಕರ್ತೆಯರಿಂದ ಮಂಜುನಾಥ್‌ಗೆ ಸುಳ್ಳು ಹೇಳಿಸಿ, ಶಂಕರಪುರಕ್ಕೆ ಕರೆಸಿಕೊಂಡು ಅಪಹರಿಸಿದ್ದ. ಘಟನಾ ಸ್ಥಳದಲ್ಲಿನ ಸಿಸಿ ಕ್ಯಾಮೆರಾದಲ್ಲಿ ಅಪಹರಣದ ದೃಶ್ಯ ಸೆರೆಯಾಗಿದೆ.
ಅಪಹರಣದ ಬಳಿಕ ಮಂಜುನಾಥ್‌ನನ್ನು ಬಾಪೂಜಿನಗರದಲ್ಲಿರುವ ಪ್ರಕಾಶ್‌ನ ಕಚೇರಿಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು. ಪ್ರಕಾಶ್, ಮಂಜುನಾಥ್‌ಗೆ ಸೇರಿದ ಆಸ್ತಿಯ ದಾಖಲೆಪತ್ರ ಕಿತ್ತುಕೊಂಡಿದ್ದ. ಈ ಸಂಬಂಧ ಮಂಜುನಾಥ್ ದೂರು ನೀಡಿದ್ದು, ಪ್ರಕಾಶ್ ಮತ್ತು ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪರಾಧ ಹಿನ್ನೆಲೆಯುಳ್ಳ ಪ್ರಕಾಶ್ ವಿರುದ್ಧ ಕೊಲೆ ಯತ್ನ, ಬಸ್‌ಗಳಿಗೆ ಬೆಂಕಿ ಹಚ್ಚಿದ, ದೊಂಬಿ ಸೇರಿ ಈ ಹಿಂದೆಯೇ ಏಳೆಂಟು ಪ್ರಕರಣ ದಾಖಲಾಗಿದ್ದವು. ಅಲ್ಲದೆ, ಬ್ಯಾಟರಾಯನಪುರ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರಿದೆ ಎಂದು ಪೊಲೀಸರು ಹೇಳಿದರು.